Vivek Agnihotri: ದೆಹಲಿ ಹೈಕೋರ್ಟ್ನಲ್ಲಿ ಬೇಷರತ್ ಕ್ಷಮೆ ಯಾಚಿಸಿದ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ
Vivek Agnihotri | Delhi High Court: 2023ರ ಮಾರ್ಚ್ 16ರಂದು ಮುಂದಿನ ವಿಚಾರಣೆ ನಡೆಯಲಿದೆ. ಅಂದು ಖುದ್ದಾಗಿ ವಿವೇಕ್ ಅಗ್ನಿಹೋತ್ರಿ ಹಾಜರಿರಬೇಕು ಎಂದು ದೆಹಲಿ ಹೈಕೋರ್ಟ್ ಆದೇಶಿಸಿದೆ.
ಖ್ಯಾತ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಸಮಾಜದ ಅನೇಕ ಆಗುಹೋಗುಗಳಿಗೆ ಪ್ರತಿಕ್ರಿಯಿಸುತ್ತಾರೆ. ಇದರಿಂದಾಗಿ ಅವರು ವಿವಾದ ಮಾಡಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಈ ಹಿಂದೆ ಅವರು ಮಾಡಿದ್ದ ಒಂದು ಟ್ವೀಟ್ನಿಂದಾಗಿ ನ್ಯಾಯಾಂಗ ನಿಂದನೆ (Contempt of Court) ಆರೋಪ ಎದುರಾಗಿತ್ತು. ಈ ಪ್ರಕರಣದಲ್ಲಿ ಅವರೀಗ ದೆಹಲಿ ಹೈಕೋರ್ಟ್ನಲ್ಲಿ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ತಮ್ಮ ವಕೀಲರ ಪರವಾಗಿ ಅವರು ಅಫಿಡವಿಟ್ ಸಲ್ಲಿಸಿದ್ದಾರೆ. ಆದರೆ ಈ ಪ್ರಕರಣದ ಅಂತಿಮ ವಿಚಾರಣೆಯ ಸಮಯದಲ್ಲಿ ವಿವೇಕ್ ಅಗ್ನಿಹೋತ್ರಿ ಅವರು ಖುದ್ದು ಹಾಜರಾಗಬೇಕು ಎಂದು ನ್ಯಾಯಾಲಯ (Delhi High Court) ಸೂಚಿಸಿದೆ ಎಂದು ವರದಿ ಆಗಿದೆ.
ಏನಿದು ಪ್ರಕರಣ?
2018ರ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ಗೌತಮ್ ನವಲಖ ಅವರಿಗೆ ಈ ಹಿಂದೆ ಜಾಮೀನು ನೀಡಲಾಗಿತ್ತು. ಅಂದಿನ ನ್ಯಾಯಮೂರ್ತಿಗಳಾದ ಎಸ್. ಮುರಳೀಧರ್ ಅವರ ಮೇಲೆ ಪಕ್ಷಪಾತದ ಆರೋಪ ಹೊರಿಸುವ ರೀತಿಯಲ್ಲಿ ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದರು. ಈ ಸಂಬಂಧವಾಗಿ ನ್ಯಾಯಾಲಯವು ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿಕೊಂಡಿತ್ತು.
ತಾವು ಮಾಡಿದ್ದ ಟ್ವೀಟ್ ಅನ್ನು ವಿವೇಕ್ ಅಗ್ನಿಹೋತ್ರಿ ಡಿಲೀಟ್ ಮಾಡಿದ್ದಾರೆ ಎಂದು ಅವರ ಪರ ವಕೀಲರು ವಾದಿಸಿದ್ದಾರೆ. ಆದರೆ ಅದನ್ನು ಡಿಲೀಟ್ ಮಾಡಿದ್ದು ವಿವೇಕ್ ಅಗ್ನಿಹೋತ್ರಿ ಅಲ್ಲ, ಬದಲಿಗೆ ಟ್ವಿಟರ್ ಸ್ವತಃ ಅದನ್ನು ಡಿಲೀಟ್ ಮಾಡಿತ್ತು ಎಂದು ನ್ಯಾಯಾಲಯದ ಪರ ವಕೀಲರು ವಾದಿಸಿದ್ದಾರೆ. ವಿವೇಕ್ ಅಗ್ನಿಹೋತ್ರಿ ಅವರು ಯಾಕೆ ಖುದ್ದಾಗಿ ವಿಚಾರಣೆಗೆ ಹಾಜರಾಗಿಲ್ಲ ಎಂದು ನ್ಯಾಯಾಲಯ ಕಾರಣ ಕೇಳಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2023ರ ಮಾರ್ಚ್ 16ರಂದು ಮುಂದಿನ ವಿಚಾರಣೆ ನಡೆಯಲಿದೆ. ಅಂದು ಖುದ್ದಾಗಿ ವಿವೇಕ್ ಅಗ್ನಿಹೋತ್ರಿ ಅವರು ಹಾಜರಿರಬೇಕು ಎಂದು ಕೋರ್ಟ್ ಆದೇಶಿಸಿದೆ. ಅಂದು ತಮ್ಮ ಪರವಾದ ಎಲ್ಲ ಸಾಕ್ಷ್ಯಗಳನ್ನು ಒದಗಿಸಬೇಕು ಎಂದು ಸೂಚಿಸಿದೆ.
ಇದನ್ನೂ ಓದಿ: Vivek Agnihotri: ‘ಸತ್ಯ ಅಲ್ಲ ಅಂತ ಸಾಬೀತಾದ್ರೆ ಸಿನಿಮಾ ಮಾಡೋದು ಬಿಟ್ಟು ಬಿಡ್ತೀನಿ’; ವಿವೇಕ್ ಅಗ್ನಿಹೋತ್ರಿ ಸವಾಲು
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶನ ಮಾಡಿದ ಬಳಿಕ ವಿವೇಕ್ ಅಗ್ನಿಹೋತ್ರಿ ಅವರ ಖ್ಯಾತಿ ಹೆಚ್ಚಾಗಿದೆ. ಕಡಿಮೆ ಬಜೆಟ್ನಲ್ಲಿ ಸಿದ್ಧಗೊಂಡ ಆ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಬರೋಬ್ಬರಿ 250 ಕೋಟಿ ರೂಪಾಯಿಗಿಂತಲೂ ಅಧಿಕ ಕಲೆಕ್ಷನ್ ಮಾಡಿತು. ಅಲ್ಲದೇ ದೇಶಾದ್ಯಂತ ಚರ್ಚೆ ಹುಟ್ಟುಹಾಕಿತು.
ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪತ್ನಿ ಪಲ್ಲವಿ ಜೋಶಿ ಹಿನ್ನೆಲೆ ಏನು? ಇಲ್ಲಿದೆ ಅವರ ಲವ್ಸ್ಟೋರಿ
ಪ್ರತಿ ಬಾರಿಗೂ ವಿವೇಕ್ ಅಗ್ನಿಹೋತ್ರಿ ಅವರು ತಮ್ಮ ಸಿನಿಮಾಗೆ ವಿಶೇಷ ವಸ್ತುವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಅವರು ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಕುರಿತು ತೋರಿಸಿದ್ದರು. ಅವರ ಮುಂದಿನ ಸಿನಿಮಾ ವ್ಯಾಕ್ಸಿನ್ ಕುರಿತಾಗಿ ಇರಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.