Swara Bhaskar: ಕಾಂಟ್ರವರ್ಸಿ ನಟಿ ಸ್ವರಾ ಭಾಸ್ಕರ್ಗೆ ಅವಕಾಶಗಳೇ ಇಲ್ಲ; ಮುಕ್ತವಾಗಿ ಹೇಳಿಕೊಂಡ ಬಾಲಿವುಡ್ ಬೆಡಗಿ
ಸ್ವರಾ ಭಾಸ್ಕರ್ ಅವರು ಮೊದಲಿನಿಂದಲೂ ಕೇಂದ್ರ ಸರ್ಕಾರದ ಕೆಲವು ವಿಚಾರಗಳನ್ನು ವಿರೋಧಿಸುತ್ತಾ ಬಂದಿದ್ದಾರೆ. ಬಾಲಿವುಡ್ನಲ್ಲೂ ಅನೇಕರನ್ನು ಅವರು ಎದುರು ಹಾಕಿಕೊಂಡಿದ್ದಾರೆ.
ನಟಿ ಸ್ವರಾ ಭಾಸ್ಕರ್ (Swara Bhaskar) ಅವರು ಆಗೊಮ್ಮೆ ಈಗೊಮ್ಮೆ ವಿವಾದ ಮಾಡಿಕೊಳ್ಳುತ್ತಾರೆ. ಸಮಾಜದ ಆಗುಹೋಗುಗಳಿಗೆ ಅವರು ಪ್ರತಿಕ್ರಿಯೆ ನೀಡುತ್ತಾರೆ. ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವಲ್ಲಿ ಅವರು ಎಂದಿಗೂ ಹಿಂದೇಟು ಹಾಕಿಲ್ಲ. ಆ ಕಾರಣದಿಂದ ಅವರನ್ನು ಅನೇಕರು ದ್ವೇಷಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸ್ವರಾ ಭಾಸ್ಕರ್ ಅವರನ್ನು ಸಾಕಷ್ಟು ಟ್ರೋಲ್ (Troll) ಮಾಡಲಾಗುತ್ತದೆ. ಅಷ್ಟೇ ಅಲ್ಲದೇ ಅವರಿಗೆ ಸಿನಿಮಾ ಅವಕಾಶಗಳು ಕೂಡ ತಪ್ಪಿಹೋಗುತ್ತಿವೆ. ಈ ಬಗ್ಗೆ ಸ್ವತಃ ಸ್ವರಾ ಭಾಸ್ಕರ್ ಮಾತನಾಡಿದ್ದಾರೆ. ‘ಟೈಮ್ಸ್ ಆಫ್ ಇಂಡಿಯಾ’ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು ಹೇಳಿಕೊಂಡಿದ್ದಾರೆ. ತಮ್ಮ ಕೈಯಲ್ಲಿ ಸದ್ಯಕ್ಕೆ ಒಳ್ಳೆಯ ಅವಕಾಶಗಳೇ ಇಲ್ಲ ಎಂದು ಅವರು ಬಾಯಿ ಬಿಟ್ಟಿದ್ದಾರೆ.
ಸ್ವರಾ ಭಾಸ್ಕರ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2009ರಲ್ಲಿ. ‘ತನು ವೆಡ್ಸ್ ಮನು’, ‘ಪ್ರೇಮ್ ರಥನ್ ಧನ್ ಪಾಯೋ’, ‘ಅನಾರ್ಕಲಿ ಆಫ್ ಆರಾ’, ‘ವೀರೇ ದಿ ವೆಡ್ಡಿಂಗ್’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರಿಗೆ ಹೇಳಿಕೊಳ್ಳುವಂತಹ ಅವಕಾಶಗಳು ಸಿಗುತ್ತಿಲ್ಲ. ‘ನನಗೆ ಅತಿ ಇಷ್ಟವಾಗಿರುವ ನಟನೆಯ ವಿಚಾರದಲ್ಲೇ ನಾನು ರಿಸ್ಕ್ ತೆಗೆದುಕೊಂಡೆ’ ಎಂದು ಸ್ವರಾ ಭಾಸ್ಕರ್ ಹೇಳಿದ್ದಾರೆ.
‘ನಾನು ಸಮರ್ಥ ನಟಿ. ನನ್ನ ಪ್ರತಿಭೆಗೆ ತಕ್ಕಂತಹ ಅವಕಾಶಗಳು ಬರುತ್ತಿಲ್ಲ. ನನ್ನ ಟ್ರ್ಯಾಕ್ ರೆಕಾರ್ಡ್ ಚೆನ್ನಾಗಿದೆ. 6-7 ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದೇನೆ. ವೆಬ್ ಸೀರಿಸ್ಗಳಲ್ಲೂ ಕಾಣಿಸಿಕೊಂಡಿದ್ದೇನೆ. ಕೆಟ್ಟ ವಿಮರ್ಶೆ ಎಂದಿಗೂ ಪಡೆದಿಲ್ಲ. ಚಾನ್ಸ್ ಸಿಗದೇ ಇರಲು ಏನಾದರೂ ಕಾರಣ ಇರಬೇಕಿತ್ತು. ಆದರೆ ಅವಕಾಶ ಇಲ್ಲ ಎಂಬುದಂತೂ ಸ್ಪಷ್ಟವಾಗಿದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Swara Bhasker: ‘ದಿ ಕಾಶ್ಮೀರ್ ಫೈಲ್ಸ್’ ಕೆಟ್ಟ ಸಿನಿಮಾ ಎಂಬ ಹೇಳಿಕೆಗೆ ಸಹಮತ ಸೂಚಿಸಿದ ನಟಿ ಸ್ವರಾ ಭಾಸ್ಕರ್
ಸ್ವರಾ ಭಾಸ್ಕರ್ ಅವರು ಮೊದಲಿನಿಂದಲೂ ಕೇಂದ್ರ ಸರ್ಕಾರದ ಕೆಲವು ವಿಚಾರಗಳನ್ನು ವಿರೋಧಿಸುತ್ತಾ ಬಂದಿದ್ದಾರೆ. ಬಾಲಿವುಡ್ನಲ್ಲೂ ಅನೇಕರನ್ನು ಅವರು ಎದುರು ಹಾಕಿಕೊಂಡಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕುರಿತಂತೆ ಇತ್ತೀಚೆಗೆ ನಡಾವ್ ಲಪಿಡ್ ನೀಡಿದ ಹೇಳಿಕೆ ವಿವಾದ ಉಂಟು ಮಾಡಿತ್ತು. ಆಗ ನಡಾವ್ ಲಪಿಡ್ ಹೇಳಿಕೆಯನ್ನು ಸ್ವರಾ ಭಾಸ್ಕರ್ ಬೆಂಬಲಿಸಿದ್ದರು. ಆ ಕಾರಣದಿಂದಲೂ ಅವರು ಟ್ರೋಲ್ ಆಗುತ್ತಿದ್ದಾರೆ.
ಇದನ್ನೂ ಓದಿ: Swara Bhaskar: ಸಲ್ಮಾನ್ ಖಾನ್ ಬಳಿಕ ನಟಿ ಸ್ವರಾ ಭಾಸ್ಕರ್ಗೆ ಕೊಲೆ ಬೆದರಿಕೆ; ಸಾವರ್ಕರ್ ಬಗ್ಗೆ ಮಾತಾಡಿದ್ದಕ್ಕೆ ಆಕ್ರೋಶ
ಇತ್ತೀಚೆಗೆ ಸ್ವರಾ ಭಾಸ್ಕರ್ ಅವರು ‘ಭಾರತ್ ಜೋಡೋ’ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ರಾಹುಲ್ ಗಾಂಧಿ ಜೊತೆ ಮಧ್ಯ ಪ್ರದೇಶದಲ್ಲಿ ಅವರು ಹೆಜ್ಜೆ ಹಾಕಿ ಸುದ್ದಿ ಆಗಿದ್ದರು. ಸದ್ಯ ಒಂದೆರಡು ಸಿನಿಮಾಗಳು ಅವರ ಕೈಯಲ್ಲಿವೆ. ನಿರೀಕ್ಷಿತ ಮಟ್ಟದಲ್ಲಿ ಅವಕಾಶ ಬರುತ್ತಿಲ್ಲ ಎಂಬ ಬೇಸರ ಅವರದ್ದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:37 am, Tue, 6 December 22