Swara Bhasker: ‘ದಿ ಕಾಶ್ಮೀರ್ ಫೈಲ್ಸ್’ ಕೆಟ್ಟ ಸಿನಿಮಾ ಎಂಬ ಹೇಳಿಕೆಗೆ ಸಹಮತ ಸೂಚಿಸಿದ ನಟಿ ಸ್ವರಾ ಭಾಸ್ಕರ್
Nadav Lapid | The Kashmir Files: ಸ್ವರಾ ಭಾಸ್ಕರ್ ಅವರ ಟ್ವೀಟ್ಗೆ ಸಾವಿರಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಅವರ ಪರವಾಗಿ ಮಾತನಾಡಿದ್ದರೆ, ಇನ್ನೂ ಕೆಲವರು ಕಟು ವಿರೋಧ ವ್ಯಕ್ತಪಡಿಸಿದ್ದಾರೆ.
2022ರಲ್ಲಿ ಭಾರಿ ಯಶಸ್ಸು ಕಂಡ ಸಿನಿಮಾಗಳಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಚಿತ್ರ ಕೂಡ ಪ್ರಮುಖವಾಗಿದೆ. ಕಡಿಮೆ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 250 ಕೋಟಿ ರೂಪಾಯಿ ಕಮಾಯಿ ಮಾಡಿತು ಎಂಬ ಒಂದೇ ಕಾರಣಕ್ಕೆ ಇದು ಹೆಚ್ಚು ಚರ್ಚೆ ಆಗಿದ್ದಲ್ಲ. ಬದಲಿಗೆ, ಅದರಲ್ಲಿನ ಕಂಟೆಂಟ್ ಕಾರಣದಿಂದ ಪರ-ವಿರೋಧ ವ್ಯಕ್ತವಾಗಿದ್ದೇ ಹೆಚ್ಚು. ಇತ್ತೀಚೆಗೆ ಮುಕ್ತಾಯವಾದ ಗೋವಾ ಸಿನಿಮೋತ್ಸವದಲ್ಲೂ ಈ ಬಗ್ಗೆ ಚರ್ಚೆ ಆಗಿದೆ. ಸಿನಿಮೋತ್ಸವದ ಜ್ಯೂರಿ ಕಮಿಟಿ ಅಧ್ಯಕ್ಷರಾದ ನಡಾವ್ ಲಪಿಡ್ (Nadav Lapid) ಅವರು ಈ ಸಿನಿಮಾವನ್ನು ‘ಕೆಟ್ಟ ಚಿತ್ರ’ ಎಂದು ಕರೆದಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ. ಬಾಲಿವುಡ್ ನಟಿ ಸ್ವರಾ ಭಾಸ್ಕರ್ (Swara Bhasker) ಅವರು ನಡಾವ್ ಲಪಿಡ್ ಅವರ ಹೇಳಿಕೆಗೆ ಸಹಮತ ಸೂಚಿಸಿದ್ದಾರೆ.
ಬಾಲಿವುಡ್ನಲ್ಲಿ ಸ್ವರಾ ಭಾಸ್ಕರ್ ಅವರು ಡಿಫರೆಂಟ್ ಆಗಿ ಗುರುತಿಸಿಕೊಂಡಿದ್ದಾರೆ. ತಮಗೆ ಅನಿಸಿದ್ದನ್ನು ನೇರವಾಗಿ ಹೇಳಲು ಅವರು ಎಂದಿಗೂ ಹಿಂದೇಟು ಹಾಕಿಲ್ಲ. ಈ ಬಾರಿ ಕೂಡ ಅವರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕುರಿತ ಅನಿಸಿಕೆಯನ್ನು ನೇರವಾಗಿ ಹಂಚಿಕೊಂಡಿದ್ದಾರೆ. ಗೋವಾ ಸಿನಿಮೋತ್ಸವದಲ್ಲಿ ನಡಾವ್ ಲಪಿಡ್ ಹೇಳಿಕೆ ಕುರಿತು ಪ್ರಕಟ ಆಗಿರುವ ಸುದ್ದಿಯನ್ನು ಟ್ವಿಟರ್ನಲ್ಲಿ ಸ್ವರಾ ಭಾಸ್ಕರ್ ಹಂಚಿಕೊಂಡಿದ್ದಾರೆ. ‘ಈ ವಿಚಾರ ಜಗತ್ತಿಗೆ ತುಂಬ ಸ್ಪಷ್ಟವಾಗಿ ತಿಳಿದಿದೆ’ ಎಂದು ಅವರು ಬರೆದುಕೊಂಡಿದ್ದಾರೆ.
ಸ್ವರಾ ಭಾಸ್ಕರ್ ಅವರ ಈ ಟ್ವೀಟ್ಗೆ ಸಾವಿರಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಅವರ ಪರವಾಗಿ ಮಾತನಾಡಿದ್ದರೆ, ಇನ್ನೂ ಕೆಲವರು ಕಟು ವಿರೋಧ ವ್ಯಕ್ತಪಡಿಸಿದ್ದಾರೆ. ಸ್ವರಾ ಭಾಸ್ಕರ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಆದರೆ ಅವುಗಳಿಗೆ ಸ್ವರಾ ತಲೆ ಕೆಡಿಸಿಕೊಂಡಿಲ್ಲ. ತಮ್ಮ ಸಿದ್ಧಾಂತದ ಕಾರಣಗಳಿಂದ ಆಗಾಗ ಅವರು ಟೀಕೆಗೆ ಒಳಗಾಗುತ್ತಾರೆ. ಈ ಹಿಂದೆ ಅವರಿಗೆ ಕೊಲೆ ಬೆದರಿಕೆ ಕೂಡ ಹಾಕಲಾಗಿತ್ತು.
Apparently it’s pretty clear to the world ..https://t.co/VQGH6eKcj6
— Swara Bhasker (@ReallySwara) November 28, 2022
ನಡಾವ್ ಲಪಿಡ್ ಹೇಳಿದ್ದೇನು?
‘ಅಂತಾರಾಷ್ಟ್ರೀಯ ಸಿನಿಮಾ ಸ್ಪರ್ಧೆಯ ವಿಭಾಗದಲ್ಲಿ ನಾವು 15 ಚಿತ್ರಗಳನ್ನು ನೋಡಿದೆವು. 14 ಸಿನಿಮಾಗಳು ಗುಣಮಟ್ಟದಿಂದ ಕೂಡಿದ್ದು, ಚರ್ಚೆ ಹುಟ್ಟುಹಾಕಿದವು. ಆದರೆ 15ನೇ ಸಿನಿಮಾ ದಿ ಕಾಶ್ಮೀರ್ ಫೈಲ್ಸ್ ನೋಡಿ ನಮಗೆಲ್ಲ ಶಾಕ್ ಆಯಿತು. ಅದೊಂದು ಪ್ರಚಾರದ, ಅಶ್ಲೀಲ ಸಿನಿಮಾ ಅಂತ ನನಗೆ ಅನಿಸಿತು. ಇಂಥ ಪ್ರತಿಷ್ಠಿತ ಸಿನಿಮೋತ್ಸವದ ಸ್ಪರ್ಧಾತ್ಮಕ ವಿಭಾಗದಲ್ಲಿ ಇರಲು ಅದು ಸೂಕ್ತವಲ್ಲ ಎನಿಸಿತು. ಈ ವೇದಿಕೆಯಲ್ಲಿ ನನ್ನ ಅಭಿಪ್ರಾಯವನ್ನು ತಿಳಿಸಲು ನಾನು ಕಂಫರ್ಟಬಲ್ ಆಗಿದ್ದೇನೆ. ಸಿನಿಮೋತ್ಸವದಲ್ಲಿ ಈ ವಿಮರ್ಶಾತ್ಮಕ ಚರ್ಚೆಯನ್ನು ಒಪ್ಪಿಕೊಳ್ಳಬಹುದು. ಬದುಕಿಗೆ ಮತ್ತು ಕಲೆಗೆ ಅದು ಅವಶ್ಯಕ’ ಎಂದು ನಡಾವ್ ಲಪಿಡ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.