Vivek Agnihotri: ‘ಸತ್ಯ ಅಲ್ಲ ಅಂತ ಸಾಬೀತಾದ್ರೆ ಸಿನಿಮಾ ಮಾಡೋದು ಬಿಟ್ಟು ಬಿಡ್ತೀನಿ’; ವಿವೇಕ್ ಅಗ್ನಿಹೋತ್ರಿ ಸವಾಲು
Nadav Lapid | The Kashmir Files: ‘ದಿ ಕಾಶ್ಮೀರ್ ಫೈಲ್ಸ್’ ವಿರುದ್ಧ ಮಾತನಾಡಿದ ನಡಾವ್ ಲಪಿಡ್ ಮನಸ್ಥಿತಿ ಬಗ್ಗೆ ವಿವೇಕ್ ಅಗ್ನಿಹೋತ್ರಿ ಟೀಕೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಗೋವಾ ಸಿನಿಮೋತ್ಸವದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆ ಜ್ಯೂರಿ ಕಮಿಟಿ ಅಧ್ಯಕ್ಷ ನಡಾವ್ ಲಪಿಡ್ (Nadav Lapid) ಅವರು ನೀಡಿದ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸಿದೆ. ಇದೊಂದು ಪ್ರಚಾರದ, ಅಶ್ಲೀಲ ಸಿನಿಮಾ ಎಂದು ಅವರು ಹೇಳಿರುವುದನ್ನು ಅನೇಕರು ವಿರೋಧಿಸಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ನಟ ಅನುಪಮ್ ಖೇರ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ. ಅದರ ಬೆನ್ನಲ್ಲೇ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ತಾವು ತೋರಿಸಿದ ಯಾವುದೇ ವಿಷಯ ಸುಳ್ಳು ಅಂತ ಸಾಬೀತಾದ್ರೆ ಸಿನಿಮಾ ಮಾಡುವುದನ್ನೇ ಬಿಟ್ಟು ಬಿಡುವುದಾಗಿ ವಿವೇಕ್ ಅಗ್ನಿಹೋತ್ರಿ (Vivek Agnihotri) ಬಹಿರಂಗ ಸವಾಲು ಹಾಕಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವಿವೇಕ್ ಅಗ್ನಿಹೋತ್ರಿ ವಿಡಿಯೋ ಹಂಚಿಕೊಂಡಿದ್ದಾರೆ. ಅವರ ಈ ವಿಡಿಯೋ ವೈರಲ್ ಆಗಿದೆ. ‘ದಿ ಕಾಶ್ಮೀರ್ ಫೈಲ್ಸ್’ ವಿರುದ್ಧ ಮಾತನಾಡಿದ ನಡಾವ್ ಲಪಿಡ್ ಮನಸ್ಥಿತಿ ಬಗ್ಗೆ ವಿವೇಕ್ ಅಗ್ನಿಹೋತ್ರಿ ಟೀಕೆ ಮಾಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
‘ಗೋವಾದಲ್ಲಿ ಜ್ಯೂರಿ ಕಮಿಟಿಯ ಅಧ್ಯಕ್ಷ ಆ ರೀತಿ ಹೇಳಿಕೆ ನೀಡಿದ್ದು ನನಗೆ ಹೊಸದೇನೂ ಅನಿಸುತ್ತಿಲ್ಲ. ಯಾಕೆಂದರೆ, ಭಯೋತ್ಪಾದಕ ಸಂಘಟನೆಗಳು, ಅರ್ಬನ್ ನಕ್ಸಲರು, ಟುಕ್ಡೆ ಟುಕ್ಡೆ ಗ್ಯಾಂಗ್ ಸದಸ್ಯರು ಮೊದಲಿನಿಂದಲೂ ಇದನ್ನೇ ಹೇಳುತ್ತಾ ಬಂದಿದ್ದಾರೆ. ಆದರೆ ಆಶ್ಚರ್ಯ ಎನಿಸಿದ್ದು ಏನೆಂದರೆ, ಭಾರತ ಸರ್ಕಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವ ವಿಚಾರಕ್ಕೆ ಬೆಂಬಲ ನೀಡಲಾಯಿತು. ಭಾರತದ ಕೆಲವು ಜನರೇ ಆ ವಿಚಾರವನ್ನು ದೇಶ ವಿರೋಧಿಯಾಗಿ ಬಳಸಿಕೊಂಡಿದ್ದಾರೆ’ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.
‘ನಾಲ್ಕು ವರ್ಷದ ಹಿಂದೆ ನಾನು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕಾಗಿ ಅಧ್ಯಯನ ಶುರುಮಾಡಿದಾಗ ಅದನ್ನು ಪ್ರಚಾರ ಎಂದು ಹೇಳಿದ್ದು ಇದೇ ಜನರು. 700 ಜನರು ಸಂದರ್ಶನ ನಡೆಸಿ ಈ ಸಿನಿಮಾ ಮಾಡಲಾಯ್ತು. ಆ 700 ಜನರ ಕುಟುಂಬದವರ ಮೇಲೆ ಕೊಲೆ-ಅತ್ಯಾಚಾರ ಆಗಿದ್ದು ಅಶ್ಲೀಲ ಮತ್ತು ಪ್ರಚಾರವೇ? ಇಂದಿಗೂ ಆ ನೆಲದಲ್ಲಿ ಹಿಂದುಗಳನ್ನು ಆರಿಸಿ ಕೊಲ್ಲಲಾಗುತ್ತಿದೆ. ಅದು ಅಶ್ಲೀಲ ಮತ್ತು ಪ್ರಚಾರವೇ’ ಎಂದು ವಿವೇಕ್ ಅಗ್ನಿಹೋತ್ರಿ ಪ್ರಶ್ನಿಸಿದ್ದಾರೆ.
Terror supporters and Genocide deniers can never silence me. Jai Hind. #TheKashmirFiles #ATrueStory pic.twitter.com/jMYyyenflc
— Vivek Ranjan Agnihotri (@vivekagnihotri) November 29, 2022
‘ಕಾಶ್ಮೀರದಲ್ಲಿ ಹತ್ಯಾಕಾಂಡ ಆಗಿರಲೇ ಇಲ್ಲ ಎಂಬ ಮಾತು ಆಗಾಗ ಕೇಳಿಬರುತ್ತದೆ. ಇಸ್ರೇಲ್ನ ಮಹಾನ್ ಫಿಲ್ಮ್ಮೇಕರ್ಗೆ, ಅರ್ಬನ್ ನಕ್ಸಲರಿಗೆ, ಬುದ್ಧಿಜೀವಿಗಳಿಗೆ ನಾನು ಸವಾಲು ಹಾಕುತ್ತೇನೆ. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಲ್ಲಿ ತೋರಿಸಿದ ಯಾವುದೇ ದೃಶ್ಯ ಅಥವಾ ಡೈಲಾಗ್ ಸತ್ಯ ಅಲ್ಲ ಎಂದು ಸಾಬೀತು ಮಾಡಿದ್ರೆ ನಾನು ಸಿನಿಮಾ ಮಾಡುವುದನ್ನೇ ಬಿಟ್ಟು ಬಿಡುತ್ತೇನೆ’ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:43 am, Wed, 30 November 22