Sudipto Sen: ಸಾವರ್ಕರ್ ಜೀವನಾಧಾರಿತ ಸಿನಿಮಾದ ನಿರ್ಮಾಪಕರ ಜೊತೆ ‘ದಿ ಕೇರಳ ಸ್ಟೋರಿ’ ನಿರ್ದೇಶಕರ ಹೊಸ ಪ್ರಾಜೆಕ್ಟ್
Sandeep Singh: ಸಂದೀಪ್ ಸಿಂಗ್ ಅವರು ಈಗ ‘ಸ್ವಾತಂತ್ರವೀರ್ ಸಾವರ್ಕರ್’ ಹಾಗೂ ‘ಮೈ ಅಟಲ್ ಹೂ’ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಸುದೀಪ್ತೋ ಸೇನ್ ನಿರ್ದೇಶನ ಮಾಡಲಿರುವ ಹೊಸ ಸಿನಿಮಾಗೆ ಬಂಡವಾಳ ಹೂಡಲು ಸಂದೀಪ್ ಸಿಂಗ್ ಮುಂದಾಗಿದ್ದಾರೆ.
ನಿರ್ದೇಶಕ ಸುದೀಪ್ತೋ ಸೇನ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆದರೆ ಅವರಿಗೆ ದೊಡ್ಡ ಮಟ್ಟದ ಗೆಲುವು ಸಿಕ್ಕಿದ್ದು ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾದಿಂದ. ಭಾರತದ ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರ 237 ಕೋಟಿ ರೂಪಾಯಿ ಗಳಿಸಿದೆ. ಈಗ ಸುದೀಪ್ತೋ ಸೇನ್ ಅವರು ಮಾಡಲಿರುವ ಮುಂದಿನ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ವಿಶೇಷ ಏನೆಂದರೆ, ಸಾವರ್ಕರ್ ಜೀವನಾಧಾರಿತ ಸಿನಿಮಾಗೆ ಬಂಡವಾಳ ಹೂಡುತ್ತಿರುವ ನಿರ್ಮಾಪಕ ಸಂದೀಪ್ ಸಿಂಗ್ (Sandeep Singh) ಜೊತೆ ಸುದೀಪ್ತೋ ಸೇನ್ ಕೈ ಜೋಡಿಸಿದ್ದಾರೆ. ಆದರೆ ಅವರಿಬ್ಬರೂ ಜೊತೆಯಾಗಿ ಮಾಡಲಿರುವ ಹೊಸ ಪ್ರಾಜೆಕ್ಟ್ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗ ಆಗಬೇಕಿದೆ. ‘ದಿ ಕೇರಳ ಸ್ಟೋರಿ’ ಸಿನಿಮಾ ಸೂಪರ್ ಹಿಟ್ ಆಗಿರುವುದರಿಂದ ಸುದೀಪ್ತೋ ಸೇನ್ (Sudipto Sen) ಅವರ ಮೇಲೆ ಅಭಿಮಾನಿಗಳಿಗೆ ಭರವಸೆ ಮೂಡಿದೆ.
ಸಂದೀಪ್ ಸಿಂಗ್ ಅವರು ಈಗ ‘ಸ್ವಾತಂತ್ರವೀರ್ ಸಾವರ್ಕರ್’ ಹಾಗೂ ‘ಮೈ ಅಟಲ್ ಹೂ’ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಸುದೀಪ್ತೋ ಸೇನ್ ನಿರ್ದೇಶನ ಮಾಡಲಿರುವ ಹೊಸ ಸಿನಿಮಾಗೆ ಬಂಡವಾಳ ಹೂಡಲು ಸಂದೀಪ್ ಸಿಂಗ್ ಮುಂದಾಗಿದ್ದಾರೆ. ಮತ್ತೆ ಅವರು ನೈಜ ಘಟನೆ ಆಧಾರಿತ ಸಿನಿಮಾವನ್ನು ನಿರ್ಮಿಸಲಿದ್ದಾರೆ ಎಂದು ಹೇಳಲಾಗುತ್ತಿವೆ. ಆದಷ್ಟು ಬೇಗ ಈ ಪ್ರಾಜೆಕ್ಟ್ ಕುರಿತು ವಿವರ ಲಭ್ಯವಾಗಲಿ ಎಂದು ಸಿನಿಪ್ರಿಯರು ಕಾಯುತ್ತಿದ್ದಾರೆ.
ಇದನ್ನೂ ಓದಿ: ‘ದಿ ಕೇರಳ ಸ್ಟೋರಿ ಅಂಥ ಸಿನಿಮಾಗಳನ್ನು ಜನರು ನೋಡಬೇಕು’; ಅಚ್ಚರಿಯ ಹೇಳಿಕೆ ನೀಡಿದ ಕಮಲ್ ಹಾಸನ್
ಕೆಲವೇ ದಿನಗಳ ಹಿಂದೆ ‘ದಿ ಕೇರಳ ಸ್ಟೋರಿ’ ಸಿನಿಮಾದ ಸೀಕ್ವೆಲ್ ಬಗ್ಗೆ ಮಾತು ಕೇಳಿಬಂದಿತ್ತು. ಅದಾ ಶರ್ಮಾ ನಟನೆಯ ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಕೇವಲ ಮಹಿಳೆಯರ ಬ್ರೇನ್ವಾಶ್ ಬಗ್ಗೆ ತೋರಿಸಲಾಗಿದೆ. ಆದರೆ ಹುಡುಗರ ಬ್ರೇನ್ವಾಶ್ ಬಗ್ಗೆ ಯಾಕೆ ತೋರಿಸಿಲ್ಲ ಎಂದು ಅನೇಕರು ಪ್ರಶ್ನೆ ಎತ್ತಿದ್ದಾರೆ. ನಿರ್ದೇಶಕ ಸುದೀಪ್ತೋ ಸೇನ್ ಅವರನ್ನು ಈ ಕುರಿತು ಕೆಲವರು ಪ್ರಶ್ನಿಸಿದ್ದಾರಂತೆ. ಹುಡುಗರನ್ನು ಬ್ರೇನ್ವಾಶ್ ಮಾಡಿದ್ದರ ಕುರಿತು ಸೀಕ್ವೆಲ್ ಮಾಡುವಂತೆ ಅವರಿಗೆ ಆಫರ್ ನೀಡಲಾಗಿದೆ. ಹಾಗಾಗಿ ‘ದಿ ಕೇರಳ ಸ್ಟೋರಿ 2’ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ.
ನಟಿ ಅದಾ ಶರ್ಮಾಗೆ ಆಫರ್ಗಳ ಸುರಿಮಳೆ:
‘ಗಾಂಧಾರ್ ಫಿಲ್ಮ್ಸ್ ಆ್ಯಂಡ್ ಸ್ಟುಡಿಯೋ ಪ್ರೈವೇಟ್ ಲಿಮಿಡೆಟ್’ ಸಂಸ್ಥೆ ಮೂಲಕ ‘ದಿ ಗೇಮ್ ಆಫ್ ಗಿರ್ಗಿಟ್’ ಸಿನಿಮಾ ಮೂಡಿಬರುತ್ತಿದೆ. ಅದಾ ಶರ್ಮಾ ಅವರ ಬರ್ತ್ಡೇ (ಮೇ 11) ಪ್ರಯುಕ್ತ ‘ದಿ ಗೇಮ್ ಆಫ್ ಗಿರ್ಗಿಟ್’ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಈ ಸಿನಿಮಾದಲ್ಲಿ ಅದಾ ಶರ್ಮಾ ಅವರು ಪೊಲೀಸ್ ಪಾತ್ರ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ನ ಖ್ಯಾತ ನಟ ಶ್ರೇಯಸ್ ತಲ್ಪಡೆ ಕೂಡ ನಟಿಸುತ್ತಿದ್ದಾರೆ. ಒಂದಷ್ಟು ವರ್ಷಗಳ ಹಿಂದೆ ಭಾರಿ ಕುಖ್ಯಾತಿ ಪಡೆದಿದ್ದ ಬ್ಲೂ ವೇಲ್ ಗೇಮ್ ಕುರಿತು ಈ ಸಿನಿಮಾ ಸಿದ್ಧವಾಗಲಿದೆ ಎಂಬುದು ವಿಶೇಷ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.