224 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿರುವ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಇನ್ನೂ ಅನೇಕ ಕಡೆಗಳಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡಬೇಕು ಎಂದು ಅನೇಕರು ಕಾದಿದ್ದಾರೆ. ಹಾಗಾಗಿ ಈ ಸಿನಿಮಾದ ಒಟಿಟಿ ರಿಲೀಸ್ ಬಗ್ಗೆ ಹಲವು ಬಗೆಯ ಗಾಸಿಪ್ಗಳು ಹಬ್ಬಿವೆ. ‘ದಿ ಕೇರಳ ಸ್ಟೋರಿ’ ಚಿತ್ರದ ಒಟಿಟಿ ಪ್ರಸಾರ ಹಕ್ಕುಗಳು ಆ ಸಂಸ್ಥೆಗೆ ಸೇಲ್ ಆಯ್ತಂತೆ, ಇಂಥ ದಿನಾಂಕದಲ್ಲಿ ಸ್ಟ್ರೀಮಿಂಗ್ ಆಗತ್ತಂತೆ ಎಂಬ ಅಂತೆ-ಕಂತೆಗಳು ಹರಿದಾಡುತ್ತಿವೆ. ಆದರೆ ಅದೆಲ್ಲವೂ ಸುಳ್ಳು. ಈ ಬಗ್ಗೆ ಸ್ವತಃ ನಿರ್ಮಾಣ ಸಂಸ್ಥೆ ಕಡೆಯಿಂದಲೇ ಸ್ವಷ್ಟನೆ ಸಿಕ್ಕಿದೆ. ಸದ್ಯಕ್ಕೆ ‘ದಿ ಕೇರಳ ಸ್ಟೋರಿ’ ಸಿನಿಮಾದ ನಿರ್ಮಾಪಕರು ಯಾವುದೇ ಒಟಿಟಿ (OTT) ಸಂಸ್ಥೆಯ ಜೊತೆ ಡೀಲ್ ಮುಗಿಸಿಲ್ಲ ಎಂಬುದು ತಿಳಿದುಬಂದಿದೆ. ಶೀಘ್ರದಲ್ಲೇ ಒಟಿಟಿ ರಿಲೀಸ್ ದಿನಾಂಕದ (The Kerala Story OTT Release Date) ಬಗ್ಗೆ ಅಧಿಕೃತ ಮಾಹಿತಿ ಸಿಗಲಿ ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ. ವಿಪುಲ್ ಅಮೃತ್ಲಾಲ್ ಶಾ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.
ನಾಲ್ಕನೇ ವಾರಾಂತ್ಯದಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿತ್ತು. 5ನೇ ವೀಕೆಂಡ್ನಲ್ಲೂ ಹೆಚ್ಚಿನ ಜನರು ಈ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರುವ ನಿರೀಕ್ಷೆ ಇದೆ. ಹಾಗಾಗಿ ಈ ಸಮಯದಲ್ಲಿ ಒಟಿಟಿಯಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವುದು ಸೂಕ್ತ ನಿರ್ಧಾರ ಅಲ್ಲ ಎಂಬುದು ಟ್ರೇಡ್ ತಜ್ಞರ ಅಭಿಪ್ರಾಯ. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ 250 ಕೋಟಿ ರೂಪಾಯಿ ಗಳಿಸಬಹುದು ಎಂದು ಕೆಲವರು ಅಂದಾಜಿಸಿದ್ದಾರೆ. ಆದರೆ ಅದು ನಿಜವಾಗುವುದು ಅನುಮಾನ ಎನ್ನಲಾಗುತ್ತಿದೆ.
ನಟಿ ಅದಾ ಶರ್ಮಾ ಅವರು ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಸುದೀಪ್ತೋ ಸೇನ್ ಅವರು ನಿರ್ದೇಶನ ಮಾಡಿದ್ದಾರೆ. ಕೇರಳದಲ್ಲಿ ನಡೆದಿದೆ ಎನ್ನಲಾದ ಮತಾಂತರ ಮತ್ತು ಲವ್ ಜಿಹಾದ್ ಘಟನೆಗಳನ್ನು ಆಧರಿಸಿ ಈ ಚಿತ್ರ ತಯಾರಾಗಿದೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾ ಕಾಂಟ್ರವರ್ಸಿ ಸೃಷ್ಟಿ ಮಾಡಿತ್ತು. ಹಾಗಾಗಿ ಸಾಕಷ್ಟು ಪ್ರಚಾರ ಪಡೆದುಕೊಂಡಿತು. ಬಿಡುಗಡೆ ಆದ ಬಳಿಕ ಸೆಲೆಬ್ರಿಟಿಗಳ ವಲಯದಲ್ಲೂ ಈ ಸಿನಿಮಾದ ಬಗ್ಗೆ ಪರ-ವಿರೋಧ ಚರ್ಚೆ ಆಯಿತು. ಕೆಲವರು ಈ ಸಿನಿಮಾವನ್ನು ಮೆಚ್ಚಿಕೊಂಡರು. ಆದರೆ ಇನ್ನೂ ಕೆಲವರು ಕಟು ಟೀಕೆ ಮಾಡಿದರು.
ಇದನ್ನೂ ಓದಿ: Sudipto Sen: ಆಸ್ಪತ್ರೆ ಸೇರಿದ್ದ ‘ದಿ ಕೇರಳ ಸ್ಟೋರಿ’ ನಿರ್ದೇಶಕ ಸುದೀಪ್ತೋ ಸೇನ್ ಆರೋಗ್ಯ ಈಗ ಹೇಗಿದೆ?
ಇತ್ತೀಚೆಗೆ ಅಬುಧಾಬಿಯಲ್ಲಿ ನಡೆದ ‘ಐಫಾ ಅವಾರ್ಡ್ಸ್’ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಅವರು ಭಾಗಿ ಆಗಿದ್ದರು. ಆ ವೇಳೆ ಅವರಿಗೆ ‘ದಿ ಕೇರಳ ಸ್ಟೋರಿ ’ ಸಿನಿಮಾ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಈ ಚಿತ್ರವನ್ನು ತೆಗಳಿದರು. ‘ನಾನು ಆಗಲೇ ಹೇಳಿದ್ದೇನೆ. ಇದು ಪ್ರೊಪೊಗಾಂಡ ಸಿನಿಮಾ. ನಾನು ಅದರ ವಿರುದ್ಧವಾಗಿದ್ದೇನೆ. ಸಿನಿಮಾ ಶೀರ್ಷಿಕೆಯ ಕೆಳಗಡೆ ‘ಸತ್ಯ ಘಟನೆ’ ಅಂತ ಬರೆದರೆ ಸಾಕಾಗುವುದಿಲ್ಲ. ಅದು ನಿಜಕ್ಕೂ ಸತ್ಯ ಘಟನೆಯೇ ಆಗಿರಬೇಕು. ಆದರೆ ಈ ಚಿತ್ರದಲ್ಲಿನ ವಿಷಯ ನಿಜವಲ್ಲ’ ಎಂದು ಕಮಲ್ ಹಾಸನ್ ಹೇಳಿದರು.
ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ ಫೋನ್ ನಂಬರ್ ಲೀಕ್; ಕಿರುಕುಳ ನೀಡಿದ ಸೈಬರ್ ಕಿಡಿಗೇಡಿ
‘ದಿ ಕೇರಳ ಸ್ಟೋರಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಕಂಡಿದೆ. ಆದರೆ ಈ ಕಲೆಕ್ಷನ್ನಿಂದ ನಿರ್ದೇಶಕ ಸುದೀಪ್ತೋ ಸೇನ್ ಅವರಿಗೆ ಸಮಾಧಾನ ಆಗಿಲ್ಲ. ಅವರ ಉದ್ದೇಶ ಬೇರೆಯೇ ಇದೆ. ‘ನಮ್ಮ ಸಿನಿಮಾವನ್ನು ಇನ್ನಷ್ಟು ಜನರು ನೋಡಬೇಕು. ವಿಶ್ವಾದ್ಯಂತ ಇರುವ ಭಾರತದ ಜನರಲ್ಲಿ ಶೇಕಡ 10ರಷ್ಟು ಜನರಿಗಾದರೂ ನಮ್ಮ ಚಿತ್ರದ ಸಂದೇಶ ತಲುಪಬೇಕು. ಆಗಲೇ ಇದನ್ನು ಸಕ್ಸಸ್ ಅಂತ ನಾವು ಕರೆಬಹುದು’ ಎಂದು ಸುದೀಪ್ತೋ ಸೇನ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.