‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ ಫೋನ್ ನಂಬರ್ ಲೀಕ್; ಕಿರುಕುಳ ನೀಡಿದ ಸೈಬರ್ ಕಿಡಿಗೇಡಿ
Adah Sharma Phone Number Leak: ಅದಾ ಶರ್ಮಾ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ತೊಂದರೆ ನೀಡಲಾಗುತ್ತಿದೆ. ಕಿಡಿಗೇಡಿಯ ವಿರುದ್ಧ ಮುಂಬೈ ಸೈಬರ್ ಕ್ರೈಂ ವಿಭಾಗದ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.
ನಟಿ ಅದಾ ಶರ್ಮಾ ಅವರು ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ನಡುವೆ ಅವರಿಗೆ ಕೆಲವು ತೊಂದರೆಗಳು ಕೂಡ ಎದುರಾಗುತ್ತಿವೆ. ಇದು ವಿವಾದಿತ ಸಿನಿಮಾ ಎಂಬುದು ಗೊತ್ತಿರುವ ವಿಚಾರ. ಇಂಥ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ಅದಾ ಶರ್ಮಾ (Adah Sharma) ಅವರಿಗೆ ಕೆಲವರು ಕಿರುಕುಳ ನೀಡುತ್ತಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಕಿಡಿಗೇಡಿಯೊಬ್ಬನು ನಟಿಯ ಫೋನ್ ನಂಬರ್ (Adah Sharma Phone Number) ಲೀಕ್ ಮಾಡಿದ್ದಾನೆ ಎಂದು ವರದಿ ಆಗಿದೆ. ಅಲ್ಲದೇ ಅದಾ ಶರ್ಮಾಗೆ ಸಂಬಂಧಿಸಿದ ಖಾಸಗಿ ಮಾಹಿತಿಯನ್ನು ಕೂಡ ಸೋರಿಕೆ ಮಾಡುವುದಾಗಿ ಆತ ಬೆದರಿಕೆ ಹಾಕಿದ್ದಾನೆ. ಸದ್ಯಕ್ಕೆ ಆ ಕಿಡಿಗೇಡಿಯ ಇನ್ಸ್ಟಾಗ್ರಾಮ್ ಖಾತೆ ಡಿಆ್ಯಕ್ಟಿವೇಟ್ ಆಗಿದೆ. ಒಟ್ಟಿನಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾದ ನಟಿಗೆ ಇದರಿಂದ ತೊಂದರೆ ಆಗಿರುವುದಂತೂ ನಿಜ.
ಫೋನ್ ನಂಬರ್ ಲೀಕ್ ಆದ ಬಳಿಕ ಆ ನಂಬರ್ ಬದಲಿಸುವುದು ಸೆಲೆಬ್ರಿಟಿಗಳಿಗೆ ಅನಿವಾರ್ಯ ಆಗುತ್ತದೆ. ಅದಾ ಶರ್ಮಾ ಕೂಡ ಹಾಗೆಯೇ ಮಾಡಿದ್ದಾರೆ. ಆದರೆ ಹೊಸ ನಂಬರ್ ಅನ್ನು ಕೂಡ ಲೀಕ್ ಮಾಡುವುದಾಗಿ ಕಿಡಿಗೇಡಿಯಿಂದ ಬೆದರಿಕೆ ಬಂದಿದೆ. ಈತನ ವಿರುದ್ಧ ಮುಂಬೈ ಸೈಬರ್ ಕ್ರೈಂ ವಿಭಾಗದ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.
ಬ್ಲೂ ವೇಲ್ ಕುರಿತ ಸಿನಿಮಾದಲ್ಲಿ ಅದಾ ಶರ್ಮಾ:
‘ಗಾಂಧಾರ್ ಫಿಲ್ಮ್ಸ್ ಆ್ಯಂಡ್ ಸ್ಟುಡಿಯೋ ಪ್ರೈವೇಟ್ ಲಿಮಿಡೆಟ್’ ಸಂಸ್ಥೆ ಮೂಲಕ ‘ದಿ ಗೇಮ್ ಆಫ್ ಗಿರ್ಗಿಟ್’ ಸಿನಿಮಾ ಮೂಡಿಬರುತ್ತಿದೆ. ಅದಾ ಶರ್ಮಾ ಅವರ ಬರ್ತ್ಡೇ (ಮೇ 11) ಪ್ರಯುಕ್ತ ‘ದಿ ಗೇಮ್ ಆಫ್ ಗಿರ್ಗಿಟ್’ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಈ ಸಿನಿಮಾದಲ್ಲಿ ಅದಾ ಶರ್ಮಾ ಅವರು ಪೊಲೀಸ್ ಪಾತ್ರ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ನ ಖ್ಯಾತ ನಟ ಶ್ರೇಯಸ್ ತಲ್ಪಡೆ ಕೂಡ ನಟಿಸುತ್ತಿದ್ದಾರೆ. ಒಂದಷ್ಟು ವರ್ಷಗಳ ಹಿಂದೆ ಭಾರಿ ಕುಖ್ಯಾತಿ ಪಡೆದಿದ್ದ ಬ್ಲೂ ವೇಲ್ ಗೇಮ್ ಕುರಿತು ಈ ಸಿನಿಮಾ ಸಿದ್ಧವಾಗಲಿದೆ ಎಂಬುದು ವಿಶೇಷ.
ಇದನ್ನೂ ಓದಿ: The Kerala Story: ಕುಸಿಯಿತು ‘ದಿ ಕೇರಳ ಸ್ಟೋರಿ’ ಕಲೆಕ್ಷನ್; 250 ಕೋಟಿ ರೂ. ಗಡಿ ಮುಟ್ಟುವುದು ಅನುಮಾನ
‘ದಿ ಗೇಮ್ ಆಫ್ ಗಿರ್ಗಿಟ್’ ಚಿತ್ರಕ್ಕೆ ವಿಶಾಲ್ ಪಾಂಡ್ಯ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾ ಬಗ್ಗೆ ಈಗಲೇ ಕುತೂಹಲ ಸೃಷ್ಟಿ ಆಗಿದೆ. ಒಂದು ಕಾಲದಲ್ಲಿ ಬ್ಲೂ ವೇಲ್ ಗೇಮ್ ಬಗ್ಗೆ ಸಾಕಷ್ಟು ಕ್ರೇಜ್ ಇತ್ತು. ಯುವಕರು ಈ ಗೇಮ್ಗೆ ಅಡಿಕ್ಟ್ ಆಗಿದ್ದರು. ಅದರಿಂದ ಸಾಕಷ್ಟು ಅನಾಹುತಗಳು ಆದ ಬಗ್ಗೆ ಮಾತುಗಳು ಕೇಳಿಬಂದಿದ್ದವು. ಅಂಥ ಖತರ್ನಾಕ್ ಗೇಮ್ ಕುರಿತು ‘ದಿ ಗೇಮ್ ಆಫ್ ಗಿರ್ಗಿಟ್’ ಸಿನಿಮಾ ಸಿದ್ಧವಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.