Kajol: ‘ಶಿಕ್ಷಣ ಪಡೆಯದ ರಾಜಕಾರಣಿಗಳು ನಮ್ಮನ್ನು ಆಳುತ್ತಿದ್ದಾರೆ’: ನಟಿ ಕಾಜೋಲ್​ ಹೇಳಿಕೆಗೆ ತೀವ್ರ ವಿರೋಧ

The Trail: ವಿವಾದ ಆದ ಬಳಿಕ ಕಾಜೋಲ್​ ಅವರು ಸ್ಪಷ್ಟನೆ ನೀಡಿದ್ದಾರೆ. ತಮ್ಮ ಹೇಳಿಕೆಯ ಹಿಂದಿರುವ ಉದ್ದೇಶ ಏನು ಎಂಬುದನ್ನು ಅವರು ತಿಳಿಸಿದ್ದಾರೆ.

Kajol: ‘ಶಿಕ್ಷಣ ಪಡೆಯದ ರಾಜಕಾರಣಿಗಳು ನಮ್ಮನ್ನು ಆಳುತ್ತಿದ್ದಾರೆ’: ನಟಿ ಕಾಜೋಲ್​ ಹೇಳಿಕೆಗೆ ತೀವ್ರ ವಿರೋಧ
ಕಾಜೋಲ್
Follow us
ಮದನ್​ ಕುಮಾರ್​
|

Updated on: Jul 09, 2023 | 7:16 AM

ನಟಿ ಕಾಜೋಲ್​ (Kajol) ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಸಿನಿಮಾ ಮಾತ್ರವಲ್ಲದೇ ವೆಬ್​ ಸಿರೀಸ್​ ಲೋಕದಲ್ಲೂ ಅವರಿಗೆ ಬೇಡಿಕೆ ಇದೆ. ಈಗ ಅವರು ನಟಿಸಿರುವ ‘ದಿ ಟ್ರಯಲ್​’ (The Trail) ವೆಬ್​ ಸಿರೀಸ್​ ಬಿಡುಗಡೆಗೆ ಸಜ್ಜಾಗಿದೆ. ಈ ಪ್ರಯುಕ್ತ ಅವರು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ನೀಡಿದ ಹೇಳಿಕೆಯಿಂದ ವಿವಾದ ಸೃಷ್ಟಿ ಆಗಿದೆ. ರಾಜಕಾರಣಿಗಳ (Politicians) ಬಗ್ಗೆ ಕಾಜೋಲ್​ ಮಾತನಾಡಿದ್ದಕ್ಕೆ ಕೆಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಹುತೇಕ ರಾಜಕಾರಣಿಗಳಿಗೆ ಸೂಕ್ತ ಶಿಕ್ಷಣ ಇಲ್ಲವೆಂದು ಕಾಜೋಲ್​ ಹೇಳಿದ್ದಾರೆ. ಅದೇ ಈಗ ವಿವಾದಕ್ಕೆ ಕಾರಣ ಆಗಿದೆ.

‘ನಮ್ಮ ದೇಶದಲ್ಲಿ ಬದಲಾವಣೆ ಎಂಬುದು ತುಂಬಾ ನಿಧಾನಗತಿಯಲ್ಲಿ ಇದೆ. ಯಾಕೆಂದರೆ ನಾವು ನಮ್ಮ ಸಂಪ್ರದಾಯದಲ್ಲಿ ಮುಳುಗಿದ್ದೇವೆ. ಬದಲಾವಣೆ ಬರಬೇಕಿರುವುದು ಶಿಕ್ಷಣದಿಂದ’ ಎಂದು ಕಾಜೋಲ್​ ಹೇಳಿದ್ದಾರೆ. ಇಷ್ಟೇ ಆಗಿದ್ದರೆ ದೊಡ್ಡ ಕಿರಿಕ್​ ಆಗುತ್ತಿರಲಿಲ್ಲ. ‘ಸರಿಯಾದ ಶಿಕ್ಷಣ ಪಡೆಯದೇ ಇರುವ ರಾಜಕಾರಣಿಗಳು ನಮ್ಮಲ್ಲಿ ಇದ್ದಾರೆ. ಕ್ಷಮಿಸಿ, ನಾನು ಇದನ್ನು ಹೇಳುತ್ತಿದ್ದೇನೆ. ಸೂಕ್ತ ದೃಷ್ಟಿಕೋನ ಇಲ್ಲದವರು ನಮ್ಮನ್ನು ಆಳುತ್ತಿದ್ದಾರೆ. ಶಿಕ್ಷಣ ಪಡೆದಿದ್ದರೆ ನೀವು ಬೇರೆ ಬೇರೆ ದೃಷ್ಟಿಕೋನದಲ್ಲಿ ನೋಡಬಹುದು’ ಎಂದಿದ್ದಾರೆ ಕಾಜೋಲ್​.

ಪಾಪರಾಜಿಗಳ ಜೊತೆ ನಿಸಾ ದೇವಗನ್ ನಡೆದುಕೊಂಡಿದ್ದು ಹೇಗೆ? ಮಗಳ ವರ್ತನೆ ಬಗ್ಗೆ ಕಾಜೋಲ್​ ಪ್ರತಿಕ್ರಿಯೆ

ಕಾಜೋಲ್​ ಅವರ ಈ ಹೇಳಿಕೆಗೆ ಕೆಲವು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಸ್ವತಃ ಕಾಜೋಲ್​ ಅವರೇ ಶಾಲೆಯನ್ನು ಅರ್ಧಕ್ಕೆ ಬಿಟ್ಟವರು. ಅವರ ಗಂಡ ಕ್ಯಾನ್ಸರ್​ ಮಾರುತ್ತಾರೆ. ಈಗ ಆಕೆಯ ಅತಿಯಾದ ಆತ್ಮವಿಶ್ವಾಸ ಹೇಗಿದೆ ನೋಡಿ’ ಎಂದು ಟ್ರೋಲ್​ ಮಾಡಲಾಗಿದೆ. ಇನ್ನೂ ಕೆಲವರು ಕಾಜೋಲ್​ ಅವರ ಬೆಂಬಲಕ್ಕೆ ನಿಂತಿದ್ದಾರೆ. ‘ಕಾಜೋಲ್​ ಅವರು ಸುಳ್ಳು ಡಿಗ್ರಿ ಸರ್ಟಿಫಿಕೇಟ್​ ಹೊಂದಿಲ್ಲ. ಜನರಿಗೆ ಸುಳ್ಳು ಭರವಸೆ ನೀಡಿಲ್ಲ’ ಎಂದು ಅಭಿಮಾನಿಗಳು ಸಪೋರ್ಟ್​ ಮಾಡಿದ್ದಾರೆ.

ಒಟ್ಟಾರೆ ವಿವಾದ ಆದ ಬಳಿಕ ಕಾಜೋಲ್​ ಅವರು ಸ್ಪಷ್ಟನೆ ನೀಡಿದ್ದಾರೆ. ತಮ್ಮ ಹೇಳಿಕೆಯ ಹಿಂದಿರುವ ಉದ್ದೇಶ ಏನು ಎಂಬುದನ್ನು ಅವರು ತಿಳಿಸಿದ್ದಾರೆ. ‘ನಾನು ಕೇವಲ ಶಿಕ್ಷಣ ಮತ್ತು ಅದರ ಪ್ರಾಮುಖ್ಯತೆ ಬಗ್ಗೆ ಮಾತನಾಡುತ್ತಿದ್ದೆ. ಯಾವುದೇ ರಾಜಕಾರಣಿಗೆ ಅಗೌರವ ಸೂಚಿಸುವುದು ನನ್ನ ಉದ್ದೇಶ ಆಗಿರಲಿಲ್ಲ. ದೇಶವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುತ್ತಿರುವ ಅನೇಕ ಶ್ರೇಷ್ಠ ನಾಯಕರು ನಮ್ಮಲ್ಲಿ ಇದ್ದಾರೆ’ ಎಂದು ಕಾಜೋಲ್​ ಟ್ವೀಟ್​ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.