‘ಬಿಕಿನಿ ಧರಿಸಿಲ್ಲ ಎಂದು ಆ ಫೋಟೋಗ್ರಾಫರ್​ ಕೋಪ ಮಾಡಿಕೊಂಡಿದ್ದ’: ಮನಿಷಾ ಕೊಯಿರಾಲಾ

‘ಹೀರಾಮಂಡಿ’ ವೆಬ್​ ಸರಣಿ ಮೂಲಕ ನಟಿ ಮನಿಷಾ ಕೊಯಿರಾಲಾ ಅವರು ದೊಡ್ಡ ಯಶಸ್ಸು ಪಡೆದಿದ್ದಾರೆ. ಅವರಿಗೆ ಇದ್ದ ಬೇಡಿಕೆ ಹೆಚ್ಚಾಗಿದೆ. ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಅವರು ಅನೇಕ ಸವಾಲುಗಳನ್ನು ಎದುರಿಸಬೇಕಾಗಿತ್ತು. ಬಿಕಿನಿ ಧರಿಸುವಂತೆ ಫೋಟೋಗ್ರಾಫರ್​ಗಳು ಮನಿಷಾಗೆ ಒತ್ತಾಯ ಮಾಡುತ್ತಿದ್ದರು. ಆ ಸಂದರ್ಭ ಹೇಗಿತ್ತು ಎಂಬುದನ್ನು ಮನಿಷಾ ಈಗ ವಿವರಿಸಿದ್ದಾರೆ.

‘ಬಿಕಿನಿ ಧರಿಸಿಲ್ಲ ಎಂದು ಆ ಫೋಟೋಗ್ರಾಫರ್​ ಕೋಪ ಮಾಡಿಕೊಂಡಿದ್ದ’: ಮನಿಷಾ ಕೊಯಿರಾಲಾ
ಮನಿಷಾ ಕೊಯಿರಾಲಾ

Updated on: Jul 08, 2024 | 9:28 PM

ನಟಿ ಮನಿಷಾ ಕೊಯಿರಾಲಾ ಅವರು ಸ್ಟಾರ್​ ನಟಿಯಾಗಿ ಬೆಳೆದಿದ್ದಾರೆ. ಆದರೆ ಆರಂಭದ ದಿನಗಳಲ್ಲಿ ಅವರು ಅನೇಕ ಕಹಿ ಘಟನೆಗಳನ್ನು ಎದುರಿಸಿದ್ದರು. ಆ ಪೈಕಿ ಒಂದು ಘಟನೆಯ ಬಗ್ಗೆ ಈಗ ಅವರು ಮಾತನಾಡಿದ್ದಾರೆ. 90ರ ದಶಕದಲ್ಲಿ ತಾವು ಅನುಭವಿಸಿದ ಕಷ್ಟದ ದಿನಗಳನ್ನು ಮೆಲುಕು ಹಾಕಿದ್ದಾರೆ. ನಟಿಯಾಗಬೇಕು ಎಂಬ ಹಂಬಲ ಹೊಂದಿದ್ದ ಅವರು ಫೋಟೋಶೂಟ್​ ಮಾಡಿಸಲು ತೆರಳಿದ್ದರು. ಆಗ ಫೋಟೋಗ್ರಾಫರ್​ ನಡೆದುಕೊಂಡ ರೀತಿಯ ಬಗ್ಗೆ ಮನಿಷಾಗೆ ತೀವ್ರ ಅಸಮಾಧಾನ ಇದೆ. ಬಿಕಿನಿ ಧರಿಸುವಂತೆ ಫೋಟೋಗ್ರಾಫರ್​ ಒತ್ತಾಯ ಮಾಡಿದ್ದ ಎಂಬುದನ್ನು ಮನಿಷಾ ಕೊಯಿರಾಲಾ ಈಗ ನೆನಪು ಮಾಡಿಕೊಂಡಿದ್ದಾರೆ.

‘ನನ್ನ ವೃತ್ತಿಜೀವನದ ಆರಂಭದಲ್ಲಿ ಫೋಟೋಶೂಟ್​ ಮಾಡಿಸಲು ಹೇಳಿದ್ದರು. ಆಗ ತುಂಬ ಫೇಮಸ್​ ಆಗಿದ್ದ ಫೋಟೋಗ್ರಾಫರ್​ ಒಬ್ಬರು ಇದ್ದರು. ಅಮ್ಮನ ಜೊತೆ ನಾನು ಅವರ ಬಳಿ ಹೋದೆ. ನೀವೇ ಮುಂದಿನ ಸೂಪರ್​ ಸ್ಟಾರ್​ ಎಂದು ಆ ಫೋಟೋಗ್ರಾಫರ್ ನನಗೆ ಹೇಳಿದರು. ನಂತರ ಒಂದು ಬಿಕಿನಿ ತಂದುಕೊಟ್ಟು, ಅದನ್ನು ಧರಿಸು ಅಂತ ಒತ್ತಾಯಿಸಿದರು’ ಎಂದಿದ್ದಾರೆ ಮನಿಷಾ ಕೊಯಿರಾಲಾ.

‘ಸರ್​, ನಾನು ಇದನ್ನು ಬೀಚ್​ಗೆ ಹೋದಾಗ ಅಥವಾ ಈಜಲು ಹೋದಾಗ ಮಾತ್ರ ಧರಿಸುತ್ತೇನೆ. ಒಂದು ವೇಳೆ ಈ ರೀತಿಯಲ್ಲಿ ನಾನು ಸಿನಿಮಾ ಅವಕಾಶ ಪಡೆಯಬೇಕು ಎಂಬುದಾದರೆ ಅದು ನನಗೆ ಬೇಡ. ನಾನು ಬಿಕಿನಿ ಧರಿಸುವುದಿಲ್ಲ. ನನ್ನ ಫೋಟೋ ತೆಗೆಯುವುದಾದರೆ ಪೂರ್ತಿ ಬಟ್ಟೆಯಲ್ಲೇ ತೆಗೆಯಿರಿ ಅಂತ ಅವರಿಗೆ ನೇರವಾಗಿ ಹೇಳಿದೆ’ ಎಂದು ಆ ಘಟನೆಯನ್ನು ಮನಿಷಾ ಕೊಯಿರಾಲಾ ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ: ‘ನನ್ನ ಮದುವೆ ಆಗ್ತೀಯಾ’: ಈ ನಟಿಗೆ ಪ್ರಪೋಸ್​ ಮಾಡಿದ್ದರು ಸಲ್ಮಾನ್​ ಖಾನ್​

ಮನಿಷಾ ನೀಡಿದ ಉತ್ತರದಿಂದ ಆ ಫೋಟೋಗ್ರಾಫರ್​ಗೆ ಕೋಪ ಬಂದಿತ್ತು. ‘ಮಣ್ಣು ಹಸಿಯಾಗಲು ಒಪ್ಪದಿದ್ದರೆ ನಾನು ಮೂರ್ತಿ ಮಾಡಲು ಹೇಗೆ ಸಾಧ್ಯ’ ಎಂದು ಆತ ಸಿಟ್ಟುಮಾಡಿಕೊಂಡಿದ್ದ. ‘ಇದು ಅಂಥ ಜನರ ಮನಸ್ಥಿತಿ. ಎಲ್ಲರೂ ಹೀಗೆ ಇರುವುದಿಲ್ಲ. ನಾನು ದೊಡ್ಡ ಸೆಲೆಬ್ರಿಟಿ ಆದ ಬಳಿಕ ಅದೇ ವ್ಯಕ್ತಿ ನನ್ನ ಫೋಟೋಶೂಟ್​ ಮಾಡಿದ. ಅವರಿಗೆ ನಾನು ಅವಮಾನ ಮಾಡುತ್ತಿಲ್ಲ. ಆದರೆ ಅವರ ತಿಳಿವಳಿಕೆಯೇ ಅಷ್ಟು. ಆದ್ದರಿಂದ ಅವರು ಆ ರೀತಿ ವರ್ತಿಸಿದ್ದರು’ ಎಂದಿದ್ದಾರೆ ಮನಿಷಾ ಕೊಯಿರಾಲಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us