ಬಾಬಾ ಸಿದ್ಧಿಕಿ ಅಂತ್ಯಕ್ರಿಯೆಯಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡಿಲ್ಲ ಯಾಕೆ?

ಶಾರುಖ್​ ಖಾನ್​ ಅವರು ಸಲ್ಮಾನ್ ಖಾನ್ ಜೊತೆ ಬಾಬಾ ಸಿದ್ಧಿಕಿಯ ಮನೆಗೆ ಹೋಗಿ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದು ಬಹಳ ಸುದ್ದಿ ಆಗಿತ್ತು. ಅಷ್ಟರಮಟ್ಟಿಗೆ ಅವರು ಬಾಬಾ ಸಿದ್ಧಿಕಿ ಜೊತೆ ಆಪ್ತರಾಗಿದ್ದರು. ಆದರೆ ಈಗ ಬಾಬಾ ಸಿದ್ಧಿಕಿಯ ಅಂತ್ಯಕ್ರಿಯೆಗೆ ಶಾರುಖ್ ಖಾನ್ ಬಂದಿಲ್ಲ. ಯಾಕೆ ಎಂಬ ಬಗ್ಗೆ ಬಿ-ಟೌನ್​ ವಲಯದಲ್ಲಿ ಗುಸುಗುಸು ಕೇಳಿಬರುತ್ತಿದೆ.

ಬಾಬಾ ಸಿದ್ಧಿಕಿ ಅಂತ್ಯಕ್ರಿಯೆಯಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡಿಲ್ಲ ಯಾಕೆ?
ಶಾರುಖ್​ ಖಾನ್, ಬಾಬಾ ಸಿದ್ಧಿಕಿ

Updated on: Oct 16, 2024 | 3:30 PM

ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ಧಿಕಿ ಹತ್ಯೆಯಿಂದಾಗಿ ಮುಂಬೈ ಮಂದಿಗೆ ಆತಂಕ ಶುರುವಾಗಿದೆ. ಅದರಲ್ಲೂ ಬಾಬಾ ಸಿದ್ಧಿಕಿ ಜೊತೆ ಆಪ್ತವಾಗಿದ್ದ ಎಲ್ಲರೂ ಕೂಡ ಚಿಂತೆಯಲ್ಲೇ ಕಾಲ ಕಳೆಯುವಂತಾಗಿದೆ. ಸಲ್ಮಾನ್​ ಖಾನ್​ ಮತ್ತು ಬಾಬಾ ಸಿದ್ಧಿಕಿ ಅವರು ಆಪ್ತರಾಗಿದ್ದರು. ಅಲ್ಲದೇ, ಶಾರುಖ್ ಖಾನ್​ ಕೂಡ ಬಾಬಾ ಸಿದ್ಧಿಕಿ ಜೊತೆ ಸ್ನೇಹ ಹೊಂದಿದ್ದರು. ಬಾಬಾ ಸಿದ್ಧಿಕಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಸಲ್ಮಾನ್​ ಖಾನ್​ ಮತ್ತು ಶಾರುಖ್​ ಖಾನ್​ ಅವರು ಜೊತೆಯಾಗಿ ಭಾಗವಹಿಸಿದ್ದರು. ಆದರೆ ಈಗ ಬಾಬಾ ಸಿದ್ದಿಕಿ ಅವರ ಅಂತ್ಯಕ್ರಿಯೆಯಲ್ಲಿ ಶಾರುಖ್​ ಖಾನ್ ಕಾಣಿಸಿಕೊಂಡಿಲ್ಲ!

ಸಲ್ಮಾನ್​ ಖಾನ್​ ಅವರಿಗೆ ಸಹಾಯ ಮಾಡಿದ್ದಕ್ಕಾಗಿ ಬಾಬಾ ಸಿದ್ಧಿಕಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಲಾರೆನ್ಸ್​ ಬಿಷ್ಣೋಯ್​ ಗ್ಯಾಂಗ್​ನವರು ಹೊಣೆ ಹೊತ್ತಿದ್ದಾರೆ. ಸಲ್ಮಾನ್​ ಖಾನ್​ಗೆ ಯಾರೇ ಸಹಾಯ ಮಾಡಿದರೂ ಕೂಡ ಅವರಿಗೆ ಇದೇ ಗತಿ ಬರಲಿದೆ ಎಂದು ಗ್ಯಾಂಗ್​ ಸದಸ್ಯರು ಬೆದರಿಕೆ ಹಾಕಿದ್ದಾರೆ. ಈ ಪ್ರಕರಣದಲ್ಲಿ ತಮ್ಮ ಹೆಸರು ಸಿಕ್ಕಿಕೊಳ್ಳುವುದು ಶಾರುಖ್ ಖಾನ್ ಅವರಿಗೆ ಇಷ್ಟ ಇಲ್ಲ. ಹಾಗಾಗಿ ಅವರು ಅಂತ್ಯಕ್ರಿಯೆ ಬಂದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ:  ಯಾರನ್ನೂ ಭೇಟಿ ಮಾಡಲ್ಲ: ಬಾಬಾ ಸಿದ್ಧಿಕಿ ಹತ್ಯೆ ಬಳಿಕ ಸಲ್ಮಾನ್ ಖಾನ್ ನಿರ್ಧಾರ

ಬಾಬಾ ಸಿದ್ಧಿಕಿ ಹತ್ಯೆಯಿಂದಾಗಿ ಅವರ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ. ಈ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅವರು ಬೆಂಬಲಕ್ಕೆ ನಿಂತಿದ್ದಾರೆ. ಸಿನಿಮಾ ಕೆಲಸಗಳನ್ನು ಅವರು ಬದಿಗಿಟ್ಟಿದ್ದಾರೆ. ಬಿಗ್ ಬಾಸ್​ ಕಾರ್ಯಕ್ರಮದ ಚಿತ್ರೀಕರಣವನ್ನು ಅರ್ಧಕ್ಕೆ ನಿಲ್ಲಿಸಿ, ಬಾಬಾ ಸಿದ್ದಿಕಿಯ ಅಂತ್ಯಕ್ರಿಯೆಗೆ ಬೇಕಾದ ತಯಾರಿಯನ್ನು ಮಾಡಿದ್ದಾರೆ. ಬೆದರಿಕೆಗಳಿಗೆ ಹೆದರದೇ ಅವರು ಅಗಲಿದ ಸ್ನೇಹಿತರ ಕುಟುಂಬಕ್ಕೆ ಸಾಥ್ ನೀಡಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್​ಗೆ ಸಹಾಯ ಮಾಡುವವರಿಗೆ ಎಚ್ಚರಿಕೆ ನೀಡಿದ ಬಾಬಾ ಸಿದ್ಧಿಕಿ ಹಂತಕರು

ಶಾರುಖ್ ಖಾನ್​ ಅವರು ಒಂದಷ್ಟು ವರ್ಷಗಳ ಕಾಲ ಸಿನಿಮಾದ ಸತತ ಸೋಲಿನಿಂದ ಕುಗ್ಗಿದ್ದರು. ಅದೇ ಸಮಯದಲ್ಲಿ ಅವರ ಪುತ್ರ ಆರ್ಯನ್​ ಖಾನ್​ ಡ್ರಗ್ಸ್ ಪಾರ್ಟಿ ಆರೋಪದಲ್ಲಿ ಜೈಲು ಪಾಲಾಗಿದ್ದರು. ಆ ತಾಪತ್ರಯಗಳಿಂದ ಅವರು ಈಗ ಹೊರಬಂದಿದ್ದಾರೆ. ಮತ್ತೆ ಅನಗತ್ಯವಾದ ಸಂಕಷ್ಟದಲ್ಲಿ ಸಿಲುಕಿಕೊಳ್ಳಲು ಶಾರುಖ್​ಗೆ ಇಷ್ಟವಿಲ್ಲ. ತಾವಾಯಿತು, ತಮ್ಮ ಸಿನಿಮಾ ಆಯಿತು ಎಂದು ಅವರು ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us