
ಮಾಡೆಲಿಂಗ್ ಹಾಗೂ ವಿಭಿನ್ನ ಫ್ಯಾಷನ್ ಉಡುಪುಗಳ ಮೂಲಕವೇ ಸದಾ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುವ ಬಾಲಿವುಡ್ ನಟಿ ಉರ್ಫಿ ಜಾವೇದ್ (Uorfi Javed) ಕಳೆದ ವರ್ಷ ತಮ್ಮ ಮುಖದ ಕಾರಣಕ್ಕೆ ಭಾರಿ ಸುದ್ದಿಯಾಗಿದ್ದರು. ಅವರ ಕಣ್ಣು, ಕೆನ್ನೆ ಹಾಗೂ ತುಟಿಗಳು ವಿಪರೀತವಾಗಿ ಉಬ್ಬಿಕೊಂಡಿದ್ದ ಫೋಟೋಗಳು ವೈರಲ್ ಆದಾಗ, ನೆಟ್ಟಿಗರು ‘ಕಾಸ್ಮೆಟಿಕ್ ಫಿಲ್ಲರ್ಸ್ (Plastic Surgery/Fillers) ಮಾಡಿಸಿಕೊಳ್ಳಲು ಹೋಗಿ ಮುಖ ಹಾಳು ಮಾಡಿಕೊಂಡಿದ್ದಾರೆ’ ಎಂದು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು.
ಆದರೆ, ತಮ್ಮ ಮುಖ ಆ ರೀತಿ ಉಬ್ಬಿಕೊಳ್ಳಲು ಯಾವುದೇ ಪ್ಲಾಸ್ಟಿಕ್ ಸರ್ಜರಿ ಅಥವಾ ಫಿಲ್ಲರ್ಸ್ ಕಾರಣವಲ್ಲ, ಬದಲಿಗೆ ಅದೊಂದು ಆರೋಗ್ಯ ಸಮಸ್ಯೆ ಎಂದು ಈಗ ಉರ್ಫಿ ಜಾವೇದ್ ಹೇಳಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಅಸಲಿ ಸತ್ಯವನ್ನು ಅವರು ಬಹಿರಂಗಪಡಿಸಿದ್ದಾರೆ. ‘ಇದು ಫಿಲ್ಲರ್ಸ್ ಅಲ್ಲ, ಹೈ ಕಾರ್ಟಿಸೋಲ್ ಮತ್ತು ಮಾನಸಿಕ ಒತ್ತಡ’ ಎಂದು ಅವರು ಹೇಳಿದ್ದಾರೆ.
ತಮ್ಮ ಹಳೆಯ ಮುಖದ ಫೋಟೋಗಳನ್ನು ವಿಡಿಯೋದಲ್ಲಿ ತೋರಿಸುತ್ತಾ ಮಾತನಾಡಿದ ಉರ್ಫಿ, ‘ಇದು ಒಂದುವರೆ ವರ್ಷದ ಹಿಂದೆ ನನ್ನ ಮುಖ ಇದ್ದ ಸ್ಥಿತಿ. ಆಗ ಎಲ್ಲರೂ ನಾನು ಫಿಲ್ಲರ್ಸ್ ಮಾಡಿಸಿಕೊಂಡು ಮುಖದ ಶೇಪ್ ಹಾಳು ಮಾಡಿಕೊಂಡಿದ್ದೇನೆ ಅಂದುಕೊಂಡಿದ್ದರು. ಆದರೆ ಅಸಲಿಗೆ ನನ್ನ ದೇಹದಲ್ಲಿದ್ದ ಅತಿಯಾದ ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಮತ್ತು ವಿಪರೀತ ಮಾನಸಿಕ ಒತ್ತಡದಿಂದಾಗಿ ನನ್ನ ಮುಖ ಆ ರೀತಿ ಊದಿಕೊಂಡಿತ್ತು. ನಾನು ಯಾವುದೇ ಕಾಸ್ಮೆಟಿಕ್ ಸರ್ಜರಿ ಮಾಡಿಸಿರಲಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಮುಖ ಉಬ್ಬಿಕೊಳ್ಳಲು ಮತ್ತೊಂದು ಪ್ರಮುಖ ಕಾರಣವನ್ನು ಉರ್ಫಿ ಜಾವೇದ್ ಬಿಚ್ಚಿಟ್ಟಿದ್ದಾರೆ. ಅವರಿಗೆ ಬೆಕ್ಕುಗಳೆಂದರೆ ಅಲರ್ಜಿ! ಈ ವಿಷಯವೇ ಮೊದಲು ಅವರಿಗೆ ತಿಳಿದಿರಲಿಲ್ಲವಂತೆ. ‘ನನ್ನ ಮನೆಯಲ್ಲಿ ಮೂರು ಮುದ್ದಿನ ಬೆಕ್ಕುಗಳಿವೆ. ಆದರೆ ನನಗೆ ಬೆಕ್ಕಿನ ರೋಮಗಳಿಂದ ಅಲರ್ಜಿ ಆಗುತ್ತದೆ ಎಂಬುದು ತಡವಾಗಿ ತಿಳಿಯಿತು. ಹಲವು ವೈದ್ಯರನ್ನು ಭೇಟಿಯಾದಾಗ ಕೆಲವರು ಇದು ಸೈನಸ್ ಸಮಸ್ಯೆ ಎಂದಿದ್ದರು. ಕೊನೆಗೆ ಟೆಸ್ಟ್ ಮಾಡಿಸಿದಾಗ ನನ್ನ ಮುದ್ದಿನ ಬೆಕ್ಕುಗಳೇ ಈ ಅಲರ್ಜಿಗೆ ಕಾರಣ ಎಂದು ಗೊತ್ತಾಯಿತು. ಆದರೆ ಅಷ್ಟರಲ್ಲಾಗಲೇ ನಾನು ಅವುಗಳ ಜೊತೆ ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸಲು ಆರಂಭಿಸಿದ್ದೆ’ ಎಂದಿದ್ದಾರೆ.
ಇದನ್ನೂ ಓದಿ: 40 ಸಾವಿರ ರೂ. ಸಂಬಳ ಇದ್ದಾಗ ಮನೆ ನಡೆಸಲು ಕಷ್ಟಪಟ್ಟಿದ್ದ ಉರ್ಫಿ ಜಾವೇದ್; ಈಗ ಎಷ್ಟು?
‘ಹಿಂದೆ ನಾನು ದಪ್ಪಗಾಗುತ್ತೇನೆ ಎಂಬ ಭಯದಿಂದ ಸರಿಯಾಗಿ ಊಟವನ್ನೇ ಮಾಡುತ್ತಿರಲಿಲ್ಲ. ಆದರೆ ಈಗ ನಾನು ನನ್ನ ಆರೋಗ್ಯದ ಕಡೆ ಗಮನ ಹರಿಸುತ್ತಿದ್ದೇನೆ. ವರ್ಕೌಟ್ ಮಾಡಲು ಹಾಗೂ ಅಲರ್ಜಿಯನ್ನು ತಡೆಗಟ್ಟಲು ಇಮ್ಯುನೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಈಗ ಸರಿಯಾಗಿ ಆಹಾರ ಸೇವಿಸುತ್ತಿರುವುದರಿಂದ ನನ್ನ ಮುಖ ಮೊದಲಗಿಂತ ತುಂಬಾ ಚೆನ್ನಾಗಿದೆ’ ಎಂದು ತಮ್ಮ ಫಿಟ್‌ನೆಸ್ ರಹಸ್ಯವನ್ನು ಹಂಚಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.