ಏಳು ಸಾವಿರ ಕೋಟಿ ರೂಪಾಯಿ ಕೊಡಿ; ಪರಿಹಾರ ಕೇಳಿ ಕೋರ್ಟ್ ಮೆಟ್ಟಿಲೇರಿದ ಊರ್ವಶಿ

ಬಾಲಿವುಡ್ ನಟಿ ಊರ್ವಶಿ ರೌಟೇಲಾ ತಮ್ಮ ಹೆಸರು ಹಾಗೂ ಫೋಟೋಗಳನ್ನು ಅಕ್ರಮವಾಗಿ ಬಳಸಿದ ಅಮೆರಿಕದ ಎಐ ಕಂಪನಿ ವಿರುದ್ಧ 7,000 ಕೋಟಿ ರೂಪಾಯಿ ನಷ್ಟ ಪರಿಹಾರ ಕೋರಿ ದಾವೆ ಹೂಡಿದ್ದಾರೆ. ತಂತ್ರಜ್ಞಾನ ದುರ್ಬಳಕೆ ತಡೆಯಲು ನಟಿ ಕಾನೂನು ಸಮರಕ್ಕಿಳಿದಿದ್ದು, ಎಐ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಏಳು ಸಾವಿರ ಕೋಟಿ ರೂಪಾಯಿ ಕೊಡಿ; ಪರಿಹಾರ ಕೇಳಿ ಕೋರ್ಟ್ ಮೆಟ್ಟಿಲೇರಿದ ಊರ್ವಶಿ
ಊರ್ವಶಿ
Edited By:

Updated on: Sep 30, 2026 | 7:55 AM

ಮುಖ್ಯಾಂಶಗಳು

  • ಎಐ ಕಂಪನಿಗೆ ಅಮೆರಿಕದಲ್ಲೇ ಶಾಕ್
  • ಉರ್ವಶಿ ರೌಟೇಲಾ ಬಿಗ್ ಲೀಗಲ್ ಅಟ್ಯಾಕ್
  • 'ಪರ್ಸನಾಲಿಟಿ ರೈಟ್ಸ್' ಬೆಂಬಲಕ್ಕೆ ನಿಂತ ಕಲಾ ಜಗತ್ತು

ತಂತ್ರಜ್ಞಾನ ಬೆಳೆದಂತೆ ಅದರ ದುರ್ಬಳಕೆಯೂ ಹೆಚ್ಚಾಗುತ್ತಿದೆ. ಪ್ರಮುಖವಾಗಿ ಕೃತಕ ಬುದ್ಧಿಮತ್ತೆ ಅಥವಾ ಎಐ ತಂತ್ರಜ್ಞಾನವು ಚಿತ್ರರಂಗದ ತಾರೆಯರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದೀಗ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಎಐ ಕಂಪನಿಯೊಂದರ ವಿರುದ್ಧ ಬೃಹತ್ ಮೊತ್ತದ ಕಾನೂನು ಸಮರಕ್ಕೆ ಧುಮುಕಿದ್ದಾರೆ. ತಮ್ಮ ಅನುಮತಿಯಿಲ್ಲದೆ ತಮ್ಮ ಐಡೆಂಟಿಟಿ ಬಳಸಿದ್ದಕ್ಕಾಗಿ ಅವರು ಬರೋಬ್ಬರಿ 7000 ಕೋಟಿ ರೂಪಾಯಿ ನಷ್ಟ ಪರಿಹಾರ ಕೇಳಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ಅಮೆರಿಕದ ಲಾಸ್ ಎಂಜಲೀಸ್ ಮೂಲದ ಎಐ ಸಂಸ್ಥೆಯೊಂದು ಊರ್ವಶಿ ರೌಟೇಲಾ ಅವರ ಹೆಸರು, ಫೋಟೋ ಹಾಗೂ ವೀಡಿಯೋಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಅಕ್ರಮವಾಗಿ ಬಳಸಿಕೊಂಡಿದೆ. ಇದರಿಂದ ಕೆರಳಿರುವ ನಟಿಯ ತಂಡವು ಆ ಕಂಪನಿಗೆ ಪ್ರತ್ಯುತ್ತರ ನೀಡಿದೆ. ‘ನಿಮ್ಮ ಎಐ ಕಂಪನಿಯನ್ನು ಬೆಳೆಸಿಕೊಳ್ಳಿ. ನಿಮ್ಮ ಬ್ರಾಂಡ್ ನಿರ್ಮಿಸಿಕೊಳ್ಳಿ. ಆದರೆ ಅನುಮತಿಯಿಲ್ಲದೆ ಊರ್ವಶಿ ಅವರ ಹೆಸರನ್ನು ನಿಮ್ಮ ಉದ್ಯಮಕ್ಕೆ ಬಳಸಬೇಡಿ’ ಎಂದು ನಟಿಯ ತಂಡ ಕಟ್ಟುನಿಟ್ಟಾಗಿ ಎಚ್ಚರಿಸಿದೆ.

ಇತ್ತೀಚೆಗೆ ಭಾರತೀಯ ಚಿತ್ರರಂಗದ ಹಲವು ಸೂಪರ್ ಸ್ಟಾರ್‌ಗಳು ತಮ್ಮ ಪರ್ಸನಾಲಿಟಿ ರೈಟ್ಸ್ ಅಥವಾ ವ್ಯಕ್ತಿತ್ವ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಕಾನೂನು ನೆರವು ಪಡೆಯುತ್ತಿದ್ದಾರೆ. ಅಮಿತಾಭ್ ಬಚ್ಚನ್, ಚಿರಂಜೀವಿ, ನಾಗಾರ್ಜುನ ಮತ್ತು ಸಲ್ಮಾನ್ ಖಾನ್ ಅವರಂತಹ ದಿಗ್ಗಜ ನಟರು ಈಗಾಗಲೇ ಈ ಕುರಿತು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಯಾವುದೇ ಕಂಪನಿಗಳು ತಮ್ಮ ಅನುಮತಿಯಿಲ್ಲದೆ ಹೆಸರು ಮತ್ತು ರೂಪವನ್ನು ಬಳಸದಂತೆ ತಡೆಯಾಜ್ಞೆ ತಂದಿದ್ದಾರೆ.

ಈಗ ಸಾಲಿಗೆ ಊರ್ವಶಿ ರೌಟೇಲಾ ಕೂಡ ಸೇರ್ಪಡೆಯಾಗಿದ್ದಾರೆ. ಅಮೆರಿಕದ ಸಂಸ್ಥೆಯೊಂದರ ವಿರುದ್ಧ ಅವರು ಹೂಡಿರುವ ಈ 7000 ಕೋಟಿ ರೂಪಾಯಿ ದಾವೆ ಚಿತ್ರರಂಗದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಕಾನೂನು ಹೋರಾಟ ಮುಂಬರುವ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಎಐ ದುರ್ಬಳಕೆ ತಡೆಯಲು ಇದು ಪ್ರಮುಖ ಹೆಜ್ಜೆಯಾಗಲಿದೆ.

ಇದನ್ನೂ ಓದಿ:  ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಊರ್ವಶಿ ಪುತ್ರಿ ತೇಜಾಲಕ್ಷ್ಮಿ; ತೆರೆಮೇಲೆ ಒಂದಾದ ಅಮ್ಮ-ಮಗಳು

ಇನ್ನು ಊರ್ವಶಿ ಅವರ ಸಿನಿಮಾಗಳ ವಿಷಯಕ್ಕೆ ಬಂದರೆ, ಅವರು ಇತ್ತೀಚೆಗೆ ‘ವೆಲ್ಕಮ್ ಟು ದ ಜಂಗಲ್’ ಚಿತ್ರದಲ್ಲಿ ಅಭಿನಯಿಸಿದ್ದರು. ಪ್ರಸ್ತುತ ಅವರ ಕೈಯಲ್ಲಿ ‘ಬ್ಲಾಕ್ ರೋಸ್’ ಮತ್ತು ‘ಕಸೂರ್ 2’ ಎಂಬ ಪ್ರಮುಖ ಸಿನಿಮಾಗಳಿವೆ. ಈ ಚಿತ್ರಗಳ ಮೇಲೆಯೂ ಅವರ ಅಭಿಮಾನಿಗಳು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us