
ಬಾಲಿವುಡ್‌ನ ಸ್ಟಾರ್ ಜೋಡಿ ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ ತಮ್ಮ ಮುದ್ದಾದ ಮಗನ ಪ್ರೈವೆಸಿ ವಿಷಯದಲ್ಲಿ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ, ಸಿದ್ದಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ದಂಪತಿಯ ಹಾದಿಯನ್ನೇ ತುಳಿದಿದ್ದಾರೆ. ಇತ್ತೀಚೆಗಷ್ಟೇ ಮುಂಬೈ ವಿಮಾನ ನಿಲ್ದಾಣದಲ್ಲಿ ತಮ್ಮ ನವಜಾತ ಶಿಶು ವಿಹಾನ್‌ನನ್ನು (Vihaan Kaushal) ಪಾಪರಾಜಿಗಳಿಗೆ ಪರಿಚಯಿಸಿರುವ ಈ ದಂಪತಿ, ಮಗನ ಫೋಟೋಗಳನ್ನು ಕ್ಲಿಕ್ಕಿಸದಂತೆ ಮತ್ತು ಸಾರ್ವಜನಿಕವಾಗಿ ಹಂಚಿಕೊಳ್ಳದಂತೆ ಮನವಿ ಮಾಡಿದ್ದಾರೆ.
ಏರ್‌ಪೋರ್ಟ್‌ನಲ್ಲಿ ವಿಕ್ಕಿ ಕೌಶಲ್ ಫೋಟೋಗಳಿಗೆ ಪೋಸ್ ನೀಡಿದರು. ಮಗ ವಿಹಾನ್‌ನನ್ನು ಎದೆಗೆ ಅಪ್ಪಿಕೊಂಡಿದ್ದ ಕತ್ರಿನಾ ಕೈಫ್ ಮಾತ್ರ ತಮ್ಮ ಹಾಗೂ ಮಗನ ಫೋಟೋ ಕ್ಲಿಕ್ಕಿಸದಂತೆ ವಿನಂತಿಸಿದರು. ಫೋಟೋ ತೆಗೆಯಲು ನಿರಾಕರಿಸಿದರೂ, ಈ ತಾರಾ ದಂಪತಿ ತಮ್ಮ ಮಗನನ್ನು ಮೊದಲ ಬಾರಿಗೆ ಮಾಧ್ಯಮದವರಿಗೆ ಹತ್ತಿರದಿಂದ ತೋರಿಸಿ ಪರಿಚಯಿಸಿದರು. ‘ಕತ್ರಿನಾ ಅವರು ವಿಕ್ಕಿ ಜೊತೆಯಲ್ಲೇ ಇದ್ದರು. ಆದರೆ ಮಗನೊಂದಿಗೆ ಫೋಟೋ ತೆಗೆಯದಂತೆ ವಿನಂತಿಸಿದರು. ಇದೇ ವೇಳೆ ಅವರು ಮಗನನ್ನು ನಮಗೆ ಪರಿಚಯಿಸಿದರು’ ಎಂದು ಏರ್‌ಪೋರ್ಟ್‌ನಲ್ಲಿದ್ದ ಪಾಪರಾಜಿಗಳು ತಿಳಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.
ಯಾವಾಗಲೂ ತಮ್ಮ ವೈಯಕ್ತಿಕ ಜೀವನವನ್ನುಮಾಧ್ಯಮದ ಕ್ಯಾಮೆರಾಗಳಿಂದ ದೂರ ಇಡಲು ಇಷ್ಟಪಡುವ ಕತ್ರಿನಾ ಮತ್ತು ವಿಕ್ಕಿ, ಈ ಬಾರಿ ಮಗನನ್ನು ಮಾಧ್ಯಮಗಳಿಗೆ ಪರಿಚಯಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಜೊತೆಗೆ ವಿಹಾನ್ ಫೋಟೋಗಳನ್ನು ಎಲ್ಲೂ ಪ್ರಕಟಿಸಬಾರದು ಎಂಬ ಸ್ಪಷ್ಟ ನಿಯಮವನ್ನು ತಿಳಿಸುವ ಮೂಲಕ ಮಗನ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಮುಂದಾಗಿದ್ದಾರೆ.
ಕಳೆದ ವರ್ಷದ ನವೆಂಬರ್‌ನಲ್ಲಿ ಕತ್ರಿನಾ ಮತ್ತು ವಿಕ್ಕಿ ದಂಪತಿ ಗಂಡು ಮಗುವನ್ನು ಬರಮಾಡಿಕೊಂಡಿದ್ದರು. ‘ನಮ್ಮ ಸಂತೋಷದ ಗುಚ್ಛ ಬಂದಿದೆ. ಅಪಾರ ಪ್ರೀತಿ ಮತ್ತು ಕೃತಜ್ಞತೆಯೊಂದಿಗೆ ನಮ್ಮ ಮುದ್ದಾದ ಮಗನನ್ನು ಸ್ವಾಗತಿಸುತ್ತಿದ್ದೇವೆ’ ಎಂದು ಪೋಸ್ಟ್ ಹಂಚಿಕೊಂಡಿದ್ದರು. ತದನಂತರ ಜನವರಿ 7ರಂದು ತಮ್ಮ ಮಗನಿಗೆ ವಿಹಾನ್ ಕೌಶಲ್ ಎಂದು ಹೆಸರಿಟ್ಟಿರುವುದಾಗಿ ಅಧಿಕೃತವಾಗಿ ತಿಳಿಸಿದ್ದರು.
ಇದನ್ನೂ ಓದಿ: ಕತ್ರಿನಾ ಕೈಫ್ ಜತೆಗಿನ ಸಂಸಾರ ವಿಕ್ಕಿ ಕೌಶಲ್ಗೆ ಬೋರ್ ಆಯ್ತಾ? ವಿಡಿಯೋ ವೈರಲ್
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ 2021ರ ಡಿಸೆಂಬರ್ 9ರಂದು ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಬರ್ವಾರಾದಲ್ಲಿ ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಮದುವೆಯಾಗುವವರೆಗೂ ತಮ್ಮ ಪ್ರೀತಿಯ ವಿಚಾರವನ್ನು ಈ ಜೋಡಿ ರಹಸ್ಯವಾಗಿಟ್ಟಿತ್ತು. ಅದೇ ರೀತಿ ಈಗ ಮಗನ ಫೋಟೋವನ್ನು ಕೂಡ ಅವರು ಬಹಿರಂಗಪಡಿಸಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 4:04 pm, Thu, 28 May 26