
‘ವಾರ್ 2’ ಸಿನಿಮಾದ ನಿರ್ಮಾಪಕರು ಅಂದುಕೊಂಡಿದ್ದು ಒಂದು, ಆದರೆ ಆಗಿದ್ದು ಮತ್ತೊಂದು. ಈ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇತ್ತು. ಜನರು ಕೂಡ ಕಾತರದಿಂದ ಈ ಚಿತ್ರಕ್ಕಾಗಿ ಕಾದಿದ್ದರು. ಆಗಸ್ಟ್ 14ರಂದು ಬಿಡುಗಡೆ ಆದ ‘ವಾರ್ 2’ (War 2) ಸಿನಿಮಾ ಗಲ್ಲಾಪಟ್ಟಿಗೆಯಲ್ಲಿ ಧೂಳೆಬ್ಬಿಸುತ್ತದೆ ಎಂದೇ ಊಹಿಸಲಾಗಿತ್ತು. ಆದರೆ ಹಾಕಿದ ಬಂಡವಾಳ ಕೂಡ ವಾಪಸ್ ಬಂದಿಲ್ಲ! ಇದರಿಂದ ನಿರ್ಮಾಣ ಸಂಸ್ಥೆ ‘ಯಶ್ ರಾಜ್ ಫಿಲ್ಸ್ಮ್’ (Yash Raj Films) ನಷ್ಟ ಅನುಭವಿಸಿದೆ. ಅಲ್ಲದೇ, ತೆಲುಗಿನಲ್ಲಿ ವಿತರಣೆ ಹಕ್ಕು ಪಡೆದಿದ್ದ ನಾಗವಂಶಿ (Naga Vamshi) ಕೂಡ ಕೈ ಸುಟ್ಟುಕೊಂಡಿದ್ದಾರೆ. ಅವರಿಗೆ ನಷ್ಟ ತುಂಬಿಕೊಡಲು ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ ಮುಂದಾಗಿದೆ ಎಂಬ ಸುದ್ದಿ ಕೇಳಿಬಂದಿದೆ.
ಆಂಧ್ರ ಮತ್ತು ತೆಲಂಗಾಣದಲ್ಲಿ ‘ವಾರ್ 2’ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಮೂಡಲು ಕಾರಣ ಇತ್ತು. ಈ ಚಿತ್ರದಲ್ಲಿ ಹೃತಿಕ್ ರೋಷನ್ ಜೊತೆ ತೆಲುಗು ನಟ ಜೂನಿಯರ್ ಎನ್ಟಿಆರ್ ಅವರು ನಟಿಸಿದ್ದಾರೆ. ಇದು ಅವರ ಮೊದಲ ಬಾಲಿವುಡ್ ಸಿನಿಮಾ. ಹಾಗಾಗಿ ಜನರು ಅಪಾರ ನಿರೀಕ್ಷೆ ಹೊಂದಿದ್ದರು. ಅದರ ಆಧಾರದ ಮೇಲೆ ವಿತರಕ ನಾಗವಂಶಿ ಅವರು ಬೇರೆಯದೇ ಲೆಕ್ಕಾಚಾರ ಹಾಕಿದ್ದರು.
ವರದಿಗಳ ಪ್ರಕಾರ, ‘ವಾರ್ 2’ ಸಿನಿಮಾದ ತೆಲುಗು ವಿತರಣೆ ಹಕ್ಕುಗಳನ್ನು ನಾಗವಂಶಿ ಅವರು ಬರೋಬ್ಬರಿ 80 ಕೋಟಿ ರೂಪಾಯಿ ನೀಡಿ ಖರೀದಿಸಿದ್ದರು. ತೆಲುಗಿನಲ್ಲಿ ಈ ಸಿನಿಮಾ ಏನಿಲ್ಲವೆಂದ್ರೂ 100 ಕೋಟಿ ರೂಪಾಯಿಗೂ ಹೆಚ್ಚು ಕಮಾಯಿ ಮಾಡಲಿದೆ ಎಂದು ಅವರು ನಿರೀಕ್ಷಿಸಿದ್ದರು. ಆದರೆ ಅವರ ಲೆಕ್ಕಾಚಾರ ತಲೆಕೆಳಗಾಗಿದೆ. ತೆಲುಗಿನಲ್ಲಿ 7 ದಿನಕ್ಕೆ ‘ವಾರ್ 2’ ಗಳಿಸಿರುವುದು ಕೇವಲ 52 ಕೋಟಿ ರೂಪಾಯಿ.
ದಿನದಿಂದ ದಿನಕ್ಕೆ ‘ವಾರ್ 2’ ಸಿನಿಮಾದ ಕಲೆಕ್ಷನ್ ಕುಸಿಯುತ್ತಲೇ ಇದೆ. ಹಾಗಾಗಿ ತೆಲುಗಿನಲ್ಲಿ 100 ಕೋಟಿ ರೂಪಾಯಿ ಗಳಿಸುವುದು ಕನಸಿನ ಮಾತಾಗಿದೆ. ಆದ್ದರಿಂದ ನಾಗವಂಶಿ ಅವರು ದೊಡ್ಡ ನಷ್ಟ ಅನುಭವಿಸುವಂತಾಗಿದೆ. ಅವರ ನಷ್ಟದ ಹೊರೆಯನ್ನು ಕಡಿಮೆ ಮಾಡಲು ಯಶ್ ರಾಜ್ ಫಿಲ್ಮ್ಸ್ ಸಂಸ್ಥೆಯು 22 ಕೋಟಿ ರೂಪಾಯಿಗಳನ್ನು ವಾಪಸ್ ನೀಡಲಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದೆ.
ಇದನ್ನೂ ಓದಿ: ‘ವಾರ್ 2’ ಸೋಲು: 450 ಕೋಟಿ ರೂ. ಸುರಿದ ನಿರ್ಮಾಪಕರಿಗೆ ಆದ ನಷ್ಟ ಎಷ್ಟು?
‘ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್’ ಭಾಗವಾಗಿ ‘ವಾರ್ 2’ ಸಿನಿಮಾ ಮೂಡಿಬಂದಿದೆ. ಅಯಾನ್ ಮುಖರ್ಜಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಆದಿತ್ಯ ಚೋಪ್ರಾ ಅವರು ಅಂದಾಜು 450 ಕೋಟಿ ರೂಪಾಯಿ ಬಜೆಟ್ನಲ್ಲಿ ಈ ಸಿನಿಮಾ ಮಾಡಿದ್ದಾರೆ. ಅವರಿಗೆ ಏನಿಲ್ಲವೆಂದರೆ, 60ರಿಂದ 70 ಕೋಟಿ ರೂಪಾಯಿ ನಷ್ಟ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.