ಹಿಂದಿ ಚಿತ್ರರಂಗಕ್ಕೆ ಪದೇಪದೇ ಕಹಿ ಸುದ್ದಿ ಕೇಳಿಬರುತ್ತಿದೆ. ಸೆಲೆಬ್ರಿಟಿಗಳ ನಿಧನದಿಂದ ಬಾಲಿವುಡ್ ಮಂಕಾಗಿದೆ. ಕೆಲವೇ ದಿನಗಳ ಹಿಂದೆ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಅವರ ಅಗಲಿಕೆಯಿಂದ ತೀವ್ರ ನೋವುಂಟಾಗಿತ್ತು. ಈಗ ಜನಪ್ರಿಯ ಸಂಗೀತ ನಿರ್ದೇಶಕ ಬಪ್ಪಿ ಲಹಿರಿ (Bappi Lahiri) ಅವರು ಇಹಲೋಕ ತ್ಯಜಿಸಿದ್ದಾರೆ. ಇಂದು (ಫೆ.16) ಅವರು ಕೊನೆಯುಸಿರೆಳೆದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ಹಲವು ಬಗೆಯ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಬಪ್ಪಿ ಲಹಿರಿ ಮುಂಬೈನಲ್ಲಿ ಮೃತರಾದರು. ಅವರ ನಿಧನಕ್ಕೆ (Bappi Lahiri Death) ಭಾರತೀಯ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಬಪ್ಪಿ ಲಹಿರಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು ಮತ್ತು ಆಪ್ತರು ಪ್ರಾರ್ಥಿಸುತ್ತಿದ್ದಾರೆ. ಬಪ್ಪಿ ಲಹಿರಿ ಮತ್ತು ಲತಾ ಮಂಗೇಶ್ಕರ್ ನಡುವೆ ಆಪ್ತವಾದ ಒಡನಾಟ ಇತ್ತು. ಹಲವು ದಶಕಗಳಿಂದ ಅವರಿಬ್ಬರೂ ಪರಸ್ಪರ ಆತ್ಮೀಯರಾಗಿದ್ದರು. ‘ಲತಾಜೀ ಇಲ್ಲದೇ ನಾನಿಲ್ಲ’ ಎಂದು ಹಲವು ವರ್ಷಗಳ ಹಿಂದೆಯೇ ಬಪ್ಪಿ ಲಹಿರಿ ಹೇಳಿದ್ದರು. ಲತಾ ಮಂಗೇಶ್ಕರ್ ನಿಧನರಾಗಿ 10 ದಿನ ಕಳೆಯುವುದರಲ್ಲಿ ಬಪ್ಪಿ ಲಹಿರಿ ಕೂಡ ಇಹಲೋಕ ತ್ಯಜಿಸಿರುವುದು ನಿಜಕ್ಕೂ ಕಾಕತಾಳೀಯವೇ ಸರಿ.
2012ರಲ್ಲಿ ‘ಇ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ಬಪ್ಪಿ ಲಹಿರಿ ಅವರು ಈ ಮಾತನ್ನು ಹೇಳಿದ್ದರು. ಲತಾ ಮಂಗೇಶ್ಕರ್ ಜೊತೆ ತಮಗೆ ಇರುವ ಒಡನಾಟ ಎಂಥದ್ದು ಎಂಬುದನ್ನು ಅವರು ವಿವರಿಸಿದ್ದರು. ‘ನಾನು ನಾಲ್ಕು ವರ್ಷದ ಬಾಲಕನಾಗಿದ್ದಾಗ ಲತಾಜೀ ನಮ್ಮ ಮನೆಗೆ ಬಂದು ನನಗೆ ಆಶೀರ್ವಾದ ಮಾಡಿದ್ದರು. ಅವರ ತೊಡೆ ಮೇಲೆ ನಾನು ಕುಳಿತಿರುವ ಫೋಟೋ ಈಗಲೂ ನನ್ನ ಬಳಿ ಇದೆ. ಬಾಂಗ್ಲಾದಲ್ಲಿ ಖ್ಯಾತ ಸಂಗೀತ ನಿರ್ದೇಶಕರಾಗಿದ್ದ ನನ್ನ ತಂದೆ ಅಪರೇಶ್ ಲಹಿರಿ ಅವರಿಗಾಗಿ ಲತಾಜೀ ಅನೇಕ ಗೀತೆಗಳನ್ನು ಹಾಡಿದ್ದರು’ ಎಂಬುದನ್ನು ಬಪ್ಪಿ ಲಹಿರಿ ನೆನಪು ಮಾಡಿಕೊಂಡಿದ್ದರು.
‘ಆ ಕಾಲದಿಂದಲೂ ಲತಾಜೀ ಅವರು ನನಗೆ ಬೆಂಬಲ ನೀಡುತ್ತ ಬಂದಿದ್ದಾರೆ. ಬಂಗಾಲಿ ಚಿತ್ರಕ್ಕೆ ನಾನು ಮೊದಲ ಬಾರಿಗೆ ಸಂಗೀತ ನಿರ್ದೇಶನ ಮಾಡಿದಾಗ ಅವರು ನನಗೆ ಹಾಡಿದ್ದರು. ಅವರಿಲ್ಲದೇ ಇದ್ದಿದ್ದರೆ ಇತರರ ಪೈಪೋಟಿಯ ಎದುರು ನಾನು ಉಳಿದುಕೊಳ್ಳಲು ಆಗುತ್ತಿರಲಿಲ್ಲ’ ಎಂದು ಬಪ್ಪಿ ಲಹಿರಿ ಹೇಳಿದ್ದರು.
ಆಮಿರ್ ಖಾನ್ ತಂದೆ ತಾಹೀರ್ ಹುಸೇನ್ ನಿರ್ದೇಶನ ಮಾಡಿದ್ದ ‘ಝಕ್ಮೀ’ ಚಿತ್ರದಿಂದ ಬಪ್ಪಿ ಲಹಿರಿ ಅವರಿಗೆ ಬಾಲಿವುಡ್ನಲ್ಲಿ ಮೊದಲ ಯಶಸ್ಸು ಸಿಕ್ಕಿತ್ತು. ಆ ಚಿತ್ರದಲ್ಲಿಯೂ ಲತಾ ಮಂಗೇಶ್ಕರ್ ಹಾಡಿದ್ದ ‘ಆವೋ ತುಮೆ ಚಾಂದ್ ಪೇ ಲೇ ಜಾಯೇ..’ ಹಾಗೂ ‘ಅಭಿ ಅಭಿ ಥಿ ದುಷ್ಮನಿ..’ ಗೀತೆಗಳು ಸೂಪರ್ ಹಿಟ್ ಆಗಿದ್ದವು. ಆ ಮೂಲಕ ಬಾಲಿವುಡ್ನಲ್ಲಿ ಬಪ್ಪಿ ಲಹಿರಿ ಅವರು ನೆಲೆ ಕಂಡುಕೊಳ್ಳಲು ಲತಾ ಅವರ ಹಾಡುಗಳು ಸಹಕಾರಿ ಆಗಿದ್ದವು.
ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ ಮಾತ್ರವಲ್ಲದೆ ರಾಜಕಾರಣಿ ಆಗಿಯೂ ಬಪ್ಪಿ ಲಹಿರಿ ಗುರುತಿಸಿಕೊಂಡಿದ್ದರು. ಚಿತ್ರರಂಗಕ್ಕೆ ಹಲವಾರು ಸೂಪರ್ ಹಿಟ್ ಗೀತೆಗಳನ್ನು ನೀಡಿದ್ದ ಅವರ ಕೊಡುಗೆ ಅಪಾರ. ‘ಕೃಷ್ಣ ನೀ ಬೇಗನೆ ಬಾರೋ’, ‘ಆಫ್ರಿಕಾದಲ್ಲಿ ಶೀಲಾ’, ‘ಪೊಲೀಸ್ ಮತ್ತು ದಾದಾ’ ಮುಂತಾದ ಕನ್ನಡ ಸಿನಿಮಾಗಳಿಗೂ ಬಪ್ಪಿ ಲಹಿರಿ ಸಂಗೀತ ನಿರ್ದೇಶನ ಮಾಡಿದ್ದರು.
ಇದನ್ನೂ ಓದಿ:
Bappi Lahiri: ಚಿತ್ರರಂಗದ ದಿಗ್ಗಜರೊಂದಿಗೆ ಕೆಲಸ ಮಾಡಿದ್ದ ಬಪ್ಪಿ ಲಹಿರಿ; ಇಲ್ಲಿವೆ ಅಪರೂಪದ ಫೋಟೋಗಳು
Bappi Lahiri: ಸ್ಯಾಂಡಲ್ವುಡ್ನಲ್ಲೂ ಗುರುತಿಸಿಕೊಂಡಿದ್ದ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ ಇನ್ನಿಲ್ಲ