‘ಗಂಗೂಬಾಯಿ ಚಾರಿತ್ರ್ಯ ಹರಣ ಮಾಡಲಾಗಿದೆ, ಅವರು ವೇಶ್ಯೆಯಲ್ಲ’; ಆಲಿಯಾ ಚಿತ್ರದ ವಿರುದ್ಧ ಕಾನೂನು ಮೊರೆ ಹೋದ ಕುಟುಂಬಸ್ಥರು
Alia Bhatt | Gangubai Kathiawadi: ಗಂಗೂಬಾಯಿ ಕಾಠಿಯಾವಾಡಿ ಚಿತ್ರಕ್ಕೆ ಕಾನೂನು ತೊಡಕು ಎದುರಾಗಿದೆ. ಗಂಗೂಬಾಯಿ ಕುಟುಂಬಸ್ಥರು ಚಿತ್ರತಂಡದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದು, ಚಿತ್ರದ ರಿಲೀಸ್ಗೆ ತಡೆಯಾಜ್ಞೆ ನೀಡಬೇಕೆಂದು ಕೋರಿದ್ದಾರೆ.
ಬಾಲಿವುಡ್ನ ಖ್ಯಾತ ನಟಿ ಆಲಿಯಾ ಭಟ್ (Alia Bhatt) ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ‘ಗಂಗೂಬಾಯಿ ಕಾಠಿಯಾವಾಡಿ’ (Gangubai Kathiawadi) 2022ರ ಬಹುನಿರೀಕ್ಷಿತ ಚಿತ್ರಗಳಲ್ಲೊಂಡು. ಸಂಜಯ್ ಲೀಲಾ ಭನ್ಸಾಲಿ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಈಗಾಗಲೇ ಭರವಸೆ ಮೂಡಿಸಿವೆ. ಈ ಚಿತ್ರ ಕಾಮಾಟಿಪುರದ ಮುಖ್ಯಸ್ಥೆಯಾಗಿದ್ದ ಗಂಗೂಬಾಯಿ ಹರ್ಜಿವಂದಾಸ್ ಅವರ ಜೀವನವನ್ನು ಆಧರಿಸಿದೆ. ಎಸ್.ಹುಸೇನ್ ಜೈದಿ ಬರೆದಿರುವ ಪುಸ್ತಕ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ ಆಧರಿಸಿ ಚಿತ್ರವನ್ನು ತಯಾರಿಸಲಾಗಿದೆ. ಟ್ರೈಲರ್ನಲ್ಲಿ ಆಲಿಯಾರನ್ನು ವೇಶ್ಯಾಗೃಹಕ್ಕೆ ಮಾರುವುದು ಮತ್ತು ಆಕೆ ಮುಂಬೈನ ರೆಡ್- ಲೈಟ್ ಏರಿಯಾದಲ್ಲಿ ಪ್ರಮುಖ ವ್ಯಕ್ತಿಯಾಗಿ ಮೆರೆಯುವ ಪ್ರಯಾಣವನ್ನು ಪ್ರಸ್ತುತಪಡಿಸಲಾಗಿತ್ತು. ಇದೀಗ ಚಿತ್ರವು ಖ್ಯಾತ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಚಿತ್ರ ಸಿದ್ಧತೆ ನಡೆಸಿರುವಂತೆಯೇ ಇತ್ತ, ಭಾರತದಲ್ಲಿ ಕಾನೂನು ಸಮಸ್ಯೆ ಪ್ರಾರಂಭವಾಗಿದೆ. ಚಿತ್ರದ ಬಿಡುಗಡೆಗೆ ತಡೆಯನ್ನು ಕೋರಿ ಗಂಗೂಬಾಯಿ ಕುಟುಂಬಸ್ಥರು ನೋಟಿಸ್ ಕಳುಹಿಸಿದ್ದಾರೆ.
ಗಂಗೂಬಾಯಿ ಅವರ ಕುಟುಂಬಸ್ಥರು ಸಂಜಯ್ ಲೀಲಾ ಭನ್ಸಾಲಿ ಹಾಗೂ ಲೇಖಕ ಎಸ್.ಹುಸೇನ್ ಜೈದಿ ವಿರುದ್ಧ ಮಾನನಷ್ಟ ಹಾಗೂ ಚಾರಿತ್ರ್ಯ ಹರಣದ ಆರೋಪ ಮಾಡಿದ್ದಾರೆ. ನೋಟಿಸ್ನಲ್ಲಿ ನಾಯಕಿ ಆಲಿಯಾ ಭಟ್ ಹೆಸರೂ ಕೂಡ ಇದೆ. 2020ರಲ್ಲಿ ಚಿತ್ರದ ಮೊದಲ ಪ್ರೋಮೋ ಹೊರಬಂದಾಗಲೇ ಗಂಗೂಬಾಯಿ ಅವರ ದತ್ತುಪುತ್ರರು ನ್ಯಾಯಾಲಯದ ಮೊರೆ ಹೋಗಿದ್ದರು. ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ಕೋರಿರುವ ಅರ್ಜಿಯು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯಲ್ಲಿದೆ. ಚಿತ್ರದ ರಿಲೀಸ್ಗೂ ಮೊದಲು ಸುಪ್ರೀಂ ಅರ್ಜಿಯನ್ನು ಆಲಿಸುತ್ತದೆ ಎಂಬ ಆಶಾಭಾವವನ್ನು ಕುಟುಂಬದವರು ವ್ಯಕ್ತಪಡಿಸಿದ್ದಾರೆ. ಈ ಚಿತ್ರವು ಫೆಬ್ರವರಿ 25ರಂದು ತೆರೆಕಾಣಲಿದೆ ಎಂದು ಚಿತ್ರತಂಡ ಈ ಹಿಂದೆ ಘೋಷಿಸಿದೆ.
ಕುಟುಂಬಸ್ಥರು, ವಕೀಲರು ಹೇಳೋದೇನು?
ಗಂಗೂಬಾಯಿಗೆ ಬಾಬುರಾವ್, ಬೇಬಿ, ಶಕುಂತಲಾ ಮತ್ತು ರಾಜನ್ ಎಂಬ ನಾಲ್ವರು ದತ್ತು ಪುತ್ರರಿದ್ದಾರೆ. ಇತ್ತೀಚೆಗೆ ಆಜ್ ತಕ್ ಜತೆ ಮಾತನಾಡಿದ್ದ ಬಾಬುರಾವ್, ‘ಚಿತ್ರದಲ್ಲಿ ತಾಯಿಯನ್ನು ಲೈಂಗಿಕ ಕಾರ್ಯಕರ್ತೆಯನ್ನಾಗಿ ಬಿಂಬಿಸಲಾಗಿದೆ. ಜನರು ಈ ಕುರಿತು ಮಾತನಾಡುತ್ತಾರೆ. ತಾಯಿಯ ಬಗ್ಗೆ ಹಾಗೆ ಮಾತನಾಡುವುದು ಇಷ್ಟವಿಲ್ಲ’ ಎಂದಿದ್ದರು.
ನ್ಯಾಯಾಲಯದಲ್ಲಿ ಗಂಗೂಬಾಯಿ ಕುಟುಂಬವನ್ನು ಪ್ರತಿನಿಧಿಸುತ್ತಿರುವ ವಕೀಲ ನರೇಂದ್ರ ದುಬೆ ಹೀಂದೂಸ್ತಾನ್ ಟೈಮ್ಸ್ ಜತೆ ಮಾತನಾಡಿ, ‘‘‘ಯಾರೂ ತಮ್ಮ ತಾಯಿಯನ್ನು ವೇಶ್ಯೆಯಂತೆ ಬಿಂಬಿಸಬೇಕೆಂದು ಬಯಸುವುದಿಲ್ಲ. ಅವರ ಮಗನೂ ಅದನ್ನು ಬಯಸುವುದಿಲ್ಲ. ಚಿತ್ರ ಕೇವಲ ಹಣಕ್ಕಾಗಿ, ವ್ಯಕ್ತಿಯ ಚಾರಿತ್ರ್ಯ ವಧೆ ಮಾಡುತ್ತಿದೆ. ಇದು ಕೇವಲ ತಾಯಿ ಮತ್ತು ಮಗನ ವಿಷಯವಲ್ಲ, ಪ್ರತಿಯೊಬ್ಬ ಮಹಿಳೆಯ ಗೌರವ ಮತ್ತು ಘನತೆಯ ವಿಷಯವಾಗಿದೆ. ಯಾವುದೇ ಮಹಿಳೆಯನ್ನು ಇಂತಹ ನಗ್ನ ಮತ್ತು ಅಶ್ಲೀಲ ರೀತಿಯಲ್ಲಿ ಚಿತ್ರಿಸಲು ಯಾರೂ ಬಯಸುವುದಿಲ್ಲ’’ ಎಂದು ನುಡಿದಿದ್ದಾರೆ.
‘‘ಹುಸೇನ್ ಜೈದಿ ಪುಸ್ತಕದಲ್ಲಿರುವುದನ್ನು ನಂಬಿದರೂ, ಅದರಲ್ಲಿ ಅವರು ಗಂಗೂಬಾಯಿ ವೇಶ್ಯೆಯಾಗಲು ಬಯಸಿರಲಿಲ್ಲ ಎಂದು ಬರೆದಿದ್ದಾರೆ. ಈಗ ಚಿತ್ರದಲ್ಲಿ ಅದೇ ರೀತಿ ತೋರಿಸುವುದು ಎಷ್ಟು ಸರಿ? ಗಂಗೂಬಾಯಿ ಸಾಮಾಜಿಕ ಕಾರ್ಯಕರ್ತೆ. ಕಾಮಾಠಿಪುರದ ಲೈಂಗಿಕ ಕಾರ್ಯಕರ್ತೆಯರ ಹಕ್ಕುಗಳಿಗೆ ಹೋರಾಡಿದವರು. ಕುಟುಂಬಸ್ಥರು ತಿಳಿಸಿರುವಂತೆ ಚುನಾವಣೆಯ ಸಮಯದಲ್ಲಿ ಮೊರಾರ್ಜಿ ದೇಸಾಯಿ, ಜವಾಹರ್ಲಾಲ್ ನೆಹರೂ, ಅಟಲ್ ಬಿಹಾರಿ ವಾಜಪೇಯಿ ಮೊದಲಾದವರು ಗಂಗೂಬಾಯಿ ಮನೆಗೆ ಪ್ರಚಾರದ ಸಮಯದಲ್ಲಿ ಆಗಮಿಸುತ್ತಿದ್ದರು. ಕಾರಣ ಅವರೊಬ್ಬರು ಸಾಮಾಜಿಕ ಹೋರಾಟಗಾರ್ತಿ ಎನ್ನುವುದು ನಾಯಕರಿಗೆ ತಿಳಿದಿತ್ತು’’ ಎಂದು ನರೇಂದ್ರ ದುಬೆ ನುಡಿದಿದ್ದಾರೆ. ಪ್ರಕರಣದ ಕುರಿತು ಚಿತ್ರತಂಡ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ:
Family Pack Movie Review: ‘ಫ್ಯಾಮಿಲಿ ಪ್ಯಾಕ್’ ತುಂಬ ಮನರಂಜನೆ, ಸ್ವಲ್ಪ ಎಮೋಷನ್ಸ್, ಒಂದಷ್ಟು ಫ್ಯಾಂಟಸಿ
ಮುದ್ದು ಮಗ ಜಿಯಾನ್ ಜೊತೆ ಶ್ವೇತಾ ಚೆಂಗಪ್ಪ ಚಂದದ ಫೋಟೋಶೂಟ್; ಕ್ಯೂಟ್ ಫೋಟೋಗಳಿಗೆ ಫ್ಯಾನ್ಸ್ ಫಿದಾ