ಅವಕಾಶ ಕೇಳಿಕೊಂಡು ಬೇರೆಯವರ ಬಳಿ ಹೋಗಿದ್ದ ಹೃತಿಕ್ ರೋಷನ್; ತಂದೆಗೆ ಬಂದಿತ್ತು ಸಿಟ್ಟು

ನಿರ್ದೇಶಕನ ಮನಗಾದರೂ ಕೂಡ ಹೃತಿಕ್ ರೋಷನ್ ಅವರು ಅವಕಾಶಕ್ಕಾಗಿ ಬೇರೆಯವರ ಬಳಿ ಹೋಗಿದ್ದರು. ಆ ವಿಚಾರ ಗೊತ್ತಾದ ಬಳಿಕ ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ ಅವರು ಸಿಟ್ಟಾಗಿದ್ದರು. ವೃತ್ತಿ ಜೀವನದ ಆರಂಭದ ದಿನಗಳಲ್ಲಿ ನಡೆದ ಈ ಘಟನೆಯ ಬಗ್ಗೆ ಈಗ ಹೃತಿಕ್ ರೋಷನ್ ಮಾತಾಡಿದ್ದಾರೆ.

ಅವಕಾಶ ಕೇಳಿಕೊಂಡು ಬೇರೆಯವರ ಬಳಿ ಹೋಗಿದ್ದ ಹೃತಿಕ್ ರೋಷನ್; ತಂದೆಗೆ ಬಂದಿತ್ತು ಸಿಟ್ಟು
Hrithik Roshan, Rakesh Roshan

Updated on: Apr 11, 2025 | 8:53 PM

ನಟ ಹೃತಿಕ್ ರೋಷನ್ (Hrithik Roshan) ಅವರು ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಅವರ ಜೊತೆ ಸಿನಿಮಾ ಮಾಡಲು ಅನೇಕ ನಿರ್ದೇಶಕರು, ನಿರ್ಮಾಪಕರು ಕಾಯುತ್ತಿದ್ದಾರೆ. ಆದರೆ ಆರಂಭದ ದಿನಗಳಲ್ಲಿ ಆ ರೀತಿ ಇರಲಿಲ್ಲ. ನಿರ್ದೇಶಕ ರಾಕೇಶ್ ರೋಷನ್ (Rakesh Roshan) ಅವರ ಮಗ ಎಂಬುದು ಬಿಟ್ಟರೆ ಬೇರೆ ಯಾವುದೇ ಐಡೆಂಟಿಟಿ ಅವರಿಗೆ ಇರಲಿಲ್ಲ. ಹೇಗಾದರೂ ಮಾಡಿ ಹೀರೋ ಆಗಬೇಕು ಎಂದು ಹೃತಿಕ್ ರೋಷನ್ ನಿರ್ಧರಿಸಿದ್ದರು. ಆಗ ಅವರು ಅವಕಾಶಕ್ಕಾಗಿ ಬೇರೆಯವರ ಬಳಿ ಹೋಗಿದ್ದರು. ಆ ವಿಷಯ ಗೊತ್ತಾದ ಬಳಿಕ ರಾಕೇಶ್ ರೋಷನ್ ಅವರು ಬೈಯ್ದು ಬುದ್ಧಿ ಹೇಳಿದ್ದರು. ಆ ಘಟನೆಯನ್ನು ಈಗ ಹೃತಿಕ್ ರೋಷನ್ ನೆನಪಿಸಿಕೊಂಡಿದ್ದಾರೆ.

ಹೃತಿಕ್ ರೋಷನ್ ಅವರು ಈಗ ಅಮೆರಿಕದಲ್ಲಿ ಇದ್ದಾರೆ. ಅಲ್ಲಿರುವ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಈ ವೇಳೆ ತಮ್ಮ ಬದುಕಿನ ಒಂದಷ್ಟು ಇಂಟರೆಸ್ಟಿಂಗ್ ಸಂಗತಿಗಳನ್ನು ಅವರು ಹಂಚಿಕೊಂಡಿದ್ದಾರೆ. ತಮ್ಮನ್ನು ತಂದೆ ಲಾಂಚ್ ಮಾಡುತ್ತಾರೆ ಎಂಬ ನಂಬಿಕೆ ಹೃತಿಕ್ ರೋಷನ್ ಅವರಿಗೆ ಇರಲಿಲ್ಲ. ಹಾಗಾಗಿ ಅವರು ತಂದೆಗೆ ಗೊತ್ತಿಲ್ಲದ ಹಾಗೆ ಆಡಿಷನ್ ನೀಡಲು ಹೊಗಿದ್ದರು.

‘ಶೇಖರ್ ಕಪೂರ್ ಅವರ ಸಿನಿಮಾ ಸೇರಿದಂತೆ ಕೆಲವು ಸಿನಿಮಾಗಳಿಗೆ ನಾನು ಆಡಿಷನ್ ನೀಡಿದೆ. ತಾ ರ ರಂ ಪಂ ಪಂ ಎಂಬ ಸಿನಿಮಾಗೆ ಶೇಖರ್​ ಕಪೂರ್ ಅವರು ನನ್ನ ಆಡಿಷನ್ ತೆಗೆದುಕೊಂಡರು. ಆ ಸ್ಕ್ರಿಪ್ಟ್ ತುಂಬಾ ಚೆನ್ನಾಗಿತ್ತು. ನಾನು ಆಡಿಷನ್ ನೀಡುತ್ತಿರುವ ವಿಷಯ ನನ್ನ ತಂದೆಗೆ ಗೊತ್ತಾಯಿತು. ಅವರು ಕರೆ ಮಾಡಿ ಬೈಯ್ದರು. ಮೊದಲು ಮನೆಗೆ ಬಾ. ಇಂಥ ಕೆಲಸ ಮಾಡಬೇಡ ಅಂತ ಬುದ್ಧಿ ಹೇಳಿದರು’ ಎಂದಿದ್ದಾರೆ ಹೃತಿಕ್ ರೋಷನ್.

ಇದನ್ನೂ ಓದಿ
ಚಿತ್ರರಂಗ ಕಂಡ ದುಬಾರಿ ವಿಚ್ಛೇದನ; ಸಿಕ್ಕಿತ್ತು 380 ಕೋಟಿ ರೂಪಾಯಿ ಜೀವನಾಂಶ
ಹೃತಿಕ್ ರೋಷನ್ ಮೇಲೆ ಡಾಕ್ಯುಮೆಂಟರಿ? ಆ ವಿವಾದವೂ ಇರುತ್ತಾ?
ಭಾರತದ ಶ್ರೀಮಂತ ನಟ ಹೃತಿಕ್ ಅವರ ಒಟ್ಟೂ ಆಸ್ತಿ ಎಷ್ಟು ಕೋಟಿ?
ಹೃತಿಕ್ ರೋಷನ್ ಮಕ್ಕಳ ಫೋಟೋ ವೈರಲ್; ಚಿತ್ರರಂಗದ ಎಂಟ್ರಿಗೆ ಫ್ಯಾನ್ಸ್ ಕಾತರ

ಬಳಿಕ ಸ್ವತಃ ರಾಕೇಶ್ ರೋಷನ್ ಅವರೇ ಮಗನನ್ನು ‘ಕಹೋ ನಾ ಪ್ಯಾರ್ ಹೈ’ ಸಿನಿಮಾ ಮೂಲಕ ಲಾಂಚ್ ಮಾಡಿದರು. ಅದು ಹೇಗೆ ಸಾಧ್ಯವಾಯ್ತು ಎಂಬುದನ್ನು ಹೃತಿಕ್ ರೋಷನ್ ಮೆಲುಕು ಹಾಕಿದ್ದಾರೆ. ‘ಮಗನನ್ನು ಬೇರೆ ಯಾರೋ ಕಸಿದುಕೊಂಡು ಸಿನಿಮಾ ಮಾಡಿಬಿಡುತ್ತಾರೆ ಎಂಬುದು ನಮ್ಮ ತಂದೆಗೆ ಅರಿವಾಯ್ತು ಅನಿಸುತ್ತದೆ. ಹಾಗಾಗಿ ಅವರೇ ನನಗಾಗಿ ಸಿನಿಮಾ ಮಾಡಲು ನಿರ್ಧರಿಸಿದರು. ಅದಕ್ಕಾಗಿ ನನಗೆ ಹೆಮ್ಮೆ ಇದೆ. ಯಾಕೆಂದರೆ ನನಗೆ ತಂದೆಯಾಗಿ ಅವಕಾಶ ನೀಡಿಲ್ಲ. ನಿರ್ದೇಶಕನಾಗಿ ಅವಕಾಶ ನೀಡಿದರು’ ಎಂದು ಹೃತಿಕ್ ರೋಷನ್ ಹೇಳಿದ್ದಾರೆ.

ಇದನ್ನೂ ಓದಿ: ‘ಕ್ರಿಶ್ 4’ ನಿರ್ದೇಶನ ಮಾಡಲು ಒಪ್ಪಿ ತಪ್ಪು ಮಾಡಿದ್ರಾ ಹೃತಿಕ್ ರೋಷನ್? ಕಾಡುತ್ತಿದೆ ಭಯ

ಈಗ ಹೃತಿಕ್ ರೋಷನ್ ಅವರು ನಟನೆ ಜೊತೆಗೆ ನಿರ್ದೇಶನ ಮಾಡಲು ಕೂಡ ತೀರ್ಮಾನಿಸಿದ್ದಾರೆ. ‘ಕ್ರಿಶ್ 4’ ಸಿನಿಮಾಗೆ ಅವರೇ ನಿರ್ದೇಶನ ಮಾಡಲಿದ್ದಾರೆ. ಆ ಸುದ್ದಿ ಕೇಳಿ ಅಭಿಮಾನಿಗಳಿಗೆ ಖುಷಿ ಆಗಿದೆ. ಈ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರ ನಾಯಕಿ ಆಗುತ್ತಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.