ಕನ್ನಡ ಚಿತ್ರರಂಗ ಉದಾಹರಿಸಿ ಬಾಲಿವುಡ್​ ಕಿವಿಹಿಂಡಿದ ನವಾಜುದ್ದೀನ್ ಸಿದ್ದಿಕಿ; ‘ಸೇಕ್ರೆಡ್ ಗೇಮ್ಸ್’ ನಟ ಹೇಳಿದ್ದೇನು?

Nawazuddin Siddiqui: ದಕ್ಷಿಣದ ಚಿತ್ರಗಳನ್ನು ರಿಮೇಕ್ ಮಾಡುವುದನ್ನು ಬಾಲಿವುಡ್ ಕೈಬಿಡಬೇಕು ಎಂದು ನಟ ನವಾಜುದ್ದೀನ್ ಸಿದ್ದಿಕಿ ಇತ್ತೀಚೆಗೆ ಹೇಳಿದ್ದರು. ಇದೀಗ ಬಾಲಿವುಡ್ ಚಿತ್ರರಂಗದಲ್ಲಿ ಇಂಗ್ಲೀಷ್ ತಿಳಿಯದ ನಟರಿಗೆ ಯಾವ ಸಮಸ್ಯೆಗಳಾಗುತ್ತವೆ ಎನ್ನುವುದನ್ನು ನಟ ವಿವರಿಸಿದ್ದಾರೆ. ಈ ವೇಳೆ ಕನ್ನಡ ಚಿತ್ರರಂಗವನ್ನು ನವಾಜುದ್ದೀನ್ ಉದಾಹರಿಸಿದ್ದಾರೆ.

ಕನ್ನಡ ಚಿತ್ರರಂಗ ಉದಾಹರಿಸಿ ಬಾಲಿವುಡ್​ ಕಿವಿಹಿಂಡಿದ ನವಾಜುದ್ದೀನ್ ಸಿದ್ದಿಕಿ; ‘ಸೇಕ್ರೆಡ್ ಗೇಮ್ಸ್’ ನಟ ಹೇಳಿದ್ದೇನು?
ನವಾಜುದ್ದೀನ್ ಸಿದ್ದಿಕಿ
Follow us
| Updated By: shivaprasad.hs

Updated on: Apr 27, 2022 | 4:53 PM

ಬಾಲಿವುಡ್​ನ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಅಪ್ಪಟ ರಂಗಭೂಮಿ ಪ್ರತಿಭೆ. ಅನುರಾಗ್ ಕಶ್ಯಪ್ ನಿರ್ದೇಶನದ ಹಲವು ಚಿತ್ರಗಳು, ಸೀರೀಸ್ ಸೇರಿದಂತೆ ವಿಶಿಷ್ಟ ಶೈಲಿಯ ಪಾತ್ರನಿರ್ವಹಣೆಯ ಮೂಲಕ ಅವರು ಮನೆಮಾತಾಗಿದ್ದಾರೆ.  ಇತ್ತೀಚೆಗೆ ಬಾಲಿವುಡ್ ಚಿತ್ರರಂಗದಲ್ಲಿನ ಸಮಸ್ಯೆಯ ಬಗ್ಗೆ ಅವರು ಮಾತನಾಡಿದ್ದರು. ದಕ್ಷಿಣದ ಚಿತ್ರಗಳನ್ನು ರಿಮೇಕ್ ಮಾಡುವುದನ್ನು ಬಾಲಿವುಡ್ ಕೈಬಿಡಬೇಕು ಎಂದು ನವಾಜುದ್ದೀನ್ ಹೇಳಿದ್ದರು. ಸ್ವಂತ ಕತೆಯನ್ನು ಹೊಂದಿರುವ ಚಿತ್ರಗಳತ್ತ ಗಮನಹರಿಸಬೇಕು ಎಂದೂ ನಟ ಸಲಹೆ ನೀಡಿದ್ದರು. ಇದೀಗ ಅವರು ಬಾಲಿವುಡ್ ಚಿತ್ರರಂಗದಲ್ಲಿ ಕಲಾವಿದರಿಗೆ ಅದರಲ್ಲೂ ರಂಗಭೂಮಿ ಹಿನ್ನೆಲೆಯವರಿಗೆ ಹಾಗೂ ಇಂಗ್ಲೀಷ್ ತಿಳಿಯದ ನಟರಿಗೆ ಯಾವ ಸಮಸ್ಯೆಗಳಾಗುತ್ತವೆ ಎಂದು ವಿವರಿಸಿದ್ದಾರೆ. ಚಿತ್ರೀಕರಣದ ಸೆಟ್​ಗಳಲ್ಲಿ ಇಂಗ್ಲೀಷ್​ನಲ್ಲೇ ಮಾತನಾಡುತ್ತಿರುತ್ತಾರೆ. ಆದರೆ ಕನ್ನಡ ಸೇರಿದಂತೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸ್ಥಳೀಯ ಭಾಷೆಯಲ್ಲೇ ನಿರ್ದೇಶಕರು, ಚಿತ್ರತಂಡ ಮಾತನಾಡುತ್ತಾರೆ. ಇದರಿಂದ ಕಲಾವಿದರಿಗೆ ಆಪ್ತವಾದ ವಾತಾವರಣವಿರುತ್ತದೆ ಎಂದು ಹೇಳಿದ್ದಾರೆ ನವಾಜುದ್ದೀನ್ ಸಿದ್ದಿಕಿ.

ಕನ್ನಡ ಚಿತ್ರರಂಗದ ಬಗ್ಗೆ ನವಾಜುದ್ದೀನ್ ಹೇಳಿದ್ದೇನು? ಬಾಲಿವುಡ್ ಕಿವಿಹಿಂಡಿದ್ದೇಕೆ ‘ಸೇಕ್ರೆಡ್ ಗೇಮ್ಸ್’ ನಟ?

ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ನವಾಜುದ್ದೀನ್ ಸಿದ್ದಿಕಿ ಬಾಲಿವುಡ್​​ ಚಿತ್ರಗಳ ಸೆಟ್​ನಲ್ಲಿ ಇಂಗ್ಲೀಷ್ ಹೆಚ್ಚಾಗಿ ಬಳಕೆಯಾಗುತ್ತಿರುವುದರ ಬಗ್ಗೆ ಬೇಸರ ತೋಡಿಕೊಂಡಿದ್ದಾರೆ. “ಚಿತ್ರ ಹಿಂದಿಯಲ್ಲಿ ತಯಾರಾಗುತ್ತಿದ್ದರೂ ನಿರ್ದೇಶಕರು, ಸಹ ನಿರ್ದೇಶಕರೆಲ್ಲರೂ ಇಂಗ್ಲೀಷ್​ನಲ್ಲೇ‌ ಮಾತನಾಡುತ್ತಿರುತ್ತಾರೆ. ಆದರೆ ಬಹುತೇಕ ನಟರಿಗೆ ಅದು ಅರ್ಥವೇ ಆಗುವುದಿಲ್ಲ. ನಟನೆಯ ಬಗ್ಗೆ ಪ್ರಶ್ನಿಸಿದರೆ, ನೀವು ಹೀಗೆ ಬನ್ನಿ, ಹಾಗೆ ಮಾಡಿ.. ನಿಮಗೆ ನಟಿಸುವ ಸಾಮರ್ಥ್ಯವಿದೆ.. ಹೀಗೆಲ್ಲಾ ಇಂಗ್ಲೀಷ್​ನಲ್ಲೇ ಹೇಳುತ್ತಾರೆ. ನಟರಿಗೆ ಅರ್ಥವಾಗದೇ ಸಾಕುಸಾಕಾಗುತ್ತದೆ. ಇದರ ಪರಿಣಾಮವಾಗಿ ಕಲಾವಿದರ ಅಭಿವ್ಯಕ್ತಿ ಹಾಗೂ ನಟನೆಯ ಮೇಲೆ ಪ್ರಭಾವ ಬೀರುತ್ತದೆ” ಎಂದಿದ್ದಾರೆ ನವಾಜುದ್ದೀನ್.

“ಕಲಾವಿದರಿಗೆ ನಿರ್ದೇಶಕರು ಹೇಳಿದ್ದು ಅರ್ಥವಾಗದಿದ್ದಾಗ ದೃಶ್ಯಗಳು ಸಪ್ಪೆಯಾಗುತ್ತವೆ. ಆಗ ನಿರ್ದೇಶನ ತಂಡದವರು ದೃಶ್ಯಗಳು ಸರಿಯಾಗಿ ಬರುತ್ತಿಲ್ಲ,‌ ಇನ್ನೂ ಏನೋ ಬೇಕು ಎನ್ನುತ್ತಾರೆ.. ಆದರೆ ಅವರು ಹೇಳುತ್ತಿರುವ ಇಂಗ್ಲೀಷ್​ನಲ್ಲಿ ನಟರಿಗೆ ಅರ್ಥವೇ ಆಗುವುದಿಲ್ಲ” ಎಂದು ನವಾಜುದ್ದೀನ್‌ ಹೇಳಿದ್ದಾರೆ. ಹೀಗೆ ಮಾತನಾಡುತ್ತಾ, ಅವರು ದಕ್ಷಿಣ ಚಿತ್ರರಂಗದ ವಿಚಾರವನ್ನು ಉಲ್ಲೇಖಿಸಿದ್ದಾರೆ.

ದಕ್ಷಿಣ ಭಾರತೀಯ ಚಿತ್ರರಂಗಗಳಲ್ಲಿ ಆಯಾ ಭಾಷೆಗಳಲ್ಲೇ ನಿರ್ದೇಶನ ತಂಡ ಮಾತನಾಡುತ್ತಾರೆ. ಇದರಿಂದ ಕಲಾವಿದರಿಗೆ ಅಭಿವ್ಯಕ್ತಪಡಿಸಲು ಸಹಾಯಕವಾಗುತ್ತದೆ ಎನ್ನುತ್ತಾರೆ ನವಾಜುದ್ದೀನ್. ಇದಕ್ಕೆ ನಟ ಕನ್ನಡವನ್ನು ಉದಾಹರಿಸಿದ್ದಾರೆ. “ದಕ್ಷಿಣದವರು ಅವರ ಭಾಷೆಯ ಮೇಲೆ ಹೆಮ್ಮೆ ಪಡುತ್ತಾರೆ. ಕನ್ನಡದಲ್ಲಿ ಬರಹಗಾರ, ನಿರ್ದೇಶಕ, ತಂಡ ಎಲ್ಲರೂ ಸ್ಥಳೀಯರಾಗಿರುತ್ತಾರೆ. ಎಲ್ಲರೂ ಕನ್ನಡದಲ್ಲೇ ಮಾತನಾಡುತ್ತಾರೆ.‌ ಇದರಿಂದ ಒಂದು ಆಪ್ತವಾದ ವಾತಾವರಣ ನಿರ್ಮಾಣವಾಗುತ್ತದೆ‌. ಮಲಯಾಳಂ, ತಮಿಳು ಚಿತ್ರರಂಗದಲ್ಲಿಯೂ ಹೀಗೆಯೇ. ಎಲ್ಲರೂ ಅವರವರ ಭಾಷೆಯ ಬಗ್ಗೆ ಹೆಮ್ಮೆಪಡುತ್ತಾರೆ. ಆದರೆ ಬಾಲಿವುಡ್​ನಲ್ಲಿ ಇಂಗ್ಲೀಷ್ ಬರದ ರಂಗಭೂಮಿ ಕಲಾವಿದರು ನಟಿಸುವಾಗ ಏನೂ ಅರ್ಥವಾಗದೇ ಸುತ್ತಮುತ್ತ ನೋಡುತ್ತಿರುತ್ತಾರೆ. ಅವರ ಪಾತ್ರದ ಬಗ್ಗೆಯೇ ಮಾತನಾಡಿದರೂ ಕಲಾವಿದನಿಗೆ ಅರ್ಥವಾಗದ ವಾತಾವರಣವಿದೆ” ಎಂದು ಬಾಲಿವುಡ್​ ಕಿವಿಹಿಂಡಿದ್ದಾರೆ ನವಾಜುದ್ದೀನ್ ಸಿದ್ದಿಕಿ.

ನವಾಜುದ್ದೀನ್ ಸಿದ್ದಿಕಿ ರಜಿನಿಕಾಂತ್ ಅಭಿನಯದ ‘ಪೆಟ್ಟಾ’ ಚಿತ್ರದಲ್ಲಿ ನಟಿಸಿದ್ದರು. ಈ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗದ ಪರಿಚಯ ಅವರಿಗಾಗಿತ್ತು.

ಇದನ್ನೂ ಓದಿ: The Gray Man First Look: ಧನುಷ್ ನಟನೆಯ ಮೊದಲ ಹಾಲಿವುಡ್ ಚಿತ್ರದ ಪೋಸ್ಟರ್​ ವೈರಲ್; ಯಾವಾಗ ರಿಲೀಸ್?

‘ಸೌತ್ ಸಿನಿಮಾಗಳ ವಿಚಾರದಲ್ಲಿ ಈ ತಪ್ಪು ಮಾಡಬೇಡಿ’; ಬಾಲಿವುಡ್ ಮಂದಿಗೆ ಖ್ಯಾತ ನಟನ ಕಿವಿಮಾತು