ಬಾಲಿವುಡ್ನಲ್ಲಿ ‘ಸ್ತ್ರೀ 2’ ಸಿನಿಮಾಗೆ ಭರ್ಜರಿ ಕಲೆಕ್ಷನ್ ಆಗುತ್ತಿದೆ. ಎಲ್ಲೆಲ್ಲೂ ಈ ಸಿನಿಮಾದ ಬಗ್ಗೆಯೇ ಮಾತು ಕೇಳಿಬರುತ್ತಿದೆ. ಹಾರರ್ ಕಹಾನಿ ಇರುವ ಈ ಚಿತ್ರದಲ್ಲಿ ಶ್ರದ್ಧಾ ಕಪೂರ್, ರಾಜ್ಕುಮಾರ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಅಷ್ಟೇ ಅಲ್ಲದೇ, 7.7 ಅಡಿ ಎತ್ತರ ಇರುವ ಕಲಾವಿದರೊಬ್ಬರು ಸಹ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅವರ ಹೆಸರು ಸುನಿಲ್ ಕುಮಾರ್. ಇವರ ಪಕ್ಕ ನಿಂತರೆ 6 ಅಡಿ ಹೀರೋಗಳು ಕೂಡ ಸಣ್ಣಗೆ ಕಾಣಿಸುತ್ತಾರೆ! ‘ಸ್ತ್ರೀ 2’ ಸಿನಿಮಾ ಬಿಡುಗಡೆ ಆದ ನಂತರ ಸುನಿಲ್ ಕುಮಾರ್ ಅವರ ಖ್ಯಾತಿ ಹೆಚ್ಚಾಗಿದೆ. ಅವರ ಫೋಟೋಗಳು ವೈರಲ್ ಆಗುತ್ತಿವೆ.
‘ಸ್ತ್ರೀ 2’ ಸಿನಿಮಾದಲ್ಲಿ ಸರ್ಕಟಾ ಎಂಬ ಪಾತ್ರ ಹೈಲೈಟ್ ಆಗಿದೆ. ಆ ಪಾತ್ರದಲ್ಲಿ ಸುನಿಲ್ ಕುಮಾರ್ ಅಭಿನಯಿಸಿದ್ದಾರೆ. ಅವರ ಎತ್ತರದ ನಿಲುವು ಕಂಡು ಎಲ್ಲರಿಗೂ ಅಚ್ಚರಿ ಆಗುತ್ತಿದೆ. ‘ಸ್ತ್ರೀ 2’ ಸಿನಿಮಾದಲ್ಲಿ ಸರ್ಕಟಾ ಪಾತ್ರವನ್ನು ಮಾಡಿದವರು ಯಾರು ಎಂದು ಪ್ರೇಕ್ಷಕರು ಇಂಟರ್ನೆಟ್ನಲ್ಲಿ ಹೆಚ್ಚಿನ ಮಾಹಿತಿ ಹುಡುಕುತ್ತಿದ್ದಾರೆ. ಅಷ್ಟರಮಟ್ಟಿಗೆ ಸುನಿಲ್ ಕುಮಾರ್ ಸೆನ್ಸೇಷನ್ ಸೃಷ್ಟಿ ಮಾಡಿದ್ದಾರೆ.
ಸುನಿಲ್ ಕುಮಾರ್ ಅವರನ್ನು ‘ದಿ ಗ್ರೇಟ್ ಖಲಿ ಆಫ್ ಜಮ್ಮು’ ಎಂದು ಕರೆಯುತ್ತಾರೆ. ‘ದಿ ಗ್ರೇಟ್ ಅಂಗಾರ’ ಎಂಬುದು ಸುನಿಲ್ ಕುಮಾರ್ ಅವರ ರಿಂಗ್ ನೇಮ್. ಅವರು 7.7 ಅಡಿ ಎತ್ತರ ಇದ್ದಾರೆ ಎಂಬ ಕಾರಣದಿಂದೇ ಅವರಿಗೆ ‘ಸ್ತ್ರೀ 2’ ಸಿನಿಮಾದಲ್ಲಿ ಪಾತ್ರ ಮಾಡುವ ಅವಕಾಶ ಸಿಕ್ಕಿತು. ಈ ಚಿತ್ರದಲ್ಲಿ ಸರ್ಕಟಾ ಎಂಬ ಪಾತ್ರಕ್ಕಾಗಿ ಸುನಿಲ್ ಕುಮಾರ್ ಅವರ ದೇಹವನ್ನು ಒರಿಜಿನಲ್ ಆಗಿ ಚಿತ್ರೀಕರಿಸಲಾಗಿದ್ದು, ಮುಖವನ್ನು ಗ್ರಾಫಿಕ್ಸ್ ಮೂಲಕ ಸೃಷ್ಟಿಸಲಾಗಿದೆ.
ಇದನ್ನೂ ಓದಿ: ‘ಸ್ತ್ರೀ 2’ನಲ್ಲಿ ಅತಿಥಿ ಪಾತ್ರ ಮಾಡಿದ ವರುಣ್ ಧವನ್ಗೆ ಭರ್ಜರಿ ಸಂಭಾವನೆ; ಉಳಿದವರ ರೆಮ್ಯುನರೇಷನ್ ಎಷ್ಟು?
ಆಗಸ್ಟ್ 15ರಂದು ‘ಸ್ತ್ರೀ 2’ ಸಿನಿಮಾ ಬಿಡುಗಡೆ ಆಯಿತು. ‘ಖೇಲ್ ಖೇಲ್ ಮೇ’ ಹಾಗೂ ‘ವೇದಾ’ ಸಿನಿಮಾಗಳಿಗೆ ‘ಸ್ತ್ರೀ 2’ ಚಿತ್ರ ಭರ್ಜರಿ ಪೈಪೋಟಿ ನೀಡಿದೆ. ಹಾರರ್ ಪ್ರಿಯರು ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ವಿಶ್ವಾದ್ಯಂತ 5 ದಿನಕ್ಕೆ 322 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂಬುದು ವಿಶೇಷ. ಹಲವು ಕಡೆಗಳಲ್ಲಿ ಈ ಸಿನಿಮಾ ಅತ್ಯುತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಯಶಸ್ಸಿನಿಂದ ಸುನಿಲ್ ಕುಮಾರ್ ಅವರ ಜನಪ್ರಿಯತೆ ಜಾಸ್ತಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.