ಪೋಸ್ಟರ್​ ಕಾಪಿ ಮಾಡಿ ಸಿಕ್ಕಿಬಿದ್ದ ‘ಸ್ತ್ರೀ 2’ ಸಿನಿಮಾ; ಬಿಡುಗಡೆಗೂ ಮೊದಲೇ ನೆಗೆಟಿವ್​?

ಹಾರರ್​ ಸಿನಿಮಾವನ್ನು ಇಷ್ಟಪಡುವ ಪ್ರೇಕ್ಷಕರಿಗಾಗಿ ‘ಸ್ತ್ರೀ 2’ ಚಿತ್ರ ಆಗಸ್ಟ್​ 15ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ರಾಜ್​ಕುಮಾರ್​ ರಾವ್​, ಶ್ರದ್ಧಾ ಕಪೂರ್​ ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಇಷ್ಟು ದಿನ ಟ್ರೇಲರ್​ ಕಾರಣದಿಂದ ಗಮನ ಸೆಳೆದಿದ್ದ ಈ ಸಿನಿಮಾ ಈಗ ಪೋಸ್ಟರ್​ ಕಾಪಿ ಮಾಡಿದ ವಿಚಾರಕ್ಕೆ ಟ್ರೋಲ್​ ಆಗಿದೆ. ಆ ಕುರಿತು ಇಲ್ಲಿದೆ ಹೆಚ್ಚಿನ ವಿವರ..

ಪೋಸ್ಟರ್​ ಕಾಪಿ ಮಾಡಿ ಸಿಕ್ಕಿಬಿದ್ದ ‘ಸ್ತ್ರೀ 2’ ಸಿನಿಮಾ; ಬಿಡುಗಡೆಗೂ ಮೊದಲೇ ನೆಗೆಟಿವ್​?
ಸ್ತ್ರೀ 2, ಸ್ಟ್ರೇಂಜರ್​ ಥಿಂಗ್ಸ್​
Follow us
ಮದನ್​ ಕುಮಾರ್​
|

Updated on: Aug 13, 2024 | 6:47 PM

ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬಾಲಿವುಡ್​ನಲ್ಲಿ ಸಖತ್​ ಪೈಪೋಟಿ ಏರ್ಪಡುತ್ತಿದೆ. ‘ಸ್ತ್ರೀ 2’, ‘ಖೇಲ್​ ಖೇಲ್​ ಮೇ’ ಹಾಗೂ ‘ವೇದಾ’ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುತ್ತಿವೆ. ಆಗಸ್ಟ್​ 15ರಂದು ಯಾವ ಸಿನಿಮಾವನ್ನು ನೋಡುವುದು, ಯಾವ ಸಿನಿಮಾವನ್ನು ಬಿಡುವುದು ಎಂಬ ಗೊಂದಲ ಸಿನಿಪ್ರಿಯರಲ್ಲಿ ಮೂಡಿದೆ. ಈ ಸಂದರ್ಭದಲ್ಲಿ ಪಾಸಿಟಿವ್​ ಪ್ರಚಾರ ತುಂಬ ಮುಖ್ಯವಾಗುತ್ತದೆ. ಆದರೆ ‘ಸ್ತ್ರೀ 2’ ಸಿನಿಮಾ ಬಿಡುಗಡೆಗೂ ಮುನ್ನವೇ ಒಂದು ನೆಗೆಟಿವ್​ ಕಾರಣದಿಂದ ಸುದ್ದಿ ಆಗುತ್ತಿದೆ. ಪೋಸ್ಟರ್​ ಕಾಪಿ ಮಾಡಿದ ಆರೋಪ ಈ ಸಿನಿಮಾ ತಂಡದ ಮೇಲಿದೆ.

ಶ್ರದ್ಧಾ ಕಪೂರ್, ರಾಜ್​ಕುಮಾರ್​ ರಾವ್​, ಅಭಿಷೇಕ್​ ಬ್ಯಾನರ್ಜಿ, ಪಂಕಜ್​ ತ್ರಿಪಾಠಿ ಮುಂತಾದವರು ‘ಸ್ತ್ರೀ 2’ ಸಿನಿಮಾದಲ್ಲಿ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ತಮನ್ನಾ ಭಾಟಿಯಾ, ವರುಣ್​ ಧವನ್​ ಅಭಿನಯಿಸಿದ್ದಾರೆ. ಈಗಾಗಲೇ ಟ್ರೇಲರ್​ ಮೂಲಕ ಈ ಸಿನಿಮಾ ಕೌತುಕ ಕೆರಳಿಸಿದೆ. ಆದರೆ ಇಂಗ್ಲಿಷ್​ನ ‘ಸ್ಟ್ರೇಂಜರ್​ ಥಿಂಗ್ಸ್​’ ಸೀರಿಸ್​ನಿಂದ ಪೋಸ್ಟರ್​​ ಕಾಪಿ ಮಾಡಿದ ಕಾರಣದಿಂದ ‘ಸ್ತ್ರೀ 2’ ಸಿನಿಮಾ ಟ್ರೋಲ್ ಆಗುತ್ತಿದೆ.

ಕಲಾವಿದರ ಎಕ್ಸ್​ಪ್ರೆಷನ್​, ಹಿನ್ನೆಲೆಯಲ್ಲಿ ಇರುವ ಕಲರ್​ ಕಾಂಬಿನೇಷನ್​, ಟೈಟಲ್​ಗೆ ಬಳಸಿದ ಬಣ್ಣ.. ಸೇರಿದಂತೆ ಹಲವು ವಿಚಾರಗಳಲ್ಲಿ ‘ಸ್ತ್ರೀ 2’ ಮತ್ತು ‘ಸ್ಟ್ರೇಂಜರ್​ ಥಿಂಗ್ಸ್​’ ಪೋಸ್ಟರ್​ಗಳ ನಡುವೆ ಗಾಢವಾದ ಸಾಮ್ಯತೆ ಕಾಣುತ್ತಿದೆ. ಈ ರೀತಿ ಕಾಪಿ ಮಾಡಿದ್ದನ್ನು ನೆಟ್ಟಿಗರು ಖಂಡಿಸಿದ್ದಾರೆ. ಆದರೆ ಕೆಲವರು ‘ಸ್ತ್ರೀ 2’ ಸಿನಿಮಾ ತಂಡದ ಪರವಾಗಿಯೂ ಕಮೆಂಟ್​ ಮಾಡಿದ್ದಾರೆ. ‘ಪೋಸ್ಟರ್​ ಹೇಗಾದರೂ ಇರಲಿ, ಸಿನಿಮಾ ಹೇಗಿದೆ ಎಂಬುದು ಮುಖ್ಯವಾಗುತ್ತದೆ’ ಎಂದು ಅಪ್ಪಟ ಅಭಿಮಾನಿಗಳು ಸಮರ್ಥನೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಹೊಸ ಹಾಡಿನಲ್ಲಿ ತಮನ್ನಾ ಭರ್ಜರಿ ಡ್ಯಾನ್ಸ್; ‘ಸ್ತ್ರೀ 2’ ಚಿತ್ರದಲ್ಲಿ ಐಟಂ ಸಾಂಗ್

2018ರಲ್ಲಿ ತೆರೆಕಂಡಿದ್ದ ‘ಸ್ತ್ರೀ’ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಈಗ ಅದರ ಸೀಕ್ವೆಲ್​ ಆಗಿ ‘ಸ್ತ್ರೀ 2’ ಸಿನಿಮಾ ತಯಾರಾಗಿದೆ. ಅಮರ್​ ಕೌಶಿಕ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶ್ರದ್ಧಾ ಕಪೂರ್​ ಅವರು ಪ್ರೇಕ್ಷಕರನ್ನು ಹೆದರಿಸಲಿದ್ದಾರೆ. ಅಕ್ಷಯ್​ ಕುಮಾರ್​ ನಟನೆಯ ‘ಖೇಲ್​ ಖೇಲ್​ ಮೇ’, ಜಾನ್​ ಅಬ್ರಾಹಂ ಅಭಿನಯದ ‘ವೇದಾ’ ಸಿನಿಮಾಗಳ ನಡುವೆ ‘ಸ್ತ್ರೀ 2’ ಬಿಡುಗಡೆ ಆಗುತ್ತಿರುವುದರಿಂದ ಈ ಗುರುವಾರ (ಆಗಸ್ಟ್​ 15) ಬಾಕ್ಸ್​ ಆಫೀಸ್​ನಲ್ಲಿ ಕ್ಲ್ಯಾಶ್​ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.