Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಫ್ ಅಲಿ ಖಾನ್​ಗೆ ಚಾಕು ಇರಿದಿದ್ದು ಏಕೆ? ದಾಳಿಕೋರನ ಹೇಳಿಕೆಯಲ್ಲೇನಿದೆ?

Saif Ali Khan: ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದ ದಾಳಿಕೋರನನ್ನು ಪೊಲೀಸರು ಬಂಧಿಸಿದ್ದು. ಆತನ ವಿಚಾರಣೆ ಚಾಲ್ತಿಯಲ್ಲಿದೆ. ಅಷ್ಟಕ್ಕೂ ದಾಳಿಕೋರ ಸೈಫ್ ಮನೆಗೆ ಹೋಗಿದ್ದು ಹೇಗೆ? ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದು ಏಕೆ? ಆತನ ಉದ್ದೇಶ ಏನಿತ್ತು? ಇಲ್ಲಿದೆ ಮಾಹಿತಿ...

ಸೈಫ್ ಅಲಿ ಖಾನ್​ಗೆ ಚಾಕು ಇರಿದಿದ್ದು ಏಕೆ? ದಾಳಿಕೋರನ ಹೇಳಿಕೆಯಲ್ಲೇನಿದೆ?
Saif Ali Khan
Follow us
ಮಂಜುನಾಥ ಸಿ.
|

Updated on:Jan 21, 2025 | 1:21 PM

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಜನವರಿ 16ರ ತಡರಾತ್ರಿ ಅಗಂತುಕನೊಬ್ಬ ಚಾಕು ಇರಿದಿದ್ದ. ಆರು ಬಾರಿ ಸೈಫ್​ಗೆ ಚಾಕುವಿನಿಂದ ಚುಚ್ಚಲಾಗಿತ್ತು. ಪ್ರಾಣಕ್ಕೆ ಅಪಾಯ ತಂದೊಡ್ಡಬಹುದಾದ ರೀತಿಯಲ್ಲಿ ಬೆನ್ನು ಮೂಳೆಯ ಬಳಿಯೂ ಚಾಕುವಿನಿಂದ ಇರಿಯಲಾಗಿತ್ತು. ಅದೃಷ್ಟವಶಾತ್ ಸೈಫ್ ಅಲಿ ಖಾನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೈಫ್ ಅಲಿ ಖಾನ್ ಮೇಲೆ ದಾಳಿ ಮಾಡಿದ್ದ ದಾಳಿಕೋರನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ದಾಳಿಕೋರ ಇದೀಗ ಪೊಲೀಸರ ವಶದಲ್ಲಿದ್ದು ವಿಚಾರಣೆ ನಡೆಸಲಾಗುತ್ತಿದೆ. ಈ ವೇಳೆ ದಾಳಿಕೋರ, ಅಂದಿನ ಘಟನೆಯ ಬಗ್ಗೆ ಕೆಲವು ಆಸಕ್ತಿಕರ ಅಂಶಗಳನ್ನು ಬಾಯ್ಬಿಟ್ಟಿದ್ದಾನೆ.

ದಾಳಿಕೋರನನ್ನು ಬಾಂಗ್ಲಾದೇಶಿ ಎಂದು ಗುರುತಿಸಲಾಗಿದ್ದು ಆರು ತಿಂಗಳ ಹಿಂದೆ ಅಕ್ರಮವಾಗಿ ಆತ ಭಾರತಕ್ಕೆ ಬಂದಿದ್ದನಂತೆ. ಇಲ್ಲಿ ವಿಜಯ್ ದಾಸ್ ಎಂದು ಹೆಸರು ಬದಲಿಸಿಕೊಂಡು ಬಾರ್ ಒಂದರಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದ. ದಾಳಿಕೋರ, ಸೈಫ್ ಅಲಿ ಖಾನ್ ಮನೆಗೆ ನುಗ್ಗಿದಾಗ ಅದು ಬಾಲಿವುಡ್​ನ ಸ್ಟಾರ್ ನಟನೊಬ್ಬನ ಮನೆ ಎಂಬುದು ಆತನಿಗೆ ತಿಳಿದಿರಲಿಲ್ಲ. ಯಾವುದೋ ಶ್ರೀಮಂತರ ಮನೆ ಎಂದುಕೊಂಡು ಆತ ನುಗ್ಗಿದ್ದ.

ಅಪಾರ್ಟ್​ಮೆಂಟ್ ಫ್ಲ್ಯಾಟ್​ನ 8 ಮಹಡಿ ಸರ್ವೀಸ್ ಮೆಟ್ಟಿಲು ಬಳಸಿ ಹತ್ತಿದ್ದ ದಾಳಿಕೋರ ಆ ನಂತರ ಏಸಿ ಡಕ್​ ಮೂಲಕ 12ನೇ ಮಹಡಿಗೆ ಏರಿ, ಬಾತ್​ರೂಂ ಕಿಟಕಿಯಿಂದ ಸೈಫ್ ಅಲಿ ಖಾನ್​ರ ಫ್ಲ್ಯಾಟ್​ ಸೇರಿಕೊಂಡಿದ್ದ. ಅಲ್ಲಿ ಸೈಫ್​ರ ಸಹಾಯಕರು ಆತನನ್ನು ನೋಡಿದ ಕಾರಣ ಆತ ತಪ್ಪಿಸಿಕೊಳ್ಳುವ ಭರದಲ್ಲಿ ಸೈಫ್ ಅಲಿ ಖಾನ್ ಕಿರಿಯ ಪುತ್ರ ಜೇಹ್​ನ ಕೋಣೆ ಸೇರಿಕೊಂಡ, ಆಗ ಸೈಫ್ ಅಲಿ ಖಾನ್ ಮಗನಿಗೆ ಏನಾದರೂ ಮಾಡಿಬಿಡುತ್ತಾನೇನೋ ಎನ್ನುವ ಆತಂಕದಲ್ಲಿ ಕೋಣೆಗೆ ನುಗ್ಗಿದ ಸೈಫ್ ಅಲಿ ಖಾನ್ ದಾಳಿಕೋರನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ.

ಇದನ್ನೂ ಓದಿ:ಮನೆ ಶಿಫ್ಟ್ ಮಾಡೋ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಸೈಫ್ ಅಲಿ ಖಾನ್

ಸೈಫ್ ಅಲಿ ಖಾನ್ ಹಿಡಿತದಿಂದ ತಪ್ಪಿಸಿಕೊಳ್ಳಲು ದಾಳಿಕೋರ ಚಾಕುವಿನಿಂದ ಇರಿದಿದ್ದಾನೆ. ಸೈಫ್ ಅಲಿ ಖಾನ್, ಮುಂದಿನಿಂದ ಹಿಡಿದಿದ್ದ ಕಾರಣ, ದಾಳಿಕೋರ ಸೈಫ್ ಅಲಿ ಖಾನ್​ನ ಬೆನ್ನಿಗೆ ಚಾಕು ಇರಿದಿದ್ದಾಗಿ ಹೇಳಿಕೊಂಡಿದ್ದಾನೆ. ಸೈಫ್ ಅಲಿ ಖಾನ್ ಪ್ರಸ್ತುತ ಆಸ್ಪತ್ರೆಯಲ್ಲಿದ್ದು, ಆಸ್ಪತ್ರೆಯಿಂದ ಅವರು ಡಿಸ್​ಚಾರ್ಜ್ ಆದ ಬಳಿಕ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಳ್ಳಲಿದ್ದು, ಇಬ್ಬರ ಹೇಳಿಕೆಯನ್ನು ಹೋಲಿಸಿ ನೋಡಿ ಚಾರ್ಜ್​ ಶೀಟ್ ತಯಾರು ಮಾಡಲಿದ್ದಾರೆ.

ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಸೈಫ್ ಅಲಿ ಖಾನ್​ರ ಫ್ಲ್ಯಾಟ್​ನ ಬಾತ್​ ರೂಮ್ ಹಾಗೂ ಇನ್ನೂ ಹಲವು ಕಡೆ ದಾಳಿಕೋರನ ಬೆರಳಚ್ಚು ದೊರೆತಿತ್ತು. ಅದನ್ನು ಪೊಲೀಸರು ಅಪರಾಧಿಗಳ ಬೆರಳಚ್ಚು ಡಾಟಾ ಜೊತೆಗೆ ಹೋಲಿಸಿದಾಗ ಯಾವುದಕ್ಕೂ ಅದು ಹೋಲಿಕೆ ಆಗಿರಲಿಲ್ಲ. ದಾಳಿಕೋರ ಇದೇ ಮೊದಲ ಬಾರಿಗೆ ಇಂಥಹಾ ಕೃತ್ಯವೊಂದರಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದ್ದು, ಇದೇ ಕಾರಣಕ್ಕೆ ಆತನ ಬೆರಳಚ್ಚು ಮಾಹಿತಿ ಪೊಲೀಸರ ಬಳಿ ಇರುವ ಡಾಟಾದ ಜೊತೆಗೆ ಹೊಂದಿಕೆ ಆಗಿಲ್ಲ.

ದಾಳಿಕೋರ ಬಾಂಗ್ಲಾದಿಂದ ಭಾರತಕ್ಕೆ ಬಂದಾಗ ಮೊದಲಿಗೆ ಮುಂಬೈನ ಸ್ಲಿಂಕ್ ಆಂಡ್ ಬರ್ದೋತ್ ಹೆಸರಿನ ಐಶಾರಾಮಿ ಹೋಟೆಲ್​ನಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡಿದ್ದ. ಆದರೆ ಹೋಟೆಲ್​ ಬಂದ ಅತಿಥಿಯೊಬ್ಬರ ಹಣ ಕದ್ದಿದ್ದ ಕಾರಣಕ್ಕೆ ಆತನನ್ನು ಕೆಲಸದಿಂದ ತೆಗೆದು ಹಾಕಿದ್ದಾಗಿ ಆ ಹೋಟೆಲ್​ನ ಜನರಲ್ ಮ್ಯಾನೇಜರ್ ಹೇಳಿದ್ದಾರೆ. ಆ ಬಳಿಕ ಆತ ಲೇಬರ್ ಕಂಪೆನಿಯೊಂದರ ಮೂಲಕ ಥಾಣೆಯ ಬಾರ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:20 pm, Tue, 21 January 25