ಶ್ರೀದೇವಿ ಬಗ್ಗೆ ರಾಜಮೌಳಿ ಬಳಿ ಸುಳ್ಳು ಹೇಳಿದ್ದ ಆ ವ್ಯಕ್ತಿ: ಬೋನಿ ಕಪೂರ್ ಆರೋಪ
Sridevi vs SS Rajamouli: ‘ಬಾಹುಬಲಿ’ ಸಿನಿಮಾದ ಐಕಾನಿಕ್ ಶಿವಗಾಮಿ ಪಾತ್ರಕ್ಕೆ ಶ್ರೀದೇವಿಯನ್ನು ರಾಜಮೌಳಿ ಆಯ್ಕೆ ಮಾಡಿದ್ದರು. ಆದರೆ ಶ್ರೀದೇವಿ ಸಂಭಾವನೆ, ಬೇಡಿಕೆಗಳ ಕಾರಣಕ್ಕೆ ಶ್ರೀದೇವಿಯನ್ನು ಪಾತ್ರದಿಂದ ಕೈಬಿಟ್ಟು ರಮ್ಯಾಕೃಷ್ಣರನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಈ ಹಿಂದೆ ರಾಜಮೌಳಿ ಹೇಳಿದ್ದರು. ಆದರೆ ಶ್ರೀದೇವಿ ಪತಿ ಬೋನಿ ಕಪೂರ್ ಈ ಬಗ್ಗೆ ಮಾತನಾಡಿದ್ದು, ಎಲ್ಲದಕ್ಕೂ ಆ ಒಬ್ಬ ವ್ಯಕ್ತಿಯೇ ಕಾರಣ ಎಂದಿದ್ದಾರೆ.

‘ಬಾಹುಬಲಿ’ (Bahubali) ಭಾರತದ ಸಿನಿಮಾ ರಂಗದ ದಿಕ್ಕು ಬದಲಾಯಿಸಿದ ಸಿನಿಮಾ. ಸಿನಿಮಾಗಳ ‘ಪ್ಯಾನ್ ಇಂಡಿಯಾ’ ಬ್ಯುಸಿನೆಸ್ ಅವಕಾಶವನ್ನು ತೆರೆದಿಟ್ಟಿದ್ದೆ ‘ಬಾಹುಬಲಿ’ ಸಿನಿಮಾ. ಆ ಸಿನಿಮಾ ಕೇವಲ ಮಾರುಕಟ್ಟೆಯಲ್ಲಿ ಮಾತ್ರವಲ್ಲ. ಸಿನಿಮಾ ಕಟ್ಟುವ ರೀತಿ, ಪಾತ್ರಗಳ ಗಟ್ಟಿತನ ಇನ್ನೂ, ಪ್ರತಿ ದೃಶ್ಯಗಳನ್ನು ಹೇಗೆ ಕಟ್ಟಿಕೊಡಬೇಕು ಎಂಬೆಲ್ಲದಕ್ಕೂ ಉದಾಹರಣೆಯಾಗಿತ್ತು ಆ ಸಿನಿಮಾ. ‘ಬಾಹುಬಲಿ’ ಸಿನಿಮಾನಲ್ಲಿ ಎಲ್ಲ ಪಾತ್ರಗಳೂ ಸೂಪರ್ ಹಿಟ್ ಆಗಿದ್ದವು. ಪಾತ್ರಗಳಲ್ಲಿ ನಟಿಸಿದ್ದ ನಟ-ನಟಿಯರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ದಕ್ಕಿತ್ತು.
ಪ್ರಭಾಸ್, ರಾಣಾ ಅವರಷ್ಟೆ ಅನುಷ್ಕಾ ಶೆಟ್ಟಿ, ರಮ್ಯಾ ಕೃಷ್ಣ ಅವರ ಪಾತ್ರಗಳಿಗೂ ಪ್ರಧಾನ್ಯತೆ ಇತ್ತು. ಅದರಲ್ಲೂ ರಮ್ಯಾ ಕೃಷ್ಣ ಅವರಿಗೆ ಸಖತ್ ಖಡಕ್ ಪಾತ್ರವನ್ನು ನೀಡಲಾಗಿತ್ತು. ಆ ಪಾತ್ರದಲ್ಲಿ ಅವರು ಅದ್ಭುತವಾಗಿ ನಟಿಸಿದ್ದರು. ಅಸಲಿಗೆ ಆ ಪಾತ್ರದಲ್ಲಿ ನಟಿಸಲು ಮೊದಲು ಆಯ್ಕೆ ಆಗಿದ್ದಿದ್ದು ನಟಿ ಶ್ರೀದೇವಿ. ಆದರೆ ಶ್ರೀದೇವಿ ಅವರ ಬೇಡಿಕೆಗಳು ಅತಿ ಎನಿಸಿದ ಕಾರಣ ರಾಜಮೌಳಿ ಅವರು ರಮ್ಯಕೃಷ್ಣ ಅವರನ್ನು ಆಯ್ಕೆ ಮಾಡಿದರಂತೆ. ಶ್ರೀದೇವಿ ಅವರು ರಾಜಮೌಳಿ ತಮ್ಮನ್ನು ನಿರಾಕರಿಸಿದ ಬಗ್ಗೆ ಈ ಹಿಂದೆ ಸಂದರ್ಶನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಇದೀಗ ಶ್ರೀದೇವಿ ಕಾಲವಾದ ಬಳಿಕ ಅವರ ಪತಿ ಬೋನಿ ಕಪೂರ್ ಇದೇ ವಿಷಯದ ಬಗ್ಗೆ ಮಾತನಾಡಿದ್ದಾರೆ.
ರಾಜಮೌಳಿ ಅವರು ಶ್ರೀದೇವಿಯವರನ್ನು ಶಿವಗಾಮಿ ದೇವಿ ಪಾತ್ರಕ್ಕೆ ಆಯ್ಕೆ ಮಾಡಿದ್ದರಂತೆ. ರಾಜಮೌಳಿ ಅವರು ಮುಂಬೈಗೆ ಹೋಗಿ ಶ್ರೀದೇವಿ ಹಾಗೂ ಬೋನಿ ಕಪೂರ್ ಅವರಿಗೆ ಸಿನಿಮಾದ ಕತೆ ಹೇಳಿದ್ದರಂತೆ ಆದರೆ ರಾಜಮೌಳಿ ಅಲ್ಲಿಂದ ಹೋದ ಮೇಲೆ ನಿರ್ಮಾಪಕ ಶೋಭು ಯರ್ಲಗಡ್ಡ ಅವರು ಶ್ರೀದೇವಿ ಜೊತೆಗೆ ಸಂಭಾವನೆ ವಿಚಾರ ಮಾತನಾಡಿದ್ದಾರೆ. ಈ ಬಗ್ಗೆ ವಿವರಿಸಿರುವ ಬೊನಿ ಕಪೂರ್, ‘ಇಂಗ್ಲೀಷ್ ವಿಂಗ್ಲೀಷ್’ ಸಿನಿಮಾಕ್ಕಿಂತೂ ಕಡಿಮೆ ಸಂಭಾವನೆಯನ್ನು ನೀಡುವುದಾಗಿ ಆ ನಿರ್ಮಾಪಕ ಹೇಳಿದ್ದ’ ಎಂದಿದ್ದಾರೆ.
ಇದನ್ನೂ ಓದಿ:ಒಟ್ಟಿಗೆ ಕಾಣಿಸಿಕೊಂಡ ರಮ್ಯಾ-ರಕ್ಷಿತ್: ವಿವಾದ ಸುಖಾಂತ್ಯ?
‘ಶ್ರೀದೇವಿ ಸಣ್ಣ ನಟಿ ಅಲ್ಲ. ಅಲ್ಲದೆ ಶ್ರೀದೇವಿಯನ್ನು ಆ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳುತ್ತಿರುವುದಕ್ಕೆ ಕಾರಣ, ಶ್ರೀದೇವಿ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದ ಜನಪ್ರಿಯ ನಟಿ ಹಾಗೂ ಅವರಿಂದ ಸಿನಿಮಾದ ಪ್ರಚಾರ ಆಗುತ್ತದೆ ಎಂದು. ಅವರಿಂದ ಅಷ್ಟು ಲಾಭ ಪಡೆಯುತ್ತಿರಬೇಕಾದರೆ ಇಷ್ಟು ಕಡಿಮೆ ಸಂಭಾವನೆ ನೀಡಿದರೆ ಹೇಗೆ? ಅಷ್ಟು ಕಡಿಮೆ ಸಂಭಾವನೆಗೆ ನಾನು ನನ್ನ ಪತ್ನಿಯನ್ನು ನಟಿಸುವಂತೆ ಹೇಗೆ ಹೇಳಲಿ?’ ಎಂದು ಬೋನಿ ಕಪೂರ್ ಪ್ರಶ್ನೆ ಮಾಡಿದ್ದಾರೆ.
‘ಶ್ರೀದೇವಿ ಏನೇನೋ ಬೇಡಿಕೆ ಇಟ್ಟಿದ್ದರು ಹಾಗಾಗಿ ಅವರನ್ನು ಹಾಕಿಕೊಳ್ಳಲಿಲ್ಲ’ ಎಂದು ರಾಜಮೌಳಿ ಹಿಂದೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಆ ಬಗ್ಗೆಯೂ ಮಾತನಾಡಿದ ಬೋನಿ ಕಪೂರ್, ‘ಖಂಡಿತ ಶ್ರೀದೇವಿ ಯಾವ ವಿಶೇಷ ಬೇಡಿಕೆಯನ್ನೂ ಇಟ್ಟಿರಲಿಲ್ಲ. ಆದರೆ ಆ ನಿರ್ಮಾಪಕ ಶೋಭು ಯರ್ಲಗಡ್ಡ, ರಾಜಮೌಳಿ ಬಳಿ ಹೋಗಿ ಶ್ರೀದೇವಿ ಬಗ್ಗೆ ಇಲ್ಲ ಸಲ್ಲದ್ದು ಹೇಳಿದ್ದ. ಇದೇ ಕಾರಣಕ್ಕೆ ರಾಜಮೌಳಿ ಹಾಗೂ ಶ್ರೀದೇವಿ ನಡುವೆ ವೈಮನಸ್ಯ ಉಂಟಾಯ್ತು. ಈ ವಿಷಯವನ್ನು ಆ ಶೋಭು ಎದುರು ಸಹ ನಾನು ಹೇಳಲು ಸಿದ್ಧವಿದ್ದೇನೆ’ ಎಂದಿದ್ದಾರೆ ಬೋನಿ ಕಪೂರ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




