ರಾಮ್ ಸಿನಿಮಾ ಹೊಸ ಹಾಡಿನ ವಿರುದ್ಧ ದೂರು, ಕ್ಷಮೆಗೆ ಒತ್ತಾಯ: ಕಾರಣವೇನು?
‘ಲೈಗರ್’ ಸಿನಿಮಾದ ಧಾರುಣ ಸೋಲಿನಿಂದ ಕಂಗೆಟ್ಟಿರುವ ನಿರ್ದೇಶಕ ಪುರಿ ಜಗನ್ನಾಥ್ ಇದೀಗ ‘ಡಬಲ್ ಇಸ್ಮಾರ್ಟ್’ ಹೆಸರಿನ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಆದರೆ ಈ ಸಿನಿಮಾಕ್ಕೂ ಆರಂಭದಲ್ಲಿಯೇ ಸಂಕಷ್ಟ ಎದುರಾಗಿದೆ. ಸಿನಿಮಾದ ಐಟಂ ಹಾಡೊಂದು ಇತ್ತೀಚೆಗೆ ಬಿಡುಗಡೆ ಆಗಿದ್ದು, ಹಾಡಿನ ವಿರುದ್ಧ ದೂರು ದಾಖಲಾಗಿದೆ.

ತೆಲುಗು ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ಪುರಿ ಜಗನ್ನಾಥ್ಗೆ ಯಾಕೋ ಸಮಯ ಸರಿ ಇದ್ದಂತಿಲ್ಲ. ತೆಲುಗು ಚಿತ್ರರಂಗದ ನಂಬರ್ 1 ನಿರ್ದೇಶಕ ಎನಿಸಿಕೊಂಡಿದ್ದ ಪುರಿ ಜಗನ್ನಾಥ್, ಕೇವಲ ಒಂದೇ ಒಂದು ಫ್ಲಾಪ್ ಸಿನಿಮಾದಿಂದ ಮೂಲೆಗುಂಪಾಗಿಬಿಟ್ಟಿದ್ದರು. ಇದೀಗ ಮತ್ತೆ ಪುಟಿದೇಳುವ ಪ್ರಯತ್ನದಲ್ಲಿದ್ದಾಗಲೇ ಪುರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪುರಿ ನಿರ್ದೇಶಿಸಿರುವ ಹೊಸ ಸಿನಿಮಾದ ಹಾಡೊಂದು ಇತ್ತೀಚೆಗೆ ಬಿಡುಗಡೆ ಆಯ್ತು. ಆದರೆ ಹಾಡಿನ ವಿರುದ್ಧ ಆಕ್ರೋಶ ಕೇಳಿ ಬಂದಿದ್ದು, ಪುರಿ ಸೇರಿದಂತೆ ಇನ್ನೂ ಕೆಲವರ ವಿರುದ್ಧ ದೂರು ಸಹ ದಾಖಲಾಗಿದೆ.
ಪುರಿ ಜಗನ್ನಾಥ್, ‘ಡಬಲ್ ಇಸ್ಮಾರ್ಟ್’ ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾನಲ್ಲಿ ರಾಮ್ ಪೋತಿನೇನಿ ನಾಯಕನಾಗಿ ನಟಿಸುತ್ತಿದ್ದಾರೆ. ಈ ಹಿಂದೆ ಪುರಿಯೇ ನಿರ್ದೇಶಿಸಿದ್ದ ‘ಇಸ್ಮಾರ್ಟ್’ ಸಿನಿಮಾದಲ್ಲಿ ಇದೇ ರಾಮ್ ಪೋತಿನೇನಿ ನಾಯಕನಾಗಿ ನಟಿಸಿದ್ದರು. ಸಿನಿಮಾದ ಮಾಸ್ ಐಟಂ ಹಾಡೊಂದು ಇತ್ತೀಚೆಗೆ ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿದೆ. ‘ಮಾರ್ ಮುಂತಾ ಚೋಡ್ ಚಿಂತ’ ಎಂಬ ಈ ಹಾಡು ಸಖತ್ ಮಾಸ್ ಆಗಿದೆ. ಯೋಚನೆ ಬಿಟ್ಟು ಸೇಂದಿ ಕುಡಿ ಎಂಬುದು ‘ಭಾವಾರ್ಥ’. ಆದರೆ ಈ ಹಾಡಿನಲ್ಲಿ ಬಳಸಿರುವ ಒಂದು ಸಾಲಿನ ಬಗ್ಗೆ ವಿವಾದ ಎದ್ದಿದೆ.
ಹಾಡಿನ ನಡುವಲ್ಲಿ ಪಂಚ್ ಲೈನ್ ಬರುವ ಮುಂಚೆ ತೆಲಂಗಾಣ ಸಿಎಂ ಕೆಸಿ ಚಂದ್ರಶೇಖರ್ ರಾವ್ ಅವರ ಧ್ವನಿಯಲ್ಲಿರುವ ಒಂದು ಡೈಲಾಗ್ ಅನ್ನು ಬಳಸಿಕೊಳ್ಳಲಾಗಿದೆ. ಯಾವುದೋ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕೆಸಿಆರ್, ‘ಏಂ ಚೇದ್ದಾಂ ಅಂಟಾವ್ ಮರಿ’ (ಏನ್ ಮಾಡೋಣ ಅಂತೀಯ ಹಾಗಿದ್ರೆ) ಎಂದು ವ್ಯಂಗ್ಯವಾಗಿ ಕೇಳಿದ್ದರು. ಕೆಸಿಆರ್ ಅವರ ಈ ಡೈಲಾಗ್ ಬಹಳ ವೈರಲ್ ಆಗಿತ್ತು. ಇದೇ ಡೈಲಾಗ್ ಅನ್ನು ಕೆಸಿಆರ್ ಧ್ವನಿಯಲ್ಲಿಯೇ ಹಾಡಿನಲ್ಲಿ ಯಥಾವತ್ತು ಬಳಸಲಾಗಿದೆ. ಇದು ಬಿಆರ್ಎಸ್ (ಭಾರತೀಯ ರಾಷ್ಟ್ರ ಸಮಿತಿ) ಪಕ್ಷದ ಕೆಲ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. ಐಟಂ ಹಾಡಿನಲ್ಲಿ ತಮ್ಮ ನಾಯಕನ ಧ್ವನಿ ಬಳಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ದೂರು ಸಹ ನೀಡಿದ್ದಾರೆ.
ಇದನ್ನೂ ಓದಿ:ಚಿತ್ರರಂಗಕ್ಕೆ ಮಾರಕ: 25 ಯೂಟ್ಯೂಬ್ ಚಾನೆಲ್ಗಳ ಡಿಲೀಟ್ ಮಾಡಿಸಿದ ಟಾಲಿವುಡ್
ಐಟಂ ಹಾಡಿನಲ್ಲಿ ಮಾಜಿ ಮುಖ್ಯ ಮಂತ್ರಿಯ ಧ್ವನಿಯನ್ನು ಕೆಟ್ಟ ಅರ್ಥ ಬರುವಂತೆ ಬಳಸಿರುವುದಕ್ಕೆ ಬಿಎಸ್ಆರ್ ಪಕ್ಷದ ಮುಖಂಡರು ಆಕ್ಷೇಪ ಎತ್ತಿದ್ದಾರೆ. ಪಕ್ಷದ ನಾಯಕಿ ರಂಜಿತಾ ರೆಡ್ಡಿ ಎಂಬುವರು ಹಾಡನ್ನು ಯೂಟ್ಯೂಬ್ ನಿಂದ ತೆಗೆದು ಹಾಕಬೇಕೆಂದು ಒತ್ತಾಯಿಸಿ ನಿರ್ದೇಶಕ ಪುರಿ ಜಗನ್ನಾಥ್, ಹಾಡು ಬರೆದಿರುವ ಕಾಸರ್ಲ ಶ್ಯಾಮ್, ಸಿನಿಮಾ ಸಂಗೀತ ನಿರ್ದೇಶಕ ಮಣಿಶರ್ಮ ಇನ್ನಿತರರ ವಿರುದ್ಧ ದೂರು ದಾಖಲಿಸಿದ್ದಾರೆ. ಅಲ್ಲದೆ ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ಇನ್ನಿತರರು ತೆಲಂಗಾಣ ಜನರ ಕ್ಷಮೆ ಕೋರಬೇಕು ಎಂದು ಸಹ ಒತ್ತಾಯ ಮಾಡಿದ್ದಾರೆ.
ಜನಪ್ರಿಯ ಡೈಲಾಗ್ಗಳನ್ನು ಹಾಡುಗಳಲ್ಲಿ ಬಳಸುವ ಟ್ರೆಂಡ್ ತೆಲುಗು ಚಿತ್ರರಂಗದಲ್ಲಿ ಮೊದಲಿನಿಂದಲೂ ಇದೆ. ಇತ್ತೀಚೆಗೆ ಬಿಡುಗಡೆ ಆಗಿದ್ದ ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾನಲ್ಲಿ ವ್ಯಕ್ತಿಯೊಬ್ಬನ ‘ಕುರ್ಚಿ ಮಡತಪೆಟ್ಟಿ’ ಡೈಲಾಗ್ ಅನ್ನು ಹಾಡೊಂದರಲ್ಲಿ ಯಥಾವತ್ತು ಬಳಸಿಕೊಳ್ಳಲಾಗಿತ್ತು. ಆ ಹಾಡು ಸಖತ್ ವೈರಲ್ ಆಗಿತ್ತು. ಡೈಲಾಗ್ ಹೇಳಿದವನಿಗೂ ಚಿತ್ರತಂಡದವರು ಹಣ ನೀಡಿದ್ದರು. ಇದಕ್ಕೆ ಮುಂದೆ ಸಹ ಕೆಲವು ಜನಪ್ರಿಯ ಡೈಲಾಗ್ಗಳನ್ನು ಹಾಡುಗಳಲ್ಲಿ ಬಳಸಿಕೊಳ್ಳಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




