ಕಾನ್ ಸಿನಿಮೋತ್ಸವ 2026: ಈ ಬಾರಿ ಭಾರತದ ಯಾವೆಲ್ಲ ಸೆಲೆಬ್ರಿಟಿಗಳಿಗೆ ಸಿಕ್ಕಿದೆ ಆಹ್ವಾನ?
ಈ ಬಾರಿಯ ಕಾನ್ ಸಿನಿಮೋತ್ಸವದ ಮೇ 12ರಿಂದ ಮೇ 23ರವರೆಗೆ ನಡೆಯಲಿದೆ. ಭಾರತದ ಹಲವು ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಐಶ್ವರ್ಯಾ ರೈ ಬಚ್ಚನ್, ಆಲಿಯಾ ಭಟ್, ಅದಿತಿ ರಾವ್ ಹೈದರಿ ಸೇರಿದಂತೆ ಹಲವರು ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಲಿದ್ದಾರೆ.

ಜಗತ್ತಿನ ಪ್ರತಿಷ್ಠಿತ ಸಿನಿಮೋತ್ಸವಗಳಲ್ಲಿ ಒಂದಾದ ‘ಕಾನ್ ಚಲನಚಿತ್ರೋತ್ಸವ 2026’ (Cannes Film Festival) ಮಂಗಳವಾರದಿಂದ (ಮೇ 12) ಆರಂಭವಾಗಲಿದ್ದು, ಈ ಬಾರಿ ಭಾರತೀಯ ಚಿತ್ರರಂಗದ ಪ್ರಾತಿನಿಧ್ಯ ಮತ್ತಷ್ಟು ಮೆರುಗು ಪಡೆಯಲಿದೆ. ಕೇವಲ ಬಾಲಿವುಡ್ ಮಾತ್ರವಲ್ಲದೇ ಮಲಯಾಳಂ, ಪಂಜಾಬಿ, ಮರಾಠಿ ಮತ್ತು ಗುಜರಾತಿ ಚಿತ್ರೋದ್ಯಮದ ಕಲಾವಿದರು ಜಾಗತಿಕ ವೇದಿಕೆಯಲ್ಲಿ ಮಿಂಚಲಿದ್ದಾರೆ. ಈ ಬಾರಿಯ ಕಾನ್ ಉತ್ಸವದಲ್ಲಿ (Cannes 2026) ಪಾಲ್ಗೊಳ್ಳಲಿರುವ ಪ್ರಮುಖ ಭಾರತೀಯ ಸೆಲೆಬ್ರಿಟಿಗಳ ಬಗ್ಗೆ ಮಾಹಿತಿ ಇಲ್ಲಿದೆ..
ಕಲ್ಯಾಣಿ ಪ್ರಿಯದರ್ಶನ್: ‘ಲೋಕಃ’ ಚಿತ್ರದ ಮೂಲಕ ಭಾರತದಾದ್ಯಂತ ಖ್ಯಾತಿ ಗಳಿಸಿರುವ ನಟಿ ಕಲ್ಯಾಣಿ ಪ್ರಿಯದರ್ಶನ್ ಈ ಬಾರಿ ಕಾನ್ ಅಂಗಳಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಮೇ 14ರಂದು ಅವರು ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಐಶ್ವರ್ಯಾ ರೈ ಬಚ್ಚನ್: 2002ರಿಂದ ಕಾನ್ ಚಿತ್ರೋತ್ಸವದ ಖಾಯಂ ಸದಸ್ಯೆಯಾಗಿರುವ ಐಶ್ವರ್ಯಾ ರೈ ಈ ವರ್ಷವೂ ತಮ್ಮ ಸೌಂದರ್ಯದ ಮೂಲಕ ವಿಶ್ವದ ಗಮನ ಸೆಳೆಯಲಿದ್ದಾರೆ.
ಆಲಿಯಾ ಭಟ್: ಕಳೆದ ವರ್ಷ ಸೀರೆ ಧರಿಸಿ ಮಿಂಚಿದ್ದ ಆಲಿಯಾ ಭಟ್, ಈ ವರ್ಷವೂ ಕಾನ್ ಸಿನಿಮೋತ್ಸವದ ರೆಡ್ ಕಾರ್ಪೆಟ್ ಮೇಲೆ ಭಾರತೀಯ ಫ್ಯಾಷನ್ ಪ್ರತಿಬಿಂಬಿಸಲಿದ್ದಾರೆ.
ತಾರಾ ಸುತಾರಿಯಾ: ಬಾಲಿವುಡ್ ನಟಿ ತಾರಾ ಸುತಾರಿಯಾ ಅವರಿಗೆ ಇದು ಮೊದಲ ಕಾನ್ ಅನುಭವ. ಅವರ ಉಡುಗೆಯ ವಿನ್ಯಾಸ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.
ಅದಿತಿ ರಾವ್ ಹೈದರಿ: ಇತ್ತೀಚಿನ ವರ್ಷಗಳಲ್ಲಿ ಕಾನ್ ಚಿತ್ರೋತ್ಸವದಲ್ಲಿ ಜನಪ್ರಿಯ ಸೆಲೆಬ್ರಿಟಿ ಆಗಿರುವ ಅದಿತಿ ರಾವ್ ಹೈದರಿ ಈ ಬಾರಿಯೂ ಭಾಗವಹಿಸುವುದು ಖಚಿತವಾಗಿದೆ.
ಕರಣ್ ಜೋಹರ್: ಕಳೆದ ವರ್ಷ ‘ಹೋಮ್‌ಬೌಂಡ್’ ಚಿತ್ರದ ಪ್ರದರ್ಶನದ ಮೂಲಕ ಕಾನ್ ಸಿನಿಮೋತ್ಸವಕ್ಕೆ ಪದಾರ್ಪಣೆ ಮಾಡಿದ್ದ ಕರಣ್ ಜೋಹರ್, ಈ ಬಾರಿಯೂ ಉತ್ಸವದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಕಾನ್ ಚಿತ್ರೋತ್ಸವದಲ್ಲಿ ಭಾಷಣ ಮಾಡಲಿರುವ ಕನ್ನಡದ ಯುವ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ
ಪಂಜಾಬಿ ಗಾಯಕ ಮತ್ತು ನಟ ಅಮ್ಮಿ ವಿರ್ಕ್ ಅವರು ‘ಚರ್ದಿಕಲಾ’ ಚಿತ್ರದ ಪರವಾಗಿ ಕಾನ್ ಸಿನಿಮೋತ್ಸವಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇನ್ನು ಮರಾಠಿ ಚಿತ್ರರಂಗದ ಹಿರಿಯ ನಟ ಅಶೋಕ್ ಸರಫ್ ಮತ್ತು ಪ್ರಜಕ್ತಾ ಮಾಲಿ ಪಾರಂಪರಿಕ ಮರಾಠಿ ಉಡುಗೆಯಲ್ಲಿ ಮಿಂಚಲಿದ್ದಾರೆ. ಖ್ಯಾತ ನಿರ್ದೇಶಕ ಅಶುತೋಷ್ ಗೋವಾರಿಕರ್ ಭಾರತದ ಅಧಿಕೃತ ನಿಯೋಗದ ಭಾಗವಾಗಿ ಭಾಗವಹಿಸಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




