ಪೊಲೀಸ್ ಉನ್ನತಾಧಿಕಾರಿ ವಿರುದ್ಧ ಯುದ್ಧಕ್ಕೆ ನಿಂತ ನಟಿ ಡಿಂಪಲ್: ನಡೆದಿದ್ದೇನು? ತಪ್ಪು ಯಾರದ್ದು?

Dimple Hayati: ನಟಿ ಡಿಂಪಲ್ ಹಯಾತಿ, ಹೈದರಾಬಾದ್​ನ ಸಂಚಾರಿ ಪೊಲೀಸ್ ಉಪಾಯುಕ್ತರ ವಿರುದ್ಧ ಯುದ್ಧಕ್ಕೆ ಇಳಿದಿದ್ದಾರೆ. ಪಾರ್ಕಿಂಗ್ ವಿಷಯವಾಗಿ ಇಬ್ಬರೂ ಕಿತ್ತಾಡಿಕೊಂಡಿದ್ದು ಆಯುಕ್ತರ ಕಾರು ಚಾಲಕ, ಕಾನ್​ಸ್ಟೆಬಲ್ ಚೇತನ್ ನಟಿ ವಿರುದ್ಧ ದೂರು ನೀಡಿದ್ದಾರೆ.

ಪೊಲೀಸ್ ಉನ್ನತಾಧಿಕಾರಿ ವಿರುದ್ಧ ಯುದ್ಧಕ್ಕೆ ನಿಂತ ನಟಿ ಡಿಂಪಲ್: ನಡೆದಿದ್ದೇನು? ತಪ್ಪು ಯಾರದ್ದು?
ಡಿಂಪಲ್ ಹಯಾತಿ
Follow us
ಮಂಜುನಾಥ ಸಿ.
|

Updated on:May 23, 2023 | 8:53 PM

ನಟಿ ಡಿಂಪಲ್ ಹಯಾತಿ (Dimple Hayati) ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಜನಪ್ರಿಯ ಹೆಸರು. ಈ ವರೆಗೆ ಒಂಬತ್ತು ಸಿನಿಮಾಗಳಲ್ಲಿ ನಟಿಸಿರುವ ಈ ಚೆಲುವೆ, ಧನುಶ್, ಅಕ್ಷಯ್ ಕುಮಾರ್, ರವಿತೇಜ ಸೇರಿದಂತೆ ಇನ್ನೂ ಕೆಲವು ಸ್ಟಾರ್ ನಟರೊಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ಹೆಚ್ಚು ಸುದ್ದಿಯಾಗದೆ, ಸದ್ದಾಗದಂತೆ ಸಿನಿಮಾಗಳಲ್ಲಿ ನಟಿಸುತ್ತಾ ಸಾಗುತ್ತಿದ್ದ ನಟಿ ಡಿಂಪಲ್ ಇದೀಗ ಐಪಿಎಸ್ ಅಧಿಕಾರಿಯನ್ನು (IPS Officer) ಎದುರು ಹಾಕಿಕೊಂಡು ಯುದ್ಧಕ್ಕೆ ಇಳಿದುಬಿಟ್ಟಿದ್ದಾರೆ. ಇದೇ ಕಾರಣಕ್ಕೆ ಪೊಲೀಸ್ ಠಾಣೆ ಮೆಟ್ಟಿಲು ಸಹ ಏರಿ ಬಂದಿದ್ದಾರೆ.

ಡಿಂಪಲ್ ಹಯಾತಿ ತಮ್ಮ ಗೆಳೆಯ ವಿಕ್ಟರ್ ಎಂಬುವರ ಜೊತೆಗೆ ಹೈದರಾಬಾದ್​ನ ಜರ್ನಲಿಸ್ಟ್ ಕಲೋನಿಯ ಎಸ್​ಕೆಆರ್ ಎನ್​ಕ್ಲೇವ್ ಹೆಸರಿನ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದಾರೆ. ಇದೇ ಅಪಾರ್ಟ್​ಮೆಂಟ್​ನಲ್ಲಿ ಹೈದರಾಬಾದ್​ನ ಟ್ರಾಫಿಕ್ ಪೊಲೀಸ್ ಡೆಪ್ಯೂಟಿ ಕಮೀಷನರ್, ಐಪಿಎಸ್ ಅಧಿಕಾರಿ ರಾಹುಲ್ ಹೆಗ್ಡೆ ಸಹ ವಾಸವಿದ್ದಾರೆ. ಇವರಿಬ್ಬರಿಗೂ ಅಪಾರ್ಟ್​ಮೆಂಟ್​ನ ಪಾರ್ಕಿಂಗ್ ವಿಷಯಕ್ಕೆ ಕಳೆದ ಒಂದೆರಡು ತಿಂಗಳಿನಿಂದ ಭಿನ್ನಾಭಿಪ್ರಾಯಗಳು ನಡೆಯುತ್ತಿದ್ದವು. ಅದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಇದೀಗ ಹೊರಬಂದಿರುವ ವಿಡಿಯೋ ಒಂದರ ಪ್ರಕಾರ, ನಟಿ ಹಯಾತಿ, ಇತ್ತೀಚೆಗೆ ತಮ್ಮ ಕಾರಿನ ಎದುರು ಗಡೆ ನಿಲ್ಲಿಸಲಾಗಿದ್ದ ಡಿಸಿಪಿಯ ಕಾರಿನ ಸುತ್ತ ಇದ್ದ ಕೋನ್​ಗಳನ್ನು ಒದ್ದು ಬೀಳಿಸಿ ತಮ್ಮ ಕಾರಿನಿಂದ ಬೇಕೆಂದೇ ಡಿಸಿಪಿಯ ಖಾಸಗಿ ಕಾರಿಗೆ ಢಿಕ್ಕಿ ಹೊಡೆದಿದ್ದಾರೆ ಮಾತ್ರವಲ್ಲದೆ ಡಿಸಿಪಿಯ ಕಾರು ಚಾಲಕ, ಕಾನ್​ಸ್ಟೇಬಲ್ ಚೇತನ್ ಬಳಿ ವಾಗ್ವಾದ ನಡೆಸಿ ಅವನಿಗೆ ಮನಸೋಇಚ್ಛೆ ಬೈದಿದ್ದಾರೆ. ಬಳಿಕ, ಡಿಸಿಪಿಯ ಸಲಹೆ ಪಡೆದು ಕಾನ್​ಸ್ಟೇಬಲ್ ಚೇತನ್ ಜ್ಯೂಬ್ಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ನಟಿಯ ವಿರುದ್ಧ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡಿರುವ ಜ್ಯೂಬ್ಲಿ ಹಿಲ್ಸ್ ಪೊಲೀಸ್ ಠಾಣಾ ಸಿಬ್ಬಂದಿ ನಟಿ ಡಿಂಪಲ್ ಹಾಗೂ ಅವರ ಗೆಳೆಯ ವಿಕ್ಟರ್ ಅನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಘಟನೆ ಬಳಿಕ ಟ್ವಿಟ್ಟರ್​ನಲ್ಲಿ ಪೋಸ್ಟ್ ಹಾಕಿರುವ ಡಿಂಪಲ್, ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡರೆ ಮಾಡಿರುವ ತಪ್ಪು ಮುಚ್ಚಿಡಲಾಗುವುದಿಲ್ಲ, ಸತ್ಯಮೇವ ಜಯತೆ ಎಂದು ಬರೆದುಕೊಂಡಿದ್ದಾರೆ. ನಟಿಯ ವಿರುದ್ಧ ದೂರಿನ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಡಿಸಿಪಿ ರಾಹುಲ್ ಹೆಗ್ಡೆ, ”ಕಾನ್​ಸ್ಟೆಬಲ್ ದೂರಿನ ಅನ್ವಯ ನಟಿಯನ್ನು ಕರೆಸಿ ವಿಚಾರಣೆ ಮಾಡಲಾಗಿದೆ. ಕಾನೂನು ಏನಿದೆಯೋ ಆ ಪ್ರಕ್ರಿಯೆಗಳು ನಡೆಯಲಿವೆ” ಎಂದಿದ್ದಾರೆ.

ನಡೆದಿದ್ದೇನು?

ಅಪಾರ್ಟ್​ಮೆಂಟ್​ನ ಪಾರ್ಕಿಂಗ್​ನಲ್ಲಿ ಡಿಸಿಪಿಗೆ ಮೂರು ಕಾರು ನಿಲ್ಲಿಸಿಕೊಳ್ಳಲು ಅವಕಾಶವಿದೆ. ಅವರ ಪಾರ್ಕಿಂಗ್​ನ ಹಿಂದೆಯೇ ನಟಿಯ ಕಾರಿಗೆ ಪಾರ್ಕಿಂಗ್ ಅವಕಾಶ ನೀಡಲಾಗಿದೆ. ಪಾರ್ಕಿಂಗ್​ನಲ್ಲಿಯೇ ಡಿಸಿಪಿಯ ಗನ್​ಮ್ಯಾನ್, ಕಾರು ಚಾಲಕರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಮೂರು ಕಾರುಗಳನ್ನು ನಿಲ್ಲಿಸಿಕೊಂಡಿರುವ ಡಿಸಿಪಿ, ರಸ್ತೆಯಲ್ಲಿ ಡಿವೈಡರ್​ಗೆ ಬಳಸಲಾಗುವ ಸಂಚಾರಿ ಪೊಲೀಸ್ ಇಲಾಖೆಯ ಸಿಮೆಂಟ್ ಬ್ಲಾಕ್​ಗಳನ್ನು ಅಪಾರ್ಟ್​ಮೆಂಟ್ ಒಳಗೆ ಇಟ್ಟುಕೊಂಡಿದ್ದಾರೆ. ಇದರಿಂದ ನಟಿಗೆ ಕಾರು ನಿಲ್ಲಿಸಲು, ಹಾಗೂ ಕಾರು ನಿಲ್ಲಿಸಿದ ಬಳಿಕ ಓಡಾಡಲು ಸಮಸ್ಯೆ ಆಗಿದೆ. ಈ ಬಗ್ಗೆ ಮೊದಲೇ ಡಿಸಿಪಿ ಬಳಿ ಮಾತನಾಡಿದ್ದರೂ ಪ್ರಯೋಜನವಾಗಿಲ್ಲ. ಹಾಗಾಗಿ ನಟಿಯು ಕಾರಿನ ಸುತ್ತ ಇಟ್ಟಿದ್ದ ಕೋನ್ ಅನ್ನು ಒದ್ದಿರುವುದಲ್ಲದೆ, ಕಾರು ಚಾಲಕನ ಬಳಿ ಜಗಳವಾಡಿದ್ದಾರೆ.

ಡಿಂಪಲ್ ಹಯಾತಿ ಪರ ವಕೀಲ ಮಾಧ್ಯಮಗಳೊಟ್ಟಿಗೆ ಮಾತನಾಡಿ, ”ಡಿಂಪಲ್ ಹಯಾತಿ ಜೊತೆ ಅಗೌರವ ಪೂರ್ವಕವಾಗಿ ಆ ಐಪಿಎಸ್ ಅಧಿಕಾರಿ ವರ್ತಿಸಿದ್ದಾರೆ. ಸಾರ್ವಜನಿಕ ಆಸ್ತಿಗಳಾಗಿರುವ ಟ್ರಾಫಿಕ್ ಕೋನ್, ಬ್ಲಾಕ್​ಗಳನ್ನು ತಂದು ಅಪಾರ್ಟ್​ಮೆಂಟ್​ನಲ್ಲಿ ಆ ಅಧಿಕಾರಿ ಇಟ್ಟುಕೊಂಡಿರುವುದಲ್ಲದೆ, ಡಿಂಪಲ್ ಹಯಾತಿಯ ಕಾರು ಮುಂದೆ ಚಲಿಸದಂತೆ ತಡೆದಿದ್ದಾರೆ. ಅದನ್ನು ನಟಿ ಡಿಂಪಲ್ ಪ್ರಶ್ನೆ ಮಾಡಿದ್ದಾರೆ. ಆದರೆ ಈಗ ಅಧಿಕಾರಿಯು ಸುಳ್ಳು ದೂರನ್ನು ಡಿಂಪಲ್ ವಿರುದ್ಧ ನೀಡಿ ಎಫ್​ಐಆರ್ ದಾಖಲಾಗುವಂತೆ ಮಾಡಿದ್ದಾರೆ” ಎಂದಿದ್ದಾರೆ.

ಅಧಿಕಾರಿಯು ಕೆಲಸಕ್ಕೆ ಹೋಗುವಾಗ ತಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದೆಂಥಹಾ ಆರೋಪ, ಆಕೆಯೇನು ವಸೂಲಿ ಮಾಡುವವರೇ ಅಧಿಕಾರಿಯನ್ನು ತಡೆಯಲು, ತಡೆದಿದ್ದರೆ ಮಹಿಳಾ ಪೊಲೀಸರ ಸಹಾಯ ಪಡೆಯಬಹುದಿತ್ತಲ್ಲ, ಆ ವ್ಯಕ್ತಿ ಎರಡು ತಿಂಗಳಿಂದ ಪಾರ್ಕಿಂಗ್ ವಿಷಯದಲ್ಲಿ ನಟಿಗೆ ಕಿರುಕುಳ ನೀಡುತ್ತಲೇ ಇದ್ದರು, ಅಗೌರವದಿಂದ ಮಾತನಾಡಿದ್ದರು. ಆಗ ನಟಿ ಡಿಂಪಲ್ ಸಹ ಇದು ಹೀಗೆ ಮುಂದುವರೆದರೆ ಪ್ರಕರಣ ದಾಖಲಿಸುವುದಾಗಿ ಹೇಳಿದ್ದರು. ಇದಕ್ಕೆ ಹೆದರಿದ ಆ ಅಧಿಕಾರಿ ಚಾಲಕನಿಂದ ಪಿಟ್ಟಿ ಕೇಸು ದಾಖಲಿಸಿದ್ದಾರೆ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:06 pm, Tue, 23 May 23