ಯುವಕರ ಮೇಲೆ ಹಲ್ಲೆ ಆರೋಪ: ನಟ ವಿಜಯ್ ಹಾಗೂ ತಂಡದ ವಿರುದ್ಧ ದೂರು
Thalapathy Vijay: ದಳಪತಿ ವಿಜಯ್ ರಾಜಕೀಯ ಪಕ್ಷ ಸ್ಥಾಪನೆ ಮಾಡಿದ್ದಾರೆ. ಇತ್ತೀಚೆಗಷ್ಟೆ ಮಧುರೈನಲ್ಲಿ ಬಲು ಅದ್ಧೂರಿಯಾಗಿ ಪಕ್ಷದ ಬಹಿರಂಗ ಸಮಾವೇಶ ಆಯೋಜನೆ ಮಾಡಿದ್ದರು. ತಮಿಳುನಾಡಿನ ಮೂಲೆ-ಮೂಲೆಗಳಿಂದ ಲಕ್ಷಾಂತರ ಮಂದಿ ಅಭಿಮಾನಿಗಳು ಪಕ್ಷದ ಕಾರ್ಯಕರ್ತರು ಆಗಮಿಸಿದ್ದರು. ಆದರೆ ಸಮಾವೇಶದ ಬಳಿಕ ವಿಜಯ್ ಹಾಗೂ ಅವರ ಬೌನ್ಸರ್ಗಳ ವಿರುದ್ಧ ಹಲ್ಲೆ ಪ್ರಕರಣ ದಾಖಲಾಗಿದೆ.

ದಳಪತಿ ವಿಜಯ್ (Thalapathy Vijay) ತಮ್ಮ ಕೊನೆಯ ಸಿನಿಮಾನಲ್ಲಿ ನಟಿಸುತ್ತಿದ್ದು, ವಿಜಯ್ ರಾಜಕೀಯಕ್ಕೆ ಪ್ರವೇಶ ಮಾಡಿರುವ ಕಾರಣದಿಂದಾಗಿ ಅವರು ಸಿನಿಮಾದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ. ವಿಜಯ್ ತಮಿಳಗ ವೆಟ್ರಿ ಕಳಗಂ ಹೆಸರಿನ ಪಕ್ಷ ಸ್ಥಾಪನೆ ಮಾಡಿದ್ದು ತಮಿಳುನಾಡಿನ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಇತ್ತೀಚೆಗಷ್ಟೆ ಪಕ್ಷದ ಎರಡನೇ ಬಹಿರಂಗ ಸಮಾವೇಶವನ್ನು ಮಧುರೈನಲ್ಲಿ ವಿಜಯ್ ಆಯೋಜನೆ ಮಾಡಿದ್ದರು. ಸಮಾವೇಶವೇನೋ ಅದ್ಧೂರಿಯಾಗಿ, ಯಶಸ್ವಿಯಾಗಿ ನಡೆಯಿತು. ಅದರೆ ಇದೀಗ ಯುವಕನೊಬ್ಬ ವಿಜಯ್ ಹಾಗೂ ಅವರ ಬೌನ್ಸರ್ಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆಗಸ್ಟ್ 21 ರಂದು ಮಧುರೈನಲ್ಲಿ ವಿಜಯ್ ಬಹಿರಂಗ ರಾಜಕೀಯ ಸಮಾವೇಶ ಆಯೋಜನೆ ಮಾಡಿದ್ದರು. ತಮಿಳುನಾಡಿನ ಹಲವು ಮೂಲೆಗಳಿಂದ ಲಕ್ಷಾಂತರ ಮಂದಿ ಜನ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಯುವಕರು, ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗಿ ಆಗಿದ್ದರು. ವೇದಿಕೆ ಮೇಲೆ ರ್ಯಾಂಪ್ ಒಂದನ್ನು ನಿರ್ಮಾಣ ಮಾಡಲಾಗಿತ್ತು. ಈ ರ್ಯಾಂಪ್ ಮೇಲೆ ನಡೆಯುವ ಮೂಲಕ ವಿಜಯ್ ಕಾರ್ಯಕ್ರಮದ ಆರಂಭ ಮಾಡಿದರು.
ವಿಜಯ್, ರ್ಯಾಂಪ್ ವಾಕ್ ಆರಂಭಿಸುತ್ತಿದ್ದಂತೆ ಹಲವಾರು ಮಂದಿ ರ್ಯಾಂಪ್ ಮೇಲೆ ಹತ್ತಿ ವಿಜಯ್ ಬಳಿ ಆಗಮಿಸಲು ಯತ್ನಿಸಿದರು. ಆದರೆ ಬೌನ್ಸರ್ಗಳು ಅವರನ್ನು ತಡೆದರು. ಕೆಲವರನ್ನು ಅನಾಮತ್ತು ಎತ್ತಿ ರ್ಯಾಂಪ್ನಿಂದ ಕೆಳಕ್ಕೆ ಒಗೆದರು. ಈ ಘಟನೆಯ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಇದನ್ನೂ ಓದಿ:ದಳಪತಿ ವಿಜಯ್ ಸಮಾವೇಶಕ್ಕೆ ಸೇರಿದ ಜನರ ಸಂಖ್ಯೆ ನೋಡಿ; ಅಬ್ಬಬ್ಬಾ ಇಷ್ಟೊಂದಾ?
ಸಮಾವೇಶದ ಬಳಿಕ ಶರತ್ಕುಮಾರ್ ಹೆಸರಿನ ಯುವಕನೊಬ್ಬ ಇದೀಗ ವಿಜಯ್ ಹಾಗೂ ಅವರ ಬೌನ್ಸರ್ಗಳ ವಿರುದ್ಧ ಪೆರಂಬಲೂರು ಎಸ್ಪಿ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ. ವಿಜಯ್ ಹಾಗೂ ಅವರ ಬೌನ್ಸರ್ಗಳು ತಮ್ಮ ಮೇಲೆ ಹಲ್ಲೆ ಮಾಡಿದ್ದು ಇದರಿಂದಾಗಿ ತಮಗೆ ಗಾಯಗಳಾಗಿವೆ ಎಂದು ಆರೋಪ ಮಾಡಿದ್ದಾರೆ. ತಮ್ಮ ತಾಯಿಯೊಟ್ಟಿಗೆ ಕಚೇರಿಗೆ ಹೋಗಿ ದೂರು ದಾಖಲಿಸಿರುವ ಶರತ್ಕುಮಾರ್, ವಿಜಯ್ ಹಾಗೂ ಅವರ ಬೌನ್ಸರ್ಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
10 அடி உயர மேடையில் இருந்து சர்வசாதரணமாக தூக்கி எறியப்படும் தொண்டனை கண்டும் காணாதது போல் செல்லும் அவர்கள் மக்கள் தலைவரா? pic.twitter.com/4mflFkncv4
— Duraimurugan (@Saattaidurai) August 22, 2025
ಯುವಕ ನೀಡಿರುವ ಎಸ್ಪಿ ಕಚೇರಿಯಿಂದ ಮಧುರೈನ ಕುನ್ನಮ್ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿದ್ದು ಎಫ್ಐಆರ್ ದಾಖಲಾಗಿದೆ. ಮೂರು ಸೆಕ್ಷನ್ಗಳ ಅಡಿಯಲ್ಲಿ ವಿಜಯ್ ಮತ್ತು ಅವರ ಹತ್ತು ಮಂದಿ ಬೌನ್ಸರ್ಗಳ ವಿರುದ್ಧ ದೂರು ದಾಖಲಾಗಿದೆ. ವಿಜಯ್ ಅವರ ಬಹಿರಂಗ ಸಮಾವೇಶಕ್ಕೆ ಭಾರಿ ಸಂಖ್ಯೆಯ ಜನ ಆಗಮಿಸಿದ್ದರು. ಈ ವೇಳೆ ಭಾರಿ ನೂಕುನುಗ್ಗಲು ಉಂಟಾಯ್ತು. ವಿಶೇಷವಾಗಿ ಜನ ವೇದಿಕೆ ಏರಲು ಯತ್ನಿಸಿದಾಗ ಬೌನ್ಸರ್ಗಳು ಅವರನ್ನು ತಡೆಯುವ ಯತ್ನದಲ್ಲಿ ಕೆಲವರ ಮೇಲೆ ಹಲ್ಲೆ ಸಹ ಮಾಡಿದ್ದಾರೆ ಎನ್ನಲಾಗುತ್ತಿದೆ. ಘಟನೆಯ ಸಂಬಂಧ ವಿಡಿಯೋಗಳು ಸಹ ಹರಿದಾಡುತ್ತಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:31 am, Wed, 27 August 25




