ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ದಿನದಿಂದ ದಿನಕ್ಕೆ ಚಿತ್ರರಂಗದಲ್ಲಿ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಿದ್ದಾರೆ. ‘ಕಿರಿಕ್ ಪಾರ್ಟಿ’ ಚಿತ್ರದಿಂದ ಆರಂಭವಾದ ಅವರ ಸಿನಿಪಯಣ ಈಗ ಬಾಲಿವುಡ್ವರೆಗೂ ಸಾಗಿ ಬಂದಿದೆ. ಅಲ್ಲಿನ ಟಾಪ್ ಹೀರೋಗಳಿಗೆ ಅವರು ನಾಯಕಿ ಆಗುತ್ತಿದ್ದಾರೆ. ಒಂದಕ್ಕಿಂತ ಒಂದು ಸೂಪರ್ ಸಿನಿಮಾಗಳು (Rashmika Mandanna Movies) ಅವರಿಗೆ ಸಿಗುತ್ತಿವೆ. ವಿಜಯ್ ದೇವರಕೊಂಡ, ‘ದಳಪತಿ’ ವಿಜಯ್, ಮಹೇಶ್ ಬಾಬು, ರಣಬೀರ್ ಕಪೂರ್, ಸಿದ್ದಾರ್ಥ್ ಮಲ್ಹೋತ್ರಾ ಮುಂತಾದ ಸ್ಟಾರ್ ನಟರ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ. ಇಷ್ಟಕ್ಕೇ ನಿಂತಿಲ್ಲ ಅವರ ನಾಗಾಲೋಟ. ಈಗ ಅವರು ‘ಚಿಯಾನ್’ ವಿಕ್ರಮ್ (Chiyaan Vikram) ಸಿನಿಮಾಗೂ ನಾಯಕಿ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕಾಲಿವುಡ್ ಅಂಗಳದಲ್ಲಿ ಸುದ್ದಿ ಹರಿದಾಡುತ್ತಿದೆ.
ಚಿಯಾನ್ ವಿಕ್ರಮ್ ನಟಿಸಲಿರುವ 61ನೇ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ನಿರ್ಮಾಪಕರು ರಶ್ಮಿಕಾ ಜೊತೆ ಒಂದು ಸುತ್ತಿನ ಮಾತುಕಥೆ ನಡೆಸಿದ್ದಾರಂತೆ. ಡೇಟ್ಸ್ ಹೊಂದಾಣಿಕೆ ಮಾಡಿಕೊಳ್ಳುವುದೊಂದೇ ಬಾಕಿ ಉಳಿದಿದೆ. ಅದಾದ ಬಳಿಕ ಚಿತ್ರತಂಡದಿಂದ ಅಧಿಕೃತ ಅನೌನ್ಸ್ ಆಗಲಿದೆ ಎಂಬ ಗಾಸಿಪ್ ಹರಡಿದೆ. ಸದ್ಯಕ್ಕಂತೂ ಈ ವಿಚಾರದ ಬಗ್ಗೆ ರಶ್ಮಿಕಾ ಮಂದಣ್ಣ ಎಲ್ಲಿಯೂ ಬಾಯಿ ಬಿಟ್ಟಿಲ್ಲ.
ಈ ಸಿನಿಮಾಗೆ ನಿರ್ದೇಶಕ ಪಾ. ರಂಜಿತ್ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಕೆಲ ದಿನಗಳ ಹಿಂದೆ ಮುಹೂರ್ತ ಮಾಡಲಾಗಿದೆ. ಈ ಹಿಂದೆ ರಜನಿಕಾಂತ್ ನಟನೆಯ ‘ಕಬಾಲಿ’, ‘ಕಾಲಾ’ ಚಿತ್ರಗಳಿಗೆ ನಿರ್ದೇಶನ ಮಾಡಿದ ಖ್ಯಾತಿ ಪಾ. ರಂಜಿತ್ ಅವರಿಗೆ ಇದೆ. ಅಂಥ ನಿರ್ದೇಶಕನ ಜೊತೆ ಕೆಲಸ ಮಾಡುವ ಅವಕಾಶವನ್ನು ರಶ್ಮಿಕಾ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳಿಗೆ ಖುಷಿ ಆಗಿದೆ.
ಸ್ಟುಡಿಯೋ ಗ್ರೀನ್ ಮತ್ತು ನೀಲಂ ಪ್ರೊಡಕ್ಷನ್ಸ್ ಜಂಟಿಯಾಗಿ ‘ಚಿಯಾನ್ 61’ ಸಿನಿಮಾವನ್ನು ನಿರ್ಮಾಣ ಮಾಡಲಿವೆ. ಜಿ.ವಿ. ಪ್ರಕಾಶ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ‘ಪುಷ್ಪ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೂಪರ್ ಹಿಟ್ ಆದ ಬಳಿಕ ರಶ್ಮಿಕಾ ಮಂದಣ್ಣ ಅವರ ಖ್ಯಾತಿ ಹೆಚ್ಚಿತು. ಅನೇಕರ ಪಾಲಿಗೆ ಅವರು ಲಕ್ಕಿ ಹೀರೋಯಿನ್ ಆಗಿದ್ದಾರೆ. ಹಾಗಾಗಿ ದೊಡ್ಡ ದೊಡ್ಡ ಸಿನಿಮಾಗಳ ಅವಕಾಶಗಳು ಅವರಿಗೆ ಸಿಗುತ್ತಿವೆ.
Published On - 1:32 pm, Tue, 19 July 22