Mani Ratnam: ನಿರ್ದೇಶಕ ಮಣಿರತ್ನಂಗೆ ಕೊರೊನಾ ಪಾಸಿಟಿವ್; ಖಾಸಗಿ ಆಸ್ಪತ್ರೆಗೆ ದಾಖಲು
Mani Ratnam Hospitalized: ‘ಪೊನ್ನಿಯಿನ್ ಸೆಲ್ವನ್’ ಸಿನಿಮಾದ ಕೆಲಸಗಳಲ್ಲಿ ಮಣಿರತ್ನಂ ಅವರು ಬ್ಯುಸಿ ಆಗಿದ್ದಾರೆ. ಈಗ ಅವರಿಗೆ ಕೊವಿಡ್ ಪಾಸಿಟಿವ್ ಆಗಿರುವುದು ಆತಂಕ ಮೂಡಿಸಿದೆ.
ಖ್ಯಾತ ನಿರ್ದೇಶಕ ಮಣಿರತ್ನಂ (Mani Ratnam) ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ. ಚೆನ್ನೈನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಪ್ರಾರ್ಥಿಸುತ್ತಿದ್ದಾರೆ. ಬಹುನಿರೀಕ್ಷಿತ ‘ಪೊನ್ನಿಯಿನ್ ಸೆಲ್ವನ್’ (Ponniyin Selvan) ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಮಣಿರತ್ನಂ ಅವರು ಬ್ಯುಸಿ ಆಗಿದ್ದಾರೆ. ಚಿತ್ರದ ಬಿಡುಗಡೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಸಂದರ್ಭದಲ್ಲಿ ಅವರಿಗೆ ಕೊವಿಡ್ ಪಾಸಿಟಿವ್ (Corona Positive) ಆಗಿರುವುದು ಆತಂಕ ಮೂಡಿಸಿದೆ. ಮಣಿರತ್ನಂ ಅವರ ಆರೋಗ್ಯದಲ್ಲಿ ಏರುಪೇರು ಆದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಪರೀಕ್ಷಿಸಿದಾಗ ಅವರಿಗೆ ಕೊರೊನಾ ವೈರಸ್ ತಗುಲಿರುವುದು ಖಚಿತವಾಗಿದೆ.
ಮೂಲಗಳ ಪ್ರಕಾರ ಮಣಿರತ್ನಂ ಅವರ ಆರೋಗ್ಯ ಈಗ ಸ್ಥಿರವಾಗಿದೆ. ಯಾವುದೇ ಬೇರೆ ರೋಗ ಲಕ್ಷಣಗಳು ಇಲ್ಲ ಎಂದು ವರದಿ ಆಗಿದೆ. ಆಸ್ಪತ್ರೆ ಕಡೆಯಿಂದ ಅಥವಾ ಕುಟುಂಬದವರಿಂದ ಹೆಲ್ತ್ ಅಪ್ಡೇಟ್ ಸಿಗಲಿ ಎಂದು ಆಭಿಮಾನಿಗಳು ಕಾಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಣಿರತ್ನಂ ಅವರ ಸಂಪರ್ಕಕ್ಕೆ ಬಂದ ಎಲ್ಲರೂ ಕೊವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿದೆ.
ಜುಲೈ 8ರಂದು ಅದ್ದೂರಿಯಾಗಿ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾದ ಟೀಸರ್ ಲಾಂಚ್ ಕಾರ್ಯಕ್ರಮ ನಡೆಯಿತು. ಸೆಪ್ಟೆಂಬರ್ 30ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಬಹುಭಾಷೆಯಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಐತಿಹಾಸಿಕ ಕಥಾಹಂದರ ಇರುವ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾದಲ್ಲಿ ಐಶ್ವರ್ಯಾ ರೈ ಬಚ್ಚನ್, ಚಿಯಾನ್ ವಿಕ್ರಮ್, ಕಾರ್ತಿ, ತ್ರಿಷಾ ಮುಂತಾದ ಸ್ಟಾರ್ ಕಲಾವಿದರು ನಟಿಸಿದ್ದಾರೆ.
ಕಲ್ಕಿ ಕೃಷ್ಣಮೂರ್ತಿ ಅವರು 1955ರಲ್ಲಿ ಬರೆದ ‘ಪೊನ್ನಿಯಿನ್ ಸೆಲ್ವನ್’ ಕಾದಂಬರಿ ಆಧರಿಸಿ ಈ ಚಿತ್ರ ಮೂಡಿಬರುತ್ತಿದೆ. ತಮಿಳು, ಹಿಂದಿ, ಕನ್ನಡ, ಮಲಯಾಳಂ ಮತ್ತು ತೆಲುಗು ಭಾಷೆಯಲ್ಲಿ ಇದು ಬಿಡುಗಡೆ ಆಗಲಿದೆ ಎಂಬುದು ವಿಶೇಷ. ಐಶ್ವರ್ಯಾ ರೈ ಅವರ ವೃತ್ತಿಜೀವನದಲ್ಲಿ ಇದು ಮಹತ್ವದ ಚಿತ್ರ ಆಗಲಿದೆ. ಇದರಲ್ಲಿ ಅವರು ನಂದಿನಿ ಎಂಬ ರಾಣಿಯ ಪಾತ್ರ ಮಾಡುತ್ತಿದ್ದಾರೆ.
Published On - 11:35 am, Tue, 19 July 22