ಖ್ಯಾತ ಕೊರಿಯೋಗ್ರಾಫರ್ ಕೊವಿಡ್ಗೆ ಬಲಿ; ಮತ್ತೆ ಹೆಚ್ಚಿತು ಆತಂಕ
ಶಿವಶಂಕರ್ ಅವರಿಗೆ ಕೊವಿಡ್ ಕಾಣಿಸಿಕೊಂಡಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಕೊವಿಡ್ನಿಂದ ಅವರ ಶ್ವಾಸಕೋಶಕ್ಕೆ ಸಾಕಷ್ಟು ಹಾನಿ ಉಂಟಾಗಿತ್ತು. ಅವರ ಆರೋಗ್ಯ ಚೇತರಿಕೆ ಕಾಣಲೇ ಇಲ್ಲ.
ಕೊರೊನಾ ವೈರಸ್ ಆತಂಕ ಮತ್ತೆ ಹೆಚ್ಚಿದೆ. ಎಲ್ಲ ಕಡೆಗಳಲ್ಲೂ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಸರ್ಕಾರಗಳು ಸೂಚಿಸಿವೆ. 2020-21ರಲ್ಲಿ ಚಿತ್ರರಂಗದ ಸಾಕಷ್ಟು ಜನರನ್ನು ಕೊರೊನಾ ಬಲಿ ಪಡೆದುಕೊಂಡಿದೆ. 2021 ಪೂರ್ಣಗೊಳ್ಳುವುದಕ್ಕೂ ಮೊದಲು ಮತ್ತೆ ಕೊರೊನಾ ಅಬ್ಬರ ಶುರುವಾಗುವ ಲಕ್ಷಣ ಗೋಚರವಾಗಿದ್ದು, ಸಾಕಷ್ಟು ಆತಂಕ ಮೂಡಿಸಿದೆ. ಈಗ ಟಾಲಿವುಡ್ನ ಖ್ಯಾತ ಕೊರಿಯೋಗ್ರಾಫರ್ ಶಿವಶಂಕರ್ ಅವರು ಕೊವಿಡ್ನಿಂದ ನಿಧನ ಹೊಂದಿದ್ದಾರೆ. ಇಂದು (ನವೆಂಬರ್ 28) ರಾತ್ರಿ 8 ಗಂಟೆ ಸುಮಾರಿಗೆ ಅವರು ಮೃತಪಟ್ಟಿದ್ದಾರೆ.
ಕೆಲ ದಿನಗಳ ಹಿಂದೆ ಶಿವಶಂಕರ್ ಅವರಿಗೆ ಕೊವಿಡ್ ಕಾಣಿಸಿಕೊಂಡಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಕೊವಿಡ್ನಿಂದ ಅವರ ಶ್ವಾಸಕೋಶಕ್ಕೆ ಸಾಕಷ್ಟು ಹಾನಿ ಉಂಟಾಗಿತ್ತು. ಅವರ ಆರೋಗ್ಯ ಚೇತರಿಕೆ ಕಾಣಲೇ ಇಲ್ಲ. ಹೀಗಾಗಿ ಅವರು ಮೃತಪಟ್ಟಿದ್ದಾರೆ. ಬೇಸರದ ಸಂಗತಿ ಎಂದರೆ ಶಿವಶಂಕರ್ ಅವರ ಮಗ ಹಾಗೂ ಪತ್ನಿಗೂ ಕೊವಿಡ್ ಅಂಟಿದೆ. ಮಗನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಪತ್ನಿ ಸುಗಣ್ಯಾ ಮನೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ.
ಸೋನು ಸೂದ್, ಧನುಷ್, ಚಿರಂಜೀವಿ ಮತ್ತು ಇತರರು ಶಿವಶಂಕರ್ಗೆ ಸಹಾಯ ಮಾಡಲು ಮುಂದೆ ಬಂದಿದ್ದರು. ಶಿವಶಂಕರ್ ಅವರ ಆಸ್ಪತ್ರೆ ಬಿಲ್ಅನ್ನು ಸಂಪೂರ್ಣವಾಗಿ ತಾವು ಭರಿಸುವುದಾಗಿ ಸೋನು ಸೂದ್ ಹೇಳಿದ್ದರು. ಆದರೆ, ಭಾನುವಾರ ಅವರ ದೇಹ ಚಿಕಿತ್ಸೆಗೆ ಸ್ಪಂದಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿತ್ತು. ರಾತ್ರಿ ವೇಳೆಗೆ ಅವರು ಮೃತಪಟ್ಟಿದ್ದಾರೆ. ಅವರ ನಿಧನಕ್ಕೆ ಸಾಕಷ್ಟು ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ.
1948ರಲ್ಲಿ ಶಿವಶಂಕರ್ ಜನಿಸಿದರು. ನಿಧನ ಹೊಂದುವಾಗ ಅವರಿಗೆ 72 ವರ್ಷ ವಯಸ್ಸಾಗಿತ್ತು. ತೆಲುಗು, ತಮಿಳು, ಮತ್ತು ಇತರ ಭಾಷೆಗಳಲ್ಲಿ ಅವರು ಕೆಲಸ ಮಾಡಿದ್ದರು. ರಿಯಾಲಿಟಿ ಶೋಗಳಲ್ಲೂ ಅವರು ಜಡ್ಜ್ ಆಗಿದ್ದರು. ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳು ಅವರಿಗೆ ಒಲಿದಿವೆ.
ಶಿವಶಂಕರ್ ನಿಧನಕ್ಕೆ ಸೋನು ಸೂದ್ ಸಂತಾಪ ಸೂಚಿಸಿದ್ದಾರೆ. ‘ಶಿವಶಂಕರ್ ಮಾಸ್ಟರ್ ನಿಧನದ ಸುದ್ದಿ ಕೇಳಿ ಬೇಸರವಾಯಿತು. ಅವರನ್ನು ಉಳಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು. ಆದರೆ, ದೇವರಿಗೆ ಬೇರೆ ಯೋಜನೆಗಳಿದ್ದವು. ಯಾವಾಗಲೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ ಮಾಸ್ಟರ್. ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕುಟುಂಬಕ್ಕೆ ನೀಡಲಿ. ಸಿನಿಮಾ ಯಾವಾಗಲೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತದೆ’ ಎಂದಿದ್ದಾರೆ.
Heartbroken to hear about the demise of Shiv Shankar masterji. Tried our best to save him but God had different plans. Will always miss you masterji. May almighty give strength to the family to bear this loss. Cinema will always miss u sir ? pic.twitter.com/YIIIEtcpvK
— sonu sood (@SonuSood) November 28, 2021
ಇದನ್ನೂ ಓದಿ: ‘ಇದು ಮರಳಿ ನಮ್ಮ ಮನೆಗಳನ್ನು ನಿರ್ಮಿಸುವ ಸಮಯ’; ಆಂಧ್ರಕ್ಕೆ ಸೋನು ಸೂದ್ ಸಹಾಯ ಹಸ್ತ
Published On - 9:44 pm, Sun, 28 November 21