ಅಲ್ಲು ಅರ್ಜುನ್ ಜೊತೆಗಿನ ಬಾಂಧವ್ಯದ ಬಗ್ಗೆ ರೇವಂತ್ ರೆಡ್ಡಿ ಮಾತು
Allu Arjun: ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಅಲ್ಲು ಅರ್ಜುನ್ ಬಗ್ಗೆ ದೆಹಲಿ ಕಾರ್ಯಕ್ರಮದಲ್ಲಿ, ತೆಲಂಗಾಣ ವಿಧಾನಸಭೆ ಯಲ್ಲಿ ಕಟು ಶಬ್ದಗಳ ಬಳಸಿ ಟೀಕೆ ಮಾಡಿದ್ದಾರೆ. ನಿನ್ನೆ ಚಿತ್ರರಂಗದವರೊಟ್ಟಿಗೆ ನಡೆದ ಸಭೆಯಲ್ಲಿ ಅನೌಪಚಾರಿಕವಾಗಿ ಅಲ್ಲು ಅರ್ಜುನ್ ಬಗ್ಗೆ ಮಾತನಾಡಿರುವ ರೇವಂತ್ ರೆಡ್ಡಿ, ಕೆಲವು ವಿಷಯ ಹಂಚಿಕೊಂಡಿದ್ದಾರೆ.

ಸಂಧ್ಯಾ ಚಿತ್ರಮಂದಿರ ಕಾಲ್ತುಳಿತ ಪ್ರಕರಣವನ್ನು ತೆಲಂಗಾಣ ಸರ್ಕಾರ ಬಲು ಗಂಭೀರವಾಗಿ ಪರಿಗಣಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಅನ್ನು ಬಂಧನ ಸಹ ಮಾಡಲಾಗಿತ್ತು. ನ್ಯಾಯಾಲಯದಲ್ಲಿ ಹೋರಾಡಿ ಒಂದೇ ದಿನಕ್ಕೆ ಜೈಲಿನಿಂದ ಹೊರಬಂದರಾದರೂ ಸಿಎಂ ರೇವಂತ್ ರೆಡ್ಡಿ ದೆಹಲಿಯಲ್ಲಿ ನಡೆದ ಮಾಧ್ಯಮ ಕಾರ್ಯಕ್ರಮದಲ್ಲಿ ಆ ನಂತರ ತೆಲಂಗಾಣ ವಿಧಾನಸಭೆಯಲ್ಲಿ ಅಲ್ಲು ಅರ್ಜುನ್ ವಿರುದ್ಧ ಕಟು ಶಬ್ದಗಳನ್ನು ಬಳಸಿ ಟೀಕೆ ಮಾಡಿದ್ದರು. ಅಲ್ಲು ಅರ್ಜುನ್ ಮಾನವೀಯತೆ ಮರೆತು ವರ್ತಿಸಿದ್ದಾನೆ ಎಂದೆಲ್ಲ ನಿಂದಿಸಿದ್ದರು.
ಎಲ್ಲ ಘಟನೆಗಳ ನಂತರ ನಿನ್ನೆ (ಡಿಸೆಂಬರ್ 26) ತೆಲುಗು ಚಿತ್ರರಂಗದ ಪ್ರಮುಖ ನಿರ್ಮಾಪಕರು, ನಿರ್ದೇಶಕರು ಮತ್ತು ನಟರುಗಳು ಸಿಎಂ ರೇವಂತ್ ರೆಡ್ಡಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಈ ವೇಳೆ ಚಿತ್ರರಂಗದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದೀರ್ಘವಾದ ಚರ್ಚೆ ನಡೆಯಿತು. ಈ ವೇಳೆ ತುಸು ನಿಷ್ಠುರವಾಗಿಯೇ ಮಾತನಾಡಿದ ಸಿಎಂ ರೇವಂತ್ ರೆಡ್ಡಿ, ಯಾವುದೇ ಕಾರಣಕ್ಕೂ ಬೆನಿಫಿಟ್ ಶೋಗಳಿಗೆ, ವಿಶೇಷ ಶೋಗಳಿಗೆ ಅವಕಾಶ ನೀಡುವುದಿಲ್ಲವೆಂದು ಹಾಗೂ ಟಿಕೆಟ್ ದರ ಹೆಚ್ಚಳಕ್ಕೂ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಅಲ್ಲು ಅರ್ಜುನ್ ವಿವಾದದ ಬಳಿಕ ‘ಪುಷ್ಪ 2’ ಸಿನಿಮಾದ ಹಾಡಿಗೆ ಕತ್ತರಿ
ಸಭೆಯ ಬಳಿಕ ಅನೌಪಚಾರಿಕ ಮಾತುಕತೆಯಲ್ಲಿ ರೇವಂತ್ ರೆಡ್ಡಿ, ಅಲ್ಲು ಅರ್ಜುನ್ ಬಗ್ಗೆ ಮಾತನಾಡಿದ್ದು, ಅಲ್ಲು ಅರ್ಜುನ್ ಬಾಲ್ಯದಿಂದಲೂ ನನಗೆ ಪ್ರೀತಿ ಪಾತ್ರರು ಎಂದು ಹೇಳಿಕೊಂಡಿದ್ದಾರೆ. ಚಿತ್ರರಂಗದವರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ ರೇವಂತ್ ರೆಡ್ಡಿ, ‘ನನಗೆ ಅಲ್ಲು ಅರ್ಜುನ್ ಮೇಲೆ ಸಿಟ್ಟು ಯಾಕೆ? ಆತ ನನಗೇನು ಮಾಡಿದ್ದಾನೆ? ಅಸಲಿಗೆ ಸಣ್ಣ ವಯಸ್ಸಿನಿಂದಲೂ ಅಲ್ಲು ಅರ್ಜುನ್ ಮತ್ತು ರಾಮ್ ಚರಣ್ ನನಗೆ ಬಹಳ ಪರಿಚಿತರು. ನನ್ನೊಟ್ಟಿಗೆ ಬಹಳ ವರ್ಷಗಳಿಂದಲೂ ಅವರು ಬಾಂಧವ್ಯ ಹೊಂದಿದ್ದಾರೆ’ ಎಂದಿದ್ದಾರೆ.
‘ವೈಯಕ್ತಿಕವಾಗಿ ನನಗೆ ಪರಿಚಯ ಇದ್ದರೂ ಸಹ ಕಾನೂನಿನ ಪ್ರಕಾರ ಕೆಲವು ಕಾರ್ಯಗಳನ್ನು ನಾನು ಮಾಡಲೇ ಬೇಕಿರುತ್ತದೆ. ಹಾಗೂ ನನ್ನ ಕರ್ತವ್ಯವನ್ನು ನಾನು ಮಾಡುತ್ತಿದ್ದೇನೆ’ ಎಂದು ಸಿಎಂ ರೇವಂತ್ ರೆಡ್ಡಿ ಹೇಳಿದ್ದಾರೆ. ಅಸಲಿಗೆ ಅಲ್ಲು ಅರ್ಜುನ್ರ ಪತ್ನಿ ಸ್ನೇಹಾ ರೆಡ್ಡಿ ಅವರು ಸಿಎಂ ರೇವಂತ್ ರೆಡ್ಡಿಯವರಿಗೆ ಆಪ್ತ ಬಂಧು. ಹಾಗಿದ್ದರೂ ಸಹ ಅಲ್ಲು ಅರ್ಜುನ್ ಅನ್ನು ಟಾರ್ಗೆಟ್ ಮಾಡಿ ಬಂಧಿಸಿದ್ದಾರೆ ಸಿಎಂ.
ಇನ್ನು ತೆಲಂಗಾಣದ ಸಿನಿಮಾಟೊಗ್ರಫಿ ಸಚಿವ ಕೊಮ್ಮಟಿರೆಡ್ಡಿ ವೆಂಕಟರೆಡ್ಡಿ ಮಾಧ್ಯಮಗಳ ಜೊತೆಗೆ ಅಲ್ಲು ಅರ್ಜುನ್ ವಿಷಯ ಮಾತನಾಡಿ, ‘ಅಲ್ಲು ಅರ್ಜುನ್ಗೆ ಸಂಬಂಧಿಸಿದ ಎಲ್ಲ ವಿಷಯಗಳು ಮುಗಿದಿವೆ’ ಎಂದಿದ್ದಾರೆ. ಆ ಮೂಲಕ ಚಿತ್ರರಂಗ ಮಾಡಿರುವ ಸಂಧಾನ ಸಭೆ ಯಶಸ್ವಿಯಾಗಿರುವ ಸುಳಿವು ನೀಡಿದ್ದಾರೆ. ಕೆಲ ದಿನಗಳ ಹಿಂದೆ ಇದೇ ಸಚಿವರು, ‘ಪುಷ್ಪ 2’ ಅತ್ಯಂತ ಕೆಟ್ಟ ಸಿನಿಮಾ, ಯುವಕರ ದಾರಿ ತಪ್ಪಿಸುವ ಸಿನಿಮಾ, ಅಲ್ಲು ಅರ್ಜುನ್ಗೆ ಜವಾಬ್ದಾರಿಯಿಲ್ಲ, ಚಿತ್ರರಂಗದವರಿಗೆ ಮಾನವೀಯತೆ ಇಲ್ಲ ಎಂದೆಲ್ಲ ಟೀಕೆ ಮಾಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:07 pm, Fri, 27 December 24