ಜೀವ ಬೆದರಿಕೆ ಆರೋಪ; ದರ್ಶನ್​ ವಿರುದ್ಧ ಸ್ತ್ರೀ ಶಕ್ತಿ ಸಂಘದ ಸದಸ್ಯರಿಂದ ದೂರು ದಾಖಲು

| Updated By: ಮದನ್​ ಕುಮಾರ್​

Updated on: Feb 23, 2024 | 12:37 PM

‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಅವರು ಇತ್ತೀಚೆಗಿನ ದಿನಗಳಲ್ಲಿ ನೀಡಿದ ಹೇಳಿಕೆಗಳನ್ನು ಗುರಿಯಾಗಿಸಿಕೊಂಡು ಪುಟ್ಟೇನಹಳ್ಳಿ ಪೊಲೀಸ್​ ಠಾಣೆಗೆ ದೂರು ನೀಡಲಾಗಿದೆ. ಅಲ್ಲದೇ, ಈ ಮೊದಲು ಸಂದರ್ಶನಗಳಲ್ಲಿ ಅವರು ಆಡಿದ ಮಾತನ್ನು ಸಹ ಕಾರಣವಾಗಿ ಇಟ್ಟುಕೊಂಡು ದೂರು ದಾಖಲು ಮಾಡಲಾಗಿದೆ. ಈ ದೂರಿನಲ್ಲಿ ದರ್ಶನ್​ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಲಾಗಿದೆ.

ಜೀವ ಬೆದರಿಕೆ ಆರೋಪ; ದರ್ಶನ್​ ವಿರುದ್ಧ ಸ್ತ್ರೀ ಶಕ್ತಿ ಸಂಘದ ಸದಸ್ಯರಿಂದ ದೂರು ದಾಖಲು
ಮಹಿಳೆಯರ ದೂರು, ದರ್ಶನ್​
Follow us on

ಖ್ಯಾತ ನಟ ದರ್ಶನ್​ (Darshan) ಅವರ ವಿರುದ್ಧ ಕೆಲವು ಸಂಘ, ಸಂಸ್ಥೆಗಳು ತಿರುಗಿ ಬಿದ್ದಿವೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ (Umapathy Srinivas Gowda) ಅವರಿಗೆ ‘ತಗಡು’ ಎಂದು ದರ್ಶನ್​ ಹೇಳಿದ ಬಳಿಕ ಅನೇಕರು ಖಂಡನೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ರಾಜ್ಯ ಒಕ್ಕಲಿಗರ ಸಂಘ, ಗೌಡತಿಯರ ಸೇನೆ ಕಡೆಯಿಂದ ಆಕ್ಷೇಪ ಕೇಳಿಬಂದಿದೆ. ಈಗ ಸ್ತ್ರೀ ಶಕ್ತಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ದರ್ಶನ್​ ವಿರುದ್ಧ ದೂರು ನೀಡಿದ್ದಾರೆ. ಪುಟ್ಟೇನಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಇದರಲ್ಲಿ ದರ್ಶನ್​ ವಿರುದ್ಧ ಹಲವು ಆರೋಪಗಳನ್ನು ಮಾಡಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ದರ್ಶನ್​ ಅವರು ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಶ್ರೀರಂಗಪಟ್ಟಣದಲ್ಲಿ ಸಮಾರಂಭ ಏರ್ಪಡಿಸಲಾಗಿತ್ತು. ಆ ವೇದಿಕೆಯಲ್ಲಿ ದರ್ಶನ್​ ಆಡಿದ ಮಾತುಗಳಿಗೆ ಟೀಕೆ ಕೇಳಿಬರುತ್ತಿದೆ. ಅಲ್ಲದೇ, ಈ ಮೊದಲು ಮಾಧ್ಯಮಗಳ ಸಂದರ್ಶನಗಳಲ್ಲಿ ದರ್ಶನ್​ ನೀಡಿದ ಹೇಳಿಕೆಗಳನ್ನು ಇಟ್ಟುಕೊಂಡು ಈಗ ದೂರು ದಾಖಲು ಮಾಡಲಾಗುತ್ತಿದೆ.

ಮಹಿಳೆಯರು ಮಾಡಿದ ಆರೋಪಗಳು:

‘ಕರ್ನಾಟಕದಲ್ಲಿ ಪ್ರಖ್ಯಾತಿ ಹೊಂದಿರುವ ನಟ ದರ್ಶನ್​ ಅವರು ಹಲವಾರು ಬಾರಿ ಮಹಿಳೆಯರಿಗೆ ಅವಮಾನ ಆಗುವ ರೀತಿಯಲ್ಲಿ ಕೆಲವೊಂದು ಟಿವಿ ಇಂಟರ್​ವ್ಯೂಗಳಲ್ಲಿ ಹಾಗೂ ಕೆಲವೊಂದು ವೇದಿಕೆಗಳಲ್ಲಿ ಮಹಿಳೆಯರನ್ನು ಬಹಳ ಕೆಟ್ಟದಾಗಿ ಬಿಂಬಿಸಿರುತ್ತಾರೆ. ಇದನ್ನೆಲ್ಲವನ್ನು ಬಹಳ ದಿನಗಳಿಂದ ಸಹಿಸಿಕೊಂಡು ಬಂದ ನಾವುಗಳು ಇನ್ಮುಂದೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಕಾರಣ ಏನೆಂದರೆ, ಶ್ರೀರಂಗಪಟ್ಟಣದಲ್ಲಿ ನಡೆದ 25 ವರ್ಷದ ಬೆಳ್ಳಿ ಸಂಭ್ರಮದಲ್ಲಿ ನಟ ದರ್ಶನ್​ ಅವರು ಮಹಿಳೆಯರಿಗೆ ಅವಮಾನ ಆಗುವ ರೀತಿಯಲ್ಲಿ ಮಾನ್ಯ ಮಠಾಧೀಶರು, ಗಣ್ಯ ವ್ಯಕ್ತಿಗಳು ಹಾಗೂ ಸಾರ್ವಜನಿಕರ ಮಧ್ಯದಲ್ಲಿ ಘಂಟಾಘೋಷವಾಗಿ ಮಹಿಳೆಯರನ್ನು ನಿಂದಿಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ದರ್ಶನ್​ ವಿರುದ್ಧ ಗೌಡತಿಯರ ಸೇನೆ ಗರಂ; ನಟನ ಮೇಲೆ ಕ್ರಮ ಕೈಗೊಳ್ಳುವಂತೆ ಮಹಿಳಾ ಆಯೋಗಕ್ಕೆ ಪತ್ರ

‘ಅವರ ವೈಯಕ್ತಿಕ ಜೀವನದ ವಿಚಾರದಲ್ಲಿ ತಮ್ಮ ಹೆಂಡತಿಗೂ ಸಹ ಸುಮಾರು ವರ್ಷಗಳಿಂದ ಕಿರುಕುಳ ನೀಡುತ್ತಿದ್ದು, ಅದರ ವಿಚಾರವಾಗಿ ಕಾರಾಗೃಹಕ್ಕೂ ಹೋಗಿಬಂದಿರುತ್ತಾರೆ. ಇಡೀ ದೇಶವೇ ಪೂಜಿಸಿ ಆರಾಧಿಸುವಂತಹ ಮಹಾಲಕ್ಷ್ಮಿಯೂ ಸಹ ಒಂದು ಹೆಣ್ಣಾಗಿದ್ದು, ಆ ದೇವತೆಯನ್ನೂ ಸಹ ಬಿಡದೆ ಬೆತ್ತಲೆ ಮಾಡಬೇಕೆಂದು ಹೇಳಿಕೆಯನ್ನು ನೀಡಿ ಹೆಣ್ಣಿನ ಕುಲಕ್ಕೆ ಧಕ್ಕೆ ಬರುವುದಾಗಿ ನಿಂದಿಸಿರುತ್ತಾರೆ’ ಎಂದು ಕೂಡ ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ: ಚಾಕೊಲೇಟ್​ನಿಂದ ತಯಾರಾದ ದರ್ಶನ್​​ ಪ್ರತಿಮೆ; ಡಿ ಬಾಸ್​ಗೆ ಸ್ನೇಹಿತರ ಸರ್ಪ್ರೈಸ್​

‘ಈ ಸಂಬಂಧವಾಗಿ ವಿಡಿಯೋ ಮತ್ತು ಆಡಿಯೋ ಸಾಕ್ಷಿ ನಮ್ಮ ಬಳಿಕ ಇರುತ್ತವೆ. ಹೆಣ್ಣು ಮಕ್ಕಳನ್ನು ಹೆದರಿಸಿ, ಬೆದರಿಸಿ, ಕೆಟ್ಟ ಕೆಟ್ಟ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆಯನ್ನು ಸಹ ಹಾಕಿರುತ್ತಾರೆ. ಆದ್ದರಿಂದ ಈ ರೀತಿ ಪದೇಪದೇ ಹೇಳಿಕೆ ನೀಡಿ ಮಹಿಳೆಯರಿಗೆ ಮಾನಸಿಕವಾಗಿ ಹಾಗೂ ವ್ಯಕ್ತಿ ಚಾರಿತ್ರ್ಯಕ್ಕೆ ತೊಂದರೆ ನೀಡುತ್ತಿರುವ ದರ್ಶನ್​ ಅವರ ವಿರುದ್ಧ ಸೂಕ್ತವಾದ ಕಾನೂನು ರೀತಿ ಕ್ರಮ ಜರುಗಿಸಿ ಬಂಧಿಸಬೇಕೆಂದು ತಮ್ಮಲ್ಲಿ ಈ ಪತ್ರದ ಮೂಲಕ ಕೋರಲಾಗಿದೆ’ ಎಂದು ಮಹಿಳಾ ಸಂಘದವರು ದೂರು ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.