ದರ್ಶನ್ ವಿರುದ್ಧ ಗೌಡತಿಯರ ಸೇನೆ ಗರಂ; ನಟನ ಮೇಲೆ ಕ್ರಮ ಕೈಗೊಳ್ಳುವಂತೆ ಮಹಿಳಾ ಆಯೋಗಕ್ಕೆ ಪತ್ರ
‘ಇವತ್ತು ಇವಳು ಇರ್ತಾಳೆ, ನಾಳೆ ಅವಳು ಇರ್ತಾಳೆ. ನಿಮ್ ಅಜ್ಜಿನಾ ಬಡಿಯಾ. ನಿಮಗೆಲ್ಲ ತಲೆ ಕೆಡಿಸಿಕೊಂಡು ನಾನೇಕೆ ಕುಳಿತುಕೊಳ್ಳಲಿ’ ಎಂದು ದರ್ಶನ್ ಹೇಳಿದ್ದಕ್ಕೆ ಆಕ್ಷೇಪ ಎದುರಾಗಿದೆ. ದರ್ಶನ್ ಅವರು ಆಡಿದ ಮಾತುಗಳನ್ನು ಖಂಡಿಸಿ, ಮಹಿಳಾ ಆಯೋಗಕ್ಕೆ ‘ಗೌಡತಿಯರ ಸೇನೆ’ ಪತ್ರ ಬರೆದಿದೆ. ವಿಚಾರಣೆ ನಡೆಸಿ, ನಟನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಗಿದೆ.
ಸ್ಯಾಂಡಲ್ವುಡ್ ನಟ ದರ್ಶನ್ (Darshan) ಅವರ ಕೊರಳಿಗೆ ಹಲವು ವಿವಾದಗಳು ಸುತ್ತಿಕೊಳ್ಳುತ್ತಿವೆ. ವೇದಿಕೆ ಮೇಲೆ ಅವರು ಆಡಿದ ಮಾತುಗಳಿಗೆ ಅನೇಕರಿಂದ ಖಂಡನೆ ವ್ಯಕ್ತವಾಗುತ್ತಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ (Umapathy Srinivas Gowda) ಅವರಿಗೆ ‘ತಗಡು’ ಎಂಬ ಪದ ಬಳಕೆ ಮಾಡಿದ್ದನ್ನು ರಾಜ್ಯ ಒಕ್ಕಲಿಗರ ಸಂಘ ಖಂಡಿಸಿದೆ. ಅದೇ ರೀತಿ, ‘ಬೆಳ್ಳಿ ಪರ್ವ ಡಿ-25’ ಸಮಾರಂಭದಲ್ಲಿ ದರ್ಶನ್ ಅವರು ಮಹಿಳೆಯರ ಬಗ್ಗೆ ಆಡಿದ ಮಾತುಗಳಿಗೆ ಗೌಡತಿಯರ ಸೇನೆ (Gowdathiyara Sene) ಕೂಡ ಆಕ್ಷೇಪ ವ್ಯಕ್ತಪಡಿಸಿದೆ. ದರ್ಶನ್ ಅವರ ಹೇಳಿಕೆಯನ್ನು ಖಂಡಿಸಿ, ಮಹಿಳಾ ಆಯೋಗದ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ‘ದರ್ಶನ್ ವಿರುದ್ಧ ಮಹಿಳಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮಾಡಲು ಸಿದ್ಧರಿದ್ದೇವೆ’ ಎಂದು ಗೌಡತಿಯರ ಸೇನೆದವರು ಪತ್ರದಲ್ಲಿ ತಿಳಿಸಿದ್ದಾರೆ.
‘ಯುವ ಜನರಿಗೆ ಮಾದರಿ ಆಗಬೇಕಿದ್ದ ಒಬ್ಬ ನಾಯಕ ನಟ ಅಸಹಜ ಹೇಳಿಕೆಗಳನ್ನು ಕೊಡುತ್ತಿರುವುದು. 25ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಾರ್ವಜನಿಕ ಸಭೆಯಲ್ಲಿ ಹೆಣ್ಣು ಮಕ್ಕಳ ಬಗ್ಗೆ ಕೀಳು ಭಾವನೆಯಿಂದ ಒಬ್ಬಳು ಹೋಗುತ್ತಾಳೆ ಒಬ್ಬಳು ಬರುತ್ತಾಳೆ ಅವಳ ಅಜ್ಜಿನಾ ಬಡಿಯ ಎಂದು ಉಡಾಫೆಯಾಗಿ ಮಾತನಾಡಿರುತ್ತಾರೆ. ಈ ಸಭೆಯಲ್ಲಿ ಆದಿಚುಂಚನಗಿರಿ ಗುರುಗಳು, ಸಂಸದೆ ಸುಮಲತಾ, ಹಲವಾರು ಗಣ್ಯಾತಿಗಣ್ಯರು, ಸಾವಿರಾರು ಅಭಿಮಾನಿಗಳು ಉಪಸ್ಥಿತರಿದ್ದರು’ ಎಂದು ಪತ್ರದಲ್ಲಿ ಬರೆಯಲಾಗಿದೆ.
‘ಸಮಾಜಕ್ಕೆ ಮಾದರಿ ಆಗಬೇಕಾದ ನಟನೊಬ್ಬ ಸಾರ್ವಜನಿಕವಾಗಿ ಹೀಗೆ ಮಾತನಾಡುವುದು ಅಕ್ಷಮ್ಯ ಅಪರಾಧವಾಗಿದ್ದು, ವಿಚಾರಣೆ ನಡೆಸಿ, ಆತ ಉಪಯೋಗಿಸಿರುವ ಪದಗಳು ಯಾವ ಭಾವನೆಯಿಂದ ಹೇಳಿದ್ದಾರೆಂದು ವಿವರಣೆ ಕೇಳಬೇಕಾಗಿ ವಿನಂತಿ. ಈ ಹಿಂದೆಯೂ ಈ ನಟ ಹೆಂಡತಿಗೆ ಸಿಗರೇಟ್ನಿಂದ ಸುಟ್ಟು ಮಾನಸಿಕವಾಗಿ ಕಿರುಕುಳ ಕೊಟ್ಟು ಜೈಲು ಪಾಲಾಗಿದ್ದು ಇತಿಹಾಸ. ಇನ್ನೊಂದು ಸಂದರ್ಭದಲ್ಲಿ ಅದೃಷ್ಟ ದೇವತೆ ನಿಮ್ಮ ಮನೆಗೆ ಬಂದರೆ ಬಟ್ಟೆ ಬಿಚ್ಚಿ ರೂಮಿನಲ್ಲಿ ಕೂಡಿಹಾಕಿ ಎಂಬ ಹೇಳಿಕೆ ನೀಡಿ ಹೆಣ್ಣು ಮಕ್ಕಳು ಮುಜುಗರಗೊಳ್ಳುವಂತೆ ಮಾಡಿರುತ್ತಾನೆ. ಮಾದರಿ ನಾಯಕ ಯುವ ಜನತೆಗೆ ನೀಡುತ್ತಿರುವ ಸಂದೇಶ ಏನು ಎನ್ನುವುದರ ಸ್ಪಷ್ಟನೆ ನೀಡಿ ಕ್ಷಮೆ ಕೇಳಬೇಕು’ ಎಂದು ಗೌಡತಿಯರ ಸೇನೆಯವರು ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ‘ಸಿನಿಮಾ ಆಗುವ ತನಕ ನಿರ್ಮಾಪಕ, ಆಮೇಲೆ ತಗಡು’; ದರ್ಶನ್ಗೆ ಉಮಾಪತಿ ತಿರುಗೇಟು
‘ಈ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಸಲೀಸಾಗಿ ಹರಿದಾಡುತ್ತಿದ್ದು ಯುವ ಜನತೆ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು? ಹೆಣ್ಣು ಮಕ್ಕಳ ಬಗೆಗಿನ ಅವರ ದೃಷ್ಟಿಕೋನ ಬದಲಾಗಬಹುದು. ದರ್ಶನ್ ಸಂಪೂರ್ಣ ಬದಲಾಗಬೇಕು. ಬದಲಾವಣೆ ಆಗದಿದ್ದರೆ ಹೆಣ್ಣು ಮಕ್ಕಳನ್ನು ತೆರೆಯಮೇಲೆ ಗೌರವಿಸಿದಂತೆ ತೆರೆಯ ಹಿಂದೆಯೂ ಗೌರವಿಸಬೇಕು. ಈ ನಿಟ್ಟಿನಲ್ಲಿ ಮಹಿಳಾ ಆಯೋಗ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಎಚ್ಚೆತ್ತುಕೊಳ್ಳದಿದ್ದರೆ ಹೋರಾಟ ಮಾಡಲು ಸಿದ್ಧ ಇದ್ದೇವೆ. ಮುಂದೆ ಸಾರ್ವಜನಿಕವಾಗಿ ಈ ರೀತಿ ಮಾತನಾಡದಂತೆ ಎಚ್ಚರಿಕೆ ವಹಿಸಬೇಕು’ ಎಂದು ಪತ್ರದಲ್ಲಿ ಗೌಡತಿಯರ ಸೇನೆಯವರು ಒತ್ತಾಯಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.