‘ನಾನು ದೇಣಿಗೆ ಕೇಳಲ್ಲ, ಕೊಡ್ತೀನಿ’; ಬೇರೆ ಸ್ಟಾರ್​ಗಳಿಗಿಂತ ಭಿನ್ನ ಹೆಜ್ಜೆ ಇಟ್ಟ ಅಮಿತಾಭ್​

| Updated By: ರಾಜೇಶ್ ದುಗ್ಗುಮನೆ

Updated on: May 17, 2021 | 3:53 PM

Amitabh Bachchan: ಕೊವಿಡ್​ ಸಂಕಷ್ಟದಲ್ಲಿ ಹಲವು ಸೆಲೆಬ್ರಿಟಿಗಳು ಜನರಿಂದ ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ. ಆದರೆ ಅಮಿತಾಭ್​ ಬಚ್ಚನ್​ ಅವರು ಜನರಿಂದ ಹಣ ಸಂಗ್ರಹಿಸುತ್ತಿಲ್ಲ. ಬದಲಿಗೆ ತಾವೇ ತಮ್ಮ ಕೈಲಾದ ಮೊತ್ತವನ್ನು ನೀಡುತ್ತಿದ್ದಾರೆ.

‘ನಾನು ದೇಣಿಗೆ ಕೇಳಲ್ಲ, ಕೊಡ್ತೀನಿ’; ಬೇರೆ ಸ್ಟಾರ್​ಗಳಿಗಿಂತ ಭಿನ್ನ ಹೆಜ್ಜೆ ಇಟ್ಟ ಅಮಿತಾಭ್​
ಅಮಿತಾಭ್ ಬಚ್ಚನ್
Follow us on

ಕೊರೊನಾ ವೈರಸ್​ ಎರಡನೇ ಅಲೆ ವ್ಯಾಪಕವಾಗಿ ಹಬ್ಬಿದೆ. ಈ ಸಂದರ್ಭದಲ್ಲಿ ದೇಶಾದ್ಯಂತ ಕಷ್ಟದ ಪರಿಸ್ಥಿತಿ ನಿರ್ಮಾಣ ಆಗಿದೆ. ಬೆಂಗಳೂರು, ದೆಹಲಿ, ಮುಂಬೈನಂತಹ ಮಹಾನಗರಗಳಲ್ಲಿ ಕೊರೊನಾ​ ಪ್ರಕರಣಗಳ ಸಂಖ್ಯೆ ಮಿತಿ ಮೀರಿದೆ. ಕೊವಿಡ್​ ವಿರುದ್ಧ ಹೋರಾಡಲು ಅನೇಕ ಸೆಲೆಬ್ರಿಟಿಗಳು ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ. ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ನಟ ಅಮಿತಾಭ್​ ಬಚ್ಚನ್​ ಅವರೂ ಸಮಾಜಮುಖಿ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಆದರೆ ಅವರು ಏನೂ ಮಾಡುತ್ತಿಲ್ಲ ಎಂದು ಕೆಲವರು ಟೀಕಿಸಿದ್ದರು. ಅದಕ್ಕೆ ಉತ್ತರ ನೀಡಿರುವ ಅವರು ತಾವು ಮಾಡುತ್ತಿರುವ ಕೆಲಸಗಳ ಪೂರ್ಣ ಪಟ್ಟಿಯನ್ನೇ ಒದಗಿಸುತ್ತಿದ್ದಾರೆ.

ಕೊವಿಡ್​ ಸಂಕಷ್ಟದಲ್ಲಿ ತಾವು ಮಾಡಿರುವ ಎಲ್ಲ ಸಮಾಜಮುಖಿ ಕಾರ್ಯಗಳ ಬಗ್ಗೆ ತಮ್ಮ ಬ್ಲಾಗ್​ನಲ್ಲಿ ಅವರು ಬರೆದುಕೊಳ್ಳುತ್ತಿದ್ದಾರೆ. ಬೇರೆ ಸೆಲೆಬ್ರಿಟಿಗಳೆಲ್ಲರೂ ಜನರಿಂದ ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ. ಇತ್ತೀಚೆಗೆ ವಿರಾಟ್​ ಕೊಯ್ಲಿ, ಅನುಷ್ಕಾ ಶರ್ಮಾ, ಪ್ರಿಯಾಂಕಾ ಚೋಪ್ರಾ, ನಿಕ್​ ಜೋನಸ್​ ಮುಂತಾದವರು ದೇಣಿಗೆ ಸಂಗ್ರಹಕ್ಕೆ ಕರೆ ನೀಡಿದ್ದರು. ಆದರೆ ಅಮಿತಾಭ್​ ಬಚ್ಚನ್​ ಅವರು ಜನರಿಂದ ಹಣ ಸಂಗ್ರಹಿಸುತ್ತಿಲ್ಲ. ಬದಲಿಗೆ ತಾವೇ ತಮ್ಮ ಕೈಲಾದ ಮೊತ್ತವನ್ನು ನೀಡುತ್ತಿದ್ದಾರೆ. ಅದರ ಮೂಲಕ ಕೊವಿಡ್​ ಸೋಂಕಿತರಿಗೆ ಸೂಕ್ತ ನೆರವು ಒದಗಿಸುತ್ತಿದ್ದಾರೆ.

‘ಸಾಧ್ಯವಾದ ಕಡೆಯೆಲ್ಲ ನಾನು ಕೊಟಿದ್ದೇನೆ. ನನಗೆ ಇರುವ ಆದಾಯದ ಮೂಲ ಕಡಿಮೆ. ನಿಮಗೆ ಹಾಗೆ ಕಾಣಿಸದೇ ಇರಬಹುದು. ಆದರೆ ಅದು ನಿಜ. ದೇವರ ದಯೆಯಿಂದ ನನಗೆ ಸಿಗುತ್ತದೆ. ದೇಣಿಗೆ ಮೂಲಕ ಹಣ ಸಂಗ್ರಹ ಮಾಡಿಲ್ಲ. ಇನ್ನೊಬ್ಬರ ಬಳಿ ದೇಣಿಗೆ ಕೇಳುವುದು ನನಗೆ ಮುಜುಗರ ಎನಿಸುತ್ತದೆ. ಈ ಹಿಂದೆ ದೇಣಿಗೆ ಕೇಳುವಂತಹ ಕೆಲವು ಕಾರ್ಯಕ್ರಮಗಳಿಗೆ ನಾನು ಧ್ವನಿ ನೀಡಿರಬಹುದು. ಆದರೆ ನೇರವಾಗಿ ಎಂದಿಗೂ ನಾನು ದೇಣಿಗೆ ಕೇಳಿಲ್ಲ. ಗೊತ್ತಿಲ್ಲದೆ ಆ ರೀತಿ ಏನಾದರೂ ಆಗಿದ್ದರೆ ಕ್ಷಮೆ ಕೇಳುತ್ತೇನೆ’ ಎಂದು ಅಮಿತಾಬ್​ ಬಚ್ಚನ್​ ಬ್ಲಾಗ್​ನಲ್ಲಿ ಬರೆದುಕೊಂಡಿದ್ದಾರೆ.

ಕೊರೊನಾದಿಂದ ಕಂಗೆಟ್ಟಿರುವ ದೆಹಲಿಗೆ ಅಮಿತಾಬ್​ 2 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಒಂದೂವರೆ ಸಾವಿರ ರೈತರ ಸಾಲವನ್ನು ತೀರಿಸಿದ್ದಾರೆ. ಆ ಮೂಲಕ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಿದ್ದಾರೆ. ಹುತಾತ್ಮ ಸೈನಿಕರ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಹಲವು ಆಸ್ಪತ್ರೆಗಳಿಗೆ ವೈದ್ಯಕೀಯ ಉಪಕರಣಗಳನ್ನು ನೀಡಿದ್ದಾರೆ. ಕಳೆದ ವರ್ಷ 4 ಲಕ್ಷ ಜನರಿಗೆ ಒಂದು ತಿಂಗಳ ಕಾಲ ಉಚಿತವಾಗಿ ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆ ಮಾಡಿದ್ದರು.

ಮುಂಬೈನ 5 ಸಾವಿರ ಜನರಿಗೆ ಪ್ರತಿದಿನ ಊಟ ನೀಡಿದ್ದರು. ಕಠಿಣ ಲಾಕ್​ಡೌನ್​ನಿಂದ ತಮ್ಮ ಊರುಗಳಿಗೆ ಬರಿಗಾಲಿನಲ್ಲಿ ನಡೆಯುತ್ತಿದ್ದ ಸಾವಿರಾರು ವಲಸೆ ಕಾರ್ಮಿಕರಿಗೆ ಅಮಿತಾಬ್​ ಚಪ್ಪಲಿಗಳನ್ನು ಕೊಡಿಸಿದ್ದರು. 30 ಬಸ್​ಗಳನ್ನು ಬುಕ್​ ಮಾಡಿ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದರು. ಹೀಗೆ ಬೆಳೆಯುತ್ತ ಸಾಗುತ್ತದೆ ಅಮಿತಾಬ್​ ಮಾಡಿರುವ ದಾನ ಧರ್ಮದ ಪಟ್ಟಿ. ಅಲ್ಲದೆ ಕೊವಿಡ್​ನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಇಬ್ಬರು ಮಕ್ಕಳನ್ನು ಅಮಿತಾಬ್​ ದತ್ತು ಪಡೆದುಕೊಂಡು, ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇನ್ನೂ ಅನೇಕ ಕೆಲಸಗಳನ್ನು ಬಿಗ್​ ಬಿ ಮಾಡುತ್ತಿದ್ದಾರೆ.

ಇದನ್ನೂ ಓದಿ:

ಸ್ವಲ್ಪ ಯಾಮಾರಿದ್ರೂ ಅಮಿತಾಭ್​ ಕಣ್ಣು ಕಳೆದುಕೊಳ್ಳಬೇಕಿತ್ತು! ಇದು ಎಲ್ಲರೂ ಎಚ್ಚರಿಕೆ ವಹಿಸಬೇಕಾದ ವಿಷಯ

ಹರಿದ ಜೀನ್ಸ್​ ಪ್ಯಾಂಟ್​ ವಿಚಾರಕ್ಕೆ ಮುಖ್ಯಮಂತ್ರಿಯನ್ನೇ ಎದುರು ಹಾಕಿಕೊಂಡ ಅಮಿತಾಭ್​ ಮೊಮ್ಮಗಳು ನವ್ಯಾ!