ಪ್ರದೋಷ್ ಮಾಫಿ ಸಾಕ್ಷಿ: ಸೆಪ್ಟೆಂಬರ್ 7ಕ್ಕೆ ಆದೇಶ ನೀಡಲಿರುವ ಹೈಕೋರ್ಟ್

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ಪ್ರದೋಷ್​ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ದರ್ಶನ್ ಅವರು ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆ ನಡೆಸಿರುವ ನ್ಯಾಯಾಲಯವು ಆದೇಶ ಕಾಯ್ದಿರಿಸಿದೆ. ಸೆಪ್ಟೆಂಬರ್ 7ಕ್ಕೆ ಆದೇಶ ಪ್ರಕಟಿಸುವುದಾಗಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ತಿಳಿಸಿದೆ.

ಪ್ರದೋಷ್ ಮಾಫಿ ಸಾಕ್ಷಿ: ಸೆಪ್ಟೆಂಬರ್ 7ಕ್ಕೆ ಆದೇಶ ನೀಡಲಿರುವ ಹೈಕೋರ್ಟ್
Darshan, Renukaswamy
Image Credit source: Tv9 Kannada
Edited By:

Updated on: Sep 02, 2026 | 8:58 PM

ನಟ ದರ್ಶನ್ ಕೇಸ್​ಗೆ ಸಂಬಂಧಿಸಿದಂತೆ ಹೈಕೋರ್ಟ್​ನಿಂದ ಇಂದು (ಸೆಪ್ಟೆಂಬರ್ 2) ಮಹತ್ವದ ಆದೇಶ ಪ್ರಕಟವಾಗುವ ನಿರೀಕ್ಷೆ ಇತ್ತು. ಆದರೆ ವಿಚಾರಣೆ ನಡೆಸಿರುವ ನ್ಯಾಯಾಲಯವು ಸೆಪ್ಟೆಂಬರ್ 7ಕ್ಕೆ ಆದೇಶ ಪ್ರಕಟಿಸುವುದಾಗಿ ತಿಳಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಷ್ ರಾವ್ ಮಾಫಿ ಸಾಕ್ಷಿಯಾಗಲು ವಿಚಾರಣಾ ನ್ಯಾಯಾಲಯ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ದರ್ಶನ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ದರ್ಶನ್ ಅಭಿಮಾನಿಯಾಗಿದ್ದ ಚಿತ್ರದುರ್ಗದ ರೇಣುಕಾಸ್ವಾಮಿಯ ಕೊಲೆ ಪ್ರಕರಣದ ವಿಚಾರಣೆ ಚುರುಕಿನಿಂದ ನಡೆಯುತ್ತಿದೆ. ದರ್ಶನ್ ಜೊತೆ ಆಪ್ತನಾಗಿದ್ದ ಪ್ರದೋಷ್ ಅವರು ಈ ಪ್ರಕರಣದಲ್ಲಿ ಅಪ್ರೂವರ್ ಆಗಲು ಮುಂದೆ ಬಂದಿದ್ದಾರೆ. ಅದಕ್ಕೆ ವಿಚಾರಣಾ ನ್ಯಾಯಾಲಯ ಅವಕಾಶ ನೀಡಿದೆ. ಆದರೆ ಈ ಪ್ರಕ್ರಿಯೆ ಸೂಕ್ತವಾಗಿಲ್ಲ ಎಂದು ದರ್ಶನ್ ಪರ ವಕೀಲರು ಹೈಕೋರ್ಟ್​​ನಲ್ಲಿ ವಾದ ಮಂಡಿಸಿದ್ದಾರೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠದಲ್ಲಿ ದರ್ಶನ್ ಅವರ ಅರ್ಜಿಯ ವಿಚಾರಣೆ ಮಾಡಲಾಗಿದೆ. ಇಂದು (ಸೆಪ್ಟೆಂಬರ್ 2) ಆದೇಶ ಪ್ರಕಟ ಆಗುವ ಸಾಧ್ಯತೆ ಇತ್ತು. ಆದರೆ ಈಗಾಗಲೇ ರಾತ್ರಿ 8 ಗಂಟೆಯಾಗಿದೆ. ಆದೇಶ ಡಿಕ್ಟೇಷನ್ ಸಾಧ್ಯವೇ ಎಂದು ಹೈಕೋರ್ಟ್ ಪೀಠ ಪ್ರಶ್ನೆ ಮಾಡಿದೆ. ಬೇರೊಂದು ದಿನ ಆದೇಶ ನೀಡುವಂತೆ ದರ್ಶನ್ ಪರ ವಕೀಲರ ಮನವಿ ಮಾಡಿದ್ದಾರೆ.

ಇಂದು 550 ಪ್ರಕರಣಗಳ ವಿಚಾರಣೆ ಆಗಿರುವುದೇ ಚರಿತ್ರೆ ಸೃಷ್ಟಿಯಾದಂತಾಗಿದೆ ಎಂದು ಪ್ರಾಸಿಕ್ಯೂಷನ್ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ಪ್ರತಿಕ್ರಿಯೆ ನೀಡಿದರು. ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಸೆಪ್ಟೆಂಬರ್ 7ಕ್ಕೆ ಆದೇಶ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಇತ್ತ, ವಿಚಾರಣಾ ನ್ಯಾಯಾಲಯವು ಪ್ರದೋಷ್ ರಾವ್ ಸಾಕ್ಷ್ಯ ಮುಂದೂಡಿದೆ.

ಇದನ್ನೂ ಓದಿ: ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ ತೂಗುದೀಪ, ಧನ್ವೀರ್ ಗೌಡ, ವಿಜಯಲಕ್ಷ್ಮಿ

ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳಿಸಿದ್ದ ಎಂಬ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿಕೊಂಡು ಬೆಂಗಳೂರಿಗೆ ಕರೆತರಲಾಗಿತ್ತು. ನಂತರ ಪಟ್ಟಣಗೆರೆ ಶೆಡ್​ನಲ್ಲಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಯಿತು. ಈ ಘಟನೆಗಳ ಪ್ರತಿ ಹಂತದ ಬಗ್ಗೆಯೂ ಪ್ರದೋಷ್​​ಗೆ ಚೆನ್ನಾಗಿ ತಿಳಿದಿರುವ ಸಾಧ್ಯತೆ ಇದೆ. ಹಾಗಾಗಿ ಅವರು ಮಾಫಿ ಸಾಕ್ಷಿಯಾಗಲು ಒಪ್ಪಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us