‘ದೇವರ’ ನಕಲಿ ಕಲೆಕ್ಷನ್, ವಿತರಕ ನಾಗ ವಂಶಿ ಸ್ಪಷ್ಟಣೆಯಿಂದ ಇನ್ನಷ್ಟು ಅನುಮಾನ
Devara: ಜೂ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ಬಿಡುಗಡೆ ಆಗಿ ಮೂರು ವಾರ ಆಗುತ್ತಾ ಬಂದಿದೆ. ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿ ಬಂದಿಲ್ಲ. ಆದರೆ ಸಿನಿಮಾ ಕಲೆಕ್ಷನ್ ಮಾತ್ರ ಜೋರಾಗಿದೆ. ಆದರೆ ಇದು ನಕಲಿ ಕಲೆಕ್ಷನ್ ಎನ್ನಲಾಗುತ್ತಿದೆ.
ಜೂ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಭಾರಿ ಬಜೆಟ್ನ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಸಿನಿಮಾಕ್ಕೆ ಸುಮಾರು 300 ಕೋಟಿಗೂ ಹೆಚ್ಚು ಬಜೆಟ್ ಹಾಕಲಾಗಿದೆ. ಸಿನಿಮಾ ಬಿಡುಗಡೆ ಆದ ಬಳಿಕ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆದರೆ ಕಲೆಕ್ಷನ್ ಮಾತ್ರ ಭರ್ಜರಿಯಾಗಿ ಆಗಿದೆ ಎಂದೇ ಚಿತ್ರತಂಡ ತೋರಿಸಿದೆ. ವಿಶೇಷವಾಗಿ ಸಿನಿಮಾದ ನಿರ್ಮಾಣ ಹಾಗೂ ವಿತರಣೆಯಲ್ಲಿ ತೊಡಗಿಕೊಂಡಿದ್ದ ನಾಗ ವಂಶಿ ಭಾರಿ ಕಲೆಕ್ಷನ್ ರಿಪೋರ್ಟ್ ಅನ್ನು ಮಾಧ್ಯಮಗಳೊಟ್ಟಿಗೆ ಹಂಚಿಕೊಂಡಿದ್ದರು. ಆದರೆ ಇದೆಲ್ಲ ನಕಲಿ ಕಲೆಕ್ಷನ್ ಎನ್ನಲಾಗಿತ್ತು. ಈ ಬಗ್ಗೆ ನಾಗ ವಂಶಿ ಸ್ಪಷ್ಟನೆ ನೀಡಲು ಮುಂದಾಗಿದ್ದಾರಾದರೂ ಅದರಿಂದ ಇನ್ನಷ್ಟು ಅನುಮಾನ ಹೆಚ್ಚಾಗಿದೆ.
‘ದೇವರ’ ಸಿನಿಮಾ 16 ದಿನಕ್ಕೆ 500 ಕೋಟಿಗೂ ಹೆಚ್ಚು ಹಣ ಕಲೆಕ್ಷನ್ ಮಾಡಿದೆ ಎಂದು ವರದಿ ನೀಡಲಾಗಿದೆ. ಆದರೆ ಇದು ನಕಲಿ ಬಾಕ್ಸ್ ಆಫೀಸ್ ವರದಿ ಎನ್ನಲಾಗುತ್ತಿದೆ. ಸಿನಿಮಾ ಬಿಡುಗಡೆ ಆದ ಮೂರು ದಿನದ ಬಳಿಕ ಕಲೆಕ್ಷನ್ ಇಳಿದು ಹೋಗಿದೆ. ಸಿನಿಮಾ ಚೆನ್ನಾಗಿಲ್ಲವೆಂಬ ವರದಿ ಹರಿದಾಡಿದೆ ಆದರೆ ಚಿತ್ರತಂಡ ಈಗಲೂ ಸಹ 500 ಕೋಟಿ ಕಲೆಕ್ಷನ್ ವರದಿ ನೀಡುತ್ತಿದೆ ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಬೇರೊಂದು ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಹಾಜರಾಗಿದ್ದ ನಾಗ ವಂಶಿಗೆ ಈ ಬಗ್ಗೆ ಪ್ರಶ್ನೆ ಕೇಳಲಾಯ್ತು. ಆರಂಭದಲ್ಲಿ ನಾವು ನಿಜವಾದ ಸಂಖ್ಯೆಗಳನ್ನೇ ಕೊಟ್ಟಿದ್ದೇವೆ ಎಂದರು. ಹೆಚ್ಚಿನ ಪ್ರಶ್ನೆ ಮಾಡಿದಾಗ ನನಗೆ ತೆಲುಗು ರಾಜ್ಯಗಳ ಕಲೆಕ್ಷನ್ ಅಷ್ಟೆ ಗೊತ್ತು ಎಂದರು. ಅದಾದ ಬಳಿಕ ವಿದೇಶ ಹಾಗೂ ಉತ್ತರ ಭಾರತದ ಕಲೆಕ್ಷನ್ ಅನ್ನು ನೀವು ಅವರ ಬಳಿಯೇ ಕೇಳಬೇಕೆಂದರು. ಪ್ರಶ್ನೆಗಳು ಹೆಚ್ಚು ತೀಕ್ಷ್ಣವಾದಂತೆ ಮಾಧ್ಯಮದವರ ಮೇಲೆ ಸಿಟ್ಟಾದ ನಾಗ ವಂಶಿ, ಕೈಮುಗಿದು ಬಿಟ್ಟರು.
ಇದನ್ನೂ ಓದಿ:‘ದೇವರ’ ಚಿತ್ರದ ಸೀಕ್ವೆಲ್ನಲ್ಲಿ ನಟಿಸಲಿದ್ದಾರೆ ಬಾಲಿವುಡ್ನ ಈ ಸ್ಟಾರ್ ಹೀರೋ
ಬೇರೊಂದು ಸಂದರ್ಶನದಲ್ಲಿ, ಸಂಕದರ್ಶಕ, ನೀವೇಕೆ ಇತರೆ ಭಾಗದ ವಿತರಕರಿಗೆ ಮಾಧ್ಯಮಗಳ ಬಳಿ ಕಲೆಕ್ಷನ್ ವಿವರ ಹೇಳಬೇಡಿ ಎಂದು ಹೇಳಿದ್ದೀರಿ ಎಂದು ನೇರವಾಗಿ ಪ್ರಶ್ನೆ ಮಾಡಿದರು. ಅದಕ್ಕೆ ನಾಗ ವಂಶಿ ಇಲ್ಲ ಹಾಗೇನೂ ನಾನು ಹೇಳಿಲ್ಲ ಎಂದರು. ಇಲ್ಲ ನಾನು ಕೆಲವು ವಿತರಕರ ಬಳಿ ಕಲೆಕ್ಷನ್ ವರದಿ ಕೇಳಿದೆ, ಅದಕ್ಕೆ ಅವರು ಇಲ್ಲ ನಾಗ ವಂಶಿ ಕಲೆಕ್ಷನ್ ವಿವರ ಕೊಡಬಾರದೆಂದು ಹೇಳಿದ್ದಾರೆ ಎಂದಿದ್ದಾರೆ ಎಂದರು. ಒಟ್ಟಾರೆಯಾಗಿ ಸಿನಿಮಾದ ಕಲೆಕ್ಷನ್ ವಿವರದಲ್ಲಿ ಸತ್ಯವಿಲ್ಲ ಎಂಬುದಂತೂ ಖಾತ್ರಿಯಾಗಿದೆ.
‘ದೇವರ’ ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದು ಸಿನಿಮಾದಲ್ಲಿ ಜಾನ್ಹವಿ ಕಪೂರ್ ನಾಯಕಿ, ಸೈಫ್ ಅಲಿ ಖಾನ್ ಖಳನಾಯಕ. ಸಿನಿಮಾಕ್ಕೆ ಕಲ್ಯಾಣ್ ರಾಮ್, ನಾಗ ವಂಶಿ ಬಂಡವಾಳ ಹೂಡಿದ್ದಾರೆ. ಸಿನಿಮಾದ ಮೊದಲ ಭಾಗ ಮಾತ್ರವೇ ಈಗ ಬಿಡುಗಡೆ ಆಗಿದೆ. ಎರಡನೇ ಭಾಗದ ಚಿತ್ರೀಕರಣ ಇನ್ನಷ್ಟೆ ಆಗಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:15 am, Tue, 15 October 24