Taraka Ratna: ತಾರಕ ರತ್ನ ಮರಣದ ಬಗ್ಗೆ ಭವಿಷ್ಯ ನುಡಿದಿದ್ದ ಜ್ಯೋತಿಷಿ: ಹಳೆ ವಿಡಿಯೋ ವೈರಲ್
ನಟ, ರಾಜಕಾರಣಿ ನಂದಮೂರಿ ತಾರಕ ರತ್ನ ನಿಧನ ಹೊಂದುತ್ತಾರೆಂದು ಮೊದಲೇ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದರು ಎನ್ನಲಾಗುತ್ತಿದ್ದು. ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ಒಂದು ವೈರಲ್ ಆಗಿದೆ.
ತೆಲುಗು ಚಿತ್ರರಂಗದ ನಟ, ರಾಜಕಾರಣಿ ನಂದಮೂರಿ ತಾರಕ ರತ್ನ (Nandamuri Taraka Ratna) ಕೆಲವು ದಿನಗಳ ಹಿಂದಷ್ಟೆ ಬೆಂಗಳೂರಿನ (Bangalore) ಖಾಸಗಿ ಆಸ್ಪತ್ರೆಯೊಂದರಲ್ಲಿ (Hospital) ಮೃತಪಟ್ಟರು. ಅವರಿಗೆ ಕೇವಲ 39 ವರ್ಷ ವಯಸ್ಸಾಗಿತ್ತು. ನಂದಮೂರಿ ಕುಟುಂಬದಲ್ಲಿ ಉಂಟಾದ ಈ ವಿಷಾಧ ತೆಲುಗು ಚಿತ್ರರಂಗ ಹಾಗೂ ರಾಜಕೀಯ ರಂಗಕ್ಕೆ ಆಘಾತ ತಂದಿತ್ತು. ಆರೋಗ್ಯವಾಗಿಯೇ ಇದ್ದ ತಾರಕ ರತ್ನ ತಮ್ಮದೇ ಪಕ್ಷದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾಗ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು. ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದರು.
ಆದರೆ ಅವರ ಸಾವನ್ನು ಜ್ಯೋತಿಷಿಯೊಬ್ಬರು ಮೊದಲೇ ಊಹಿಸಿದ್ದರು ಎನ್ನಲಾಗುತ್ತಿದ್ದು, ಸಾಕ್ಷಿಯಾಗಿ ವಿಡಿಯೋ ಒಂದು ವೈರಲ್ ಆಗಿದೆ.
ತೆಲುಗು ಚಿತ್ರರಂಗ ಹಾಗೂ ರಾಜಕೀಯ ರಂಗದಲ್ಲಿ ಬೇಡಿಕೆಯ ಜ್ಯೋತಿಷಿಗಳಲ್ಲಿ ಒಬ್ಬರಾಗಿರುವ ವೇಣು ಸ್ವಾಮಿ ಒಂದು ತಿಂಗಳ ಹಿಂದೆಯೇ ತೆಲುಗು ಚಿತ್ರರಂಗದ ಇಬ್ಬರು ನಟರು ಒಬ್ಬ ನಟಿ ನಿಧನ ಹೊಂದುತ್ತಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.
ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ್ದ ವೇಣು ಸ್ವಾಮಿ, 45 ವರ್ಷ ವಯಸ್ಸಿನ ಒಳಗಿನ ನಾಯಕ ನಟ, ನಾಯಕ ನಟಿ ನಿಧನ ಹೊಂದಲಿದ್ದಾರೆ ಎಂದಿದ್ದರು. ಮೇಷ ರಾಶಿಗೆ ಸಂಬಂಧಿಸಿದ ನಟಿ, ವೃಷ್ಚಿಕ ಅಥವಾ ಮಿಥುನ ರಾಶಿಗೆ ಸಂಬಂಧಿಸಿದ ನಟ ನಿಧನ ಹೊಂದಲಿದ್ದಾರೆ ಎಂದೂ ಸಹ ಅವರು ಖಚಿತವಾಗಿ ತಿಳಿಸಿದ್ದರು.
ಇದೀಗ ತಾರಕ ರತ್ನ ತಮ್ಮ 39ನೇ ವಯಸ್ಸಿಗೇ ನಿಧನ ಹೊಂದಿರುವ ಕಾರಣ ಹಲವರು ವೇಣು ಸ್ವಾಮಿ ಭವಿಷ್ಯ ನಿಜವಾಗಿದೆ ಎನ್ನುತ್ತಿದ್ದಾರೆ. ಜೊತೆಗೆ ವೇಣು ಸ್ವಾಮಿ ಹೇಳಿರುವ ಆ ನಟಿ ಯಾರು ಎಂಬ ಬಗ್ಗೆಯೂ ಚರ್ಚೆ ಆರಂಭವಾಗಿದೆ.
ಕೆಲವರು ವೇಣು ಸ್ವಾಮಿಯ ಭವಿಷ್ಯದ ಬಗ್ಗೆ ವಿರೋಧವನ್ನೂ ವ್ಯಕ್ತಪಡಿಸಿದ್ದು, ವೇಣು ಸ್ವಾಮಿಯನ್ನು ಪ್ರಚಾರ ಪ್ರಿಯನೆಂದು, ಕೆಟ್ಟದ್ದನ್ನು ಮಾತ್ರವೇ ಹೇಳಿ ಬೆದರಿಸುತ್ತಾನೆಂದೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವೇಣು ಸ್ವಾಮಿ ತೆಲುಗು ಚಿತ್ರರಂಗದ ಕೆಲವು ಜನಪ್ರಿಯ ಸಿನಿಮಾ ಮಂದಿಯ ಬಗ್ಗೆ ಈ ಹಿಂದೆಯೂ ಭವಿಷ್ಯ ಹೇಳಿದ್ದಾರೆ. ನಾಗ ಚೈತನ್ಯ-ಸಮಂತಾ ವಿವಾಹವಾದಾಗ ಇವರಿಬ್ಬರೂ ಬೇರೆಯಾಗುತ್ತಾರೆ ಎಂದಿದ್ದರು. ಅಂತೆಯೇ ಆಯಿತು.
ನಟಿ ರಶ್ಮಿಕಾ ಮಂದಣ್ಣ ಸಹ ಚಿತ್ರರಂಗಕ್ಕೆ ಬಂದ ಹೊಸದರಲ್ಲಿ ವೇಣು ಸ್ವಾಮಿ ಬಳಿ ವಿಶೇಷ ಪೂಜೆಗಳನ್ನು ಮಾಡಿಸಿದ್ದರು. ರಶ್ಮಿಕಾ ಬಗ್ಗೆ ಹಲವು ಸಂದರ್ಶನಗಳಲ್ಲಿ ಮಾತನಾಡಿರುವ ವೇಣು ಸ್ವಾಮಿ, ವಿಜಯ್ ದೇವರಕೊಂಡ ಜೊತೆಗಿದ್ದರೆ ರಶ್ಮಿಕಾ ತಮ್ಮ ಯಶಸ್ಸು ಕಳೆದುಕೊಳ್ಳುತ್ತಾರೆ ಎಂದೂ ಸಹ ಭವಿಷ್ಯ ನುಡಿದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:23 pm, Thu, 23 February 23