ಐಪಿಎಸ್ ಅಧಿಕಾರಿಯನ್ನು ಎದುರು ಹಾಕಿಕೊಂಡ ನಟಿ ಡಿಂಪಲ್​ಗೆ ಬೆದರಿಕೆ ಕರೆಗಳು

Dimple Hayath: ಡಿಸಿಪಿ ರಾಹುಲ್ ಹೆಗ್ಡೆ ಹಾಗೂ ನಟಿ ಡಿಂಪಲ್ ಹೆಗ್ಡೆ ನಡುವಿನ ಕಾರು ಪಾರ್ಕಿಂಗ್ ವಿಚಾರಕ್ಕೆ ನಡೆದಿರುವ ಜಗಳ ತಾರಕಕ್ಕೇರಿದೆ. ನಟಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ನಟಿಯ ಪರ ವಕೀಲರು ಹೇಳಿದ್ದಾರೆ.

ಐಪಿಎಸ್ ಅಧಿಕಾರಿಯನ್ನು ಎದುರು ಹಾಕಿಕೊಂಡ ನಟಿ ಡಿಂಪಲ್​ಗೆ ಬೆದರಿಕೆ ಕರೆಗಳು
ಡಿಂಪಲ್ ಹಯಾತಿ
Follow us
ಮಂಜುನಾಥ ಸಿ.
|

Updated on: May 25, 2023 | 9:21 PM

ತೆಲುಗಿನ ನಟಿ ಡಿಂಪಲ್ ಹಯಾತಿ (Dimple Hayathi) ಹಾಗೂ ಹೈದರಾಬಾದ್ ಸಂಚಾರಿ ಪೊಲೀಸ್ ಉಪಆಯುಕ್ತ ರಾಹುಲ್ ಹೆಗ್ಡೆ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದ್ದು ಆ ಜಗಳ ಈಗ ನ್ಯಾಯಾಲಯ ಮೆಟ್ಟಿಲೇರಿದೆ. ಡಿಂಪಲ್ ತಮ್ಮ ಕಾರನ್ನು ಉದ್ದೇಶಪೂರ್ವಕವಾಗಿ ಗುದ್ದಿದ್ದಾರೆಂದು ಡಿಸಿಪಿ ರಾಹುಲ್ ಹೆಗ್ಡೆ ಆರೋಪಿಸಿದ್ದು, ಡಿಸಿಪಿಯ ಕಾರು ಚಾಲಕನ ಮೂಲಕ ಕಂಪ್ಲೆಂಟ್ ಕೊಡಿಸಿ ಎಫ್​ಐಆರ್ ಸಹ ದಾಖಲಿಸಿದ್ದಾರೆ. ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದ ನಟಿ ಡಿಂಪಲ್, ಐಪಿಎಸ್ ಅಧಿಕಾರಿ ವಿರುದ್ಧ ಪ್ರತಿದೂರು ನೀಡಿರುವ ಜೊತೆಗೆ ಸಾಮಾಜಿಕ ಜಾಲತಾಣದ ಮೂಲಕ ಐಪಿಎಸ್ ಅಧಿಕಾರಿ ವಿರುದ್ಧ ಅಧಿಕಾರ ದುರ್ಬಳಕೆಯ ಆರೋಪ ಮಾಡಿದ್ದಾರೆ. ಇದೀಗ ನಟಿಯ ಪರ ವಕೀಲ ಮಾಧ್ಯಮಗಳೊಟ್ಟಿಗೆ ಮಾತನಾಡಿ, ನಟಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದಿದ್ದಾರೆ.

‘ನಟಿಯ ವಿರುದ್ಧ ಪೊಲೀಸರು ಹಾಕಿರುವ ಎಫ್​ಐಆರ್ ದೊರಕಿದೆ. ಡಿಸಿಪಿಯ ಕಾರಿನ ಕವರ್ ತೆಗೆದಿದ್ದಾರೆ ನಟಿ ಡಿಂಪಲ್ ಹಾಗೂ ವಿಕ್ಟರ್ ಎಂದು ಎಫ್​ಐಆರ್ ಅಲ್ಲಿ ನಮೂದಾಗಿದೆ. ಇದು ಸಂಪೂರ್ಣ ಸುಳ್ಳು. ಹಾಗೊಮ್ಮೆ ಆಗಿದ್ದರೆ ಅದರ ವಿಡಿಯೋ ಹೊರಗೆ ಬಿಡಲಿ” ಎಂದು ಸವಾಲು ಹಾಕಿರುವ ಡಿಂಪಲ್ ಪರ ವಕೀಲ, ”ಸರ್ಕಾರಿ ಕಾರಿಗೆ ಯಾರಾದರೂ ಕವರ್ ಕೊಡುತ್ತಾರೆಯೇ? ಅಲ್ಲದೆ ಆ ಡಿಸಿಪಿಗೆ ಮೂರು ಕಾರುಗಳಿವೆ. ಮೂರೂ ಕಾರನ್ನು ಏಕೆ ಖಾಸಗಿ ಸ್ಥಳವಾದ ಅಪಾರ್ಟ್​ಮೆಂಟ್​ನಲ್ಲಿ ನಿಲ್ಲಿಸಿಕೊಂಡಿದ್ದಾರೆ. ಸರ್ಕಾರಿ ವಾಹನಗಳನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ನಿಯಮವೇ ಇದೆ. ಆ ನಿಯಮದಂತೆ ಏಕೆ ನಡೆದುಕೊಂಡಿಲ್ಲ” ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:ಪೊಲೀಸ್ ಉನ್ನತಾಧಿಕಾರಿ ವಿರುದ್ಧ ಯುದ್ಧಕ್ಕೆ ನಿಂತ ನಟಿ ಡಿಂಪಲ್: ನಡೆದಿದ್ದೇನು? ತಪ್ಪು ಯಾರದ್ದು?

”ಅಪಾರ್ಟ್​ಮೆಂಟ್​ನಲ್ಲಿ ಡಿಸಿಪಿಯ ಕಾರು ನಿಲ್ಲಿಸುವ ಜಾಗದಲ್ಲಿ ಸಾರ್ವಜನಿಕರ ಬಳಕೆಗೆ ಇರುವ ಸಂಚಾರಿ ಇಲಾಖೆಯ ಬ್ಲಾಕ್​ಗಳನ್ನು ತೆಗೆದುಕೊಂಡು ಇಡಲಾಗಿದೆ. ಆ ಕಾರ್ಯಕ್ಕೆ ಒಬ್ಬ ಸಂಚಾರಿ ಇನ್​ಸ್ಪೆಕ್ಟರ್ ಹಾಗೂ ಕಾನ್​ಸ್ಟೆಬಲ್ ಅನ್ನು ಡಿಸಿಪಿ ಬಳಸಿಕೊಂಡಿದ್ದಾರೆ. ಇದೆಲ್ಲವೂ ಅಧಿಕಾರದ ದುರ್ಬಳಕೆ ಅಲ್ಲವೆ. ಅಲ್ಲದೆ, ನಟಿಯ ವಿರುದ್ಧ ತಾನು ಸ್ವತಃ ಹೋರಾಡದೆ ತನ್ನ ಡ್ರೈವರ್ ಅನ್ನು ಬಳಸಿಕೊಂಡಿದ್ದಾರೆ. ಡಿಸಿಪಿ ಆಜ್ಞೆಯಂತೆ ಸುಳ್ಳು ದೂರು ನೀಡಿದ ಬಳಿಕ ಆ ಡ್ರೈವರ್ ನಾಪತ್ತೆಯಾಗಿದ್ದಾನೆ” ಎಂದಿದ್ದಾರೆ ಡಿಂಪಲ್ ಪರ ವಕೀಲ.

”ಡಿಸಿಪಿಯ ವರ್ತನೆಯಿಂದ ನನ್ನ ಕಕ್ಷಿದಾರರಾಗಿರುವ ನಟಿ ಡಿಂಪಲ್ ಹಯಾತಿ ಖಿನ್ನತೆಗೆ ಒಳಗಾಗಿದ್ದಾರೆ. ಅಸುರಕ್ಷತೆಯ ಅನುಭವಕ್ಕೆ ಒಳಗಾಗಿದ್ದಾರೆ. ನಿನ್ನೆ ಸಹ ಅವರ ಮನೆಗೆ ಯಾರೋ ಅಗಂತುಕರು ನುಗ್ಗಿದ್ದರು. ಕೊನೆಗೆ 100 ಗೆ ಫೋನ್ ಮಾಡಿ ಪೊಲೀಸರನ್ನು ಕರೆಸಿಕೊಂಡು ಅವರನ್ನು ಹೊರಗೆ ಕಳುಹಿಸಬೇಕಾಯಿತು. ಗೊತ್ತಿರದ ಸಂಖ್ಯೆಗಳಿಂದ ಕರೆಗಳು, ಸಂದೇಶಗಳು ಬರುತ್ತಿವೆ. ಆಕೆಗೆ ಬೆದರಿಕೆ ಇದೆ, ಆಕೆ ಸುರಕ್ಷಿತ ಭಾವದಲ್ಲಿ ಇಲ್ಲ” ಎಂದು ವಕೀಲರು ಹೇಳಿದ್ದಾರೆ.

ನಡೆದಿರುವುದೇನು?

ನಟಿ ಹಯಾತಿ, ಇತ್ತೀಚೆಗೆ ತಮ್ಮ ಕಾರಿನ ಎದುರು ಗಡೆ ನಿಲ್ಲಿಸಲಾಗಿದ್ದ ಡಿಸಿಪಿಯ ಕಾರಿನ ಸುತ್ತ ಇದ್ದ ಕೋನ್​ಗಳನ್ನು ಒದ್ದು ಬೀಳಿಸಿ ತಮ್ಮ ಕಾರಿನಿಂದ ಬೇಕೆಂದೇ ಡಿಸಿಪಿಯ ಖಾಸಗಿ ಕಾರಿಗೆ ಢಿಕ್ಕಿ ಹೊಡೆದಿದ್ದಾರೆ ಮಾತ್ರವಲ್ಲದೆ ಡಿಸಿಪಿಯ ಕಾರು ಚಾಲಕ, ಕಾನ್​ಸ್ಟೇಬಲ್ ಚೇತನ್ ಬಳಿ ವಾಗ್ವಾದ ನಡೆಸಿ ಅವನಿಗೆ ಮನಸೋಇಚ್ಛೆ ಬೈದಿದ್ದಾರೆ. ಬಳಿಕ, ಡಿಸಿಪಿಯ ಸಲಹೆ ಪಡೆದು ಕಾನ್​ಸ್ಟೇಬಲ್ ಚೇತನ್ ಜ್ಯೂಬ್ಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ನಟಿಯ ವಿರುದ್ಧ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಜ್ಯೂಬ್ಲಿ ಹಿಲ್ಸ್ ಪೊಲೀಸ್ ಠಾಣಾ ಸಿಬ್ಬಂದಿ ನಟಿ ಡಿಂಪಲ್ ಹಾಗೂ ಅವರ ಗೆಳೆಯ ವಿಕ್ಟರ್ ಅನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಘಟನೆ ಬಳಿಕ ಟ್ವಿಟ್ಟರ್​ನಲ್ಲಿ ಪೋಸ್ಟ್ ಹಾಕಿರುವ ಡಿಂಪಲ್, ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡರೆ ಮಾಡಿರುವ ತಪ್ಪು ಮುಚ್ಚಿಡಲಾಗುವುದಿಲ್ಲ, ಸತ್ಯಮೇವ ಜಯತೆ ಎಂದು ಬರೆದುಕೊಂಡಿದ್ದಾರೆ. ನಟಿಯ ವಿರುದ್ಧ ದೂರಿನ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಡಿಸಿಪಿ ರಾಹುಲ್ ಹೆಗ್ಡೆ, ”ಕಾನ್​ಸ್ಟೆಬಲ್ ದೂರಿನ ಅನ್ವಯ ನಟಿಯನ್ನು ಕರೆಸಿ ವಿಚಾರಣೆ ಮಾಡಲಾಗಿದೆ. ಕಾನೂನು ಏನಿದೆಯೋ ಆ ಪ್ರಕ್ರಿಯೆಗಳು ನಡೆಯಲಿವೆ” ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ