”ರಾಜಮೌಳಿಯಿಂದ ಡಾಲರ್ ಮೌಲ್ಯ ಕುಸಿದು, ರೂಪಾಯಿ ಮೌಲ್ಯ ಹೆಚ್ಚಾಗುತ್ತದೆ”
SS Rajamouli: ನಿರ್ದೇಶಕ ರಾಜಮೌಳಿಯಿಂದಾಗಿ ಭಾರತದ ರೂಪಾಯಿ ಮೌಲ್ಯ ಬಲಗೊಂಡು, ಡಾಲರ್ ಮೌಲ್ಯ ಕುಸಿಯುತ್ತದೆ ಎಂದು ನಿರ್ದೇಶಕ ತೇಜ ಹೇಳಿದ್ದಾರೆ. ತಮ್ಮ ಹೇಳಿಕೆಗೆ ವಿವರಣೆಯನ್ನೂ ನೀಡಿದ್ದಾರೆ.
ರಾಜಮೌಳಿ (SS Rajamouli), ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕರಲ್ಲಿ ಒಬ್ಬರು. ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದಾರೆ ಜೊತೆಗೆ ಭಾರತೀಯ ಚಿತ್ರರಂಗವನ್ನು (Indian Cinema) ವಿಶ್ವ ಸಿನಿಮಾ ಪ್ರೇಮಿಗಳು ತಿರುಗಿ ನೋಡುವಂತೆ ಮಾಡಿದ್ದಾರೆ. ಆರ್ಆರ್ಆರ್ ಸಿನಿಮಾಕ್ಕೆ ವಿದೇಶಗಳಲ್ಲಿ ಸಿಕ್ಕ ಅಭೂತಪೂರ್ವ ಯಶಸ್ಸು ಹಾಗೂ ಆಸ್ಕರ್ ಲಭಿಸಿದ ಬಳಿಕವಂತೂ ರಾಜಮೌಳಿಯ ಗರಿಮೆಯನ್ನು ಕೊಂಡಾಡದವರಿಲ್ಲ. ‘ರಾಜಮೌಳಿ ಭಾರತೀಯ ಚಿತ್ರರಂಗದ ದಿಕ್ಕು ಬದಲಾಯಿಸಿದ್ದಾರೆ’ ಎಂಬಿತ್ಯಾದಿ ಹೊಗಳಿಕೆಗಳ ಸುರಿಮಳೆಯೇ ಆಗಿವೆ, ಈಗಲೂ ಆಗುತ್ತಿವೆ. ಆದರೆ ಈ ನಡುವೆ ತೆಲುಗಿನ ಮತ್ತೊಬ್ಬ ಜನಪ್ರಿಯ, ಪ್ರತಿಭಾವಂತ ನಿರ್ದೇಶಕ ತೇಜ, ರಾಜಮೌಳಿ ಬಗ್ಗೆ ಮಾತನಾಡುತ್ತಾ, ”ರಾಜಮೌಳಿಯಿಂದ ಡಾಲರ್ ಮೌಲ್ಯ ಕುಸಿಯುತ್ತದೆ ರೂಪಾಯಿ ಮೌಲ್ಯ ಹೆಚ್ಚಾಗುತ್ತದೆ” ಎಂದಿದ್ದಾರೆ ತಮ್ಮ ಈ ಹೇಳಿಕೆ ಬಗ್ಗೆ ವಿವರಣೆಯನ್ನೂ ನೀಡಿದ್ದಾರೆ.
ನಿರ್ದೇಶಕ ತೇಜ, ಯಾರನ್ನು ಸುಲಭಕ್ಕೆ ಹೊಗಳುವವರಲ್ಲ. ಹಿಂದೆ ಕೆಲವು ಸಂದರ್ಭಗಳಲ್ಲಿ ರಾಜಮೌಳಿಯನ್ನು ಟೀಕಿಸಿದ್ದೂ ಇದೆ. ಆದರೆ ಭಾರತೀಯ ಸಿನಿಮಾಕ್ಕೆ ಅಂತರಾಷ್ಟ್ರೀಯ ಸ್ಥಾಯಿ ದೊರಕಿಸಿಕೊಟ್ಟ ವಿಷಯದಲ್ಲಿ ರಾಜಮೌಳಿಯನ್ನು ಗ್ರೇಟ್ ಎಂದಿರುವ ತೇಜ, ”ರಾಜಮೌಳಿ, ಕಿಂಗ್ ಆಫ್ ಇಂಡಿಯನ್ ಸಿನಿಮಾ” ಎಂದಿದ್ದಾರೆ. ”ರಾಜಮೌಳಿ ಇನ್ನೊಂದೆರಡು ಸಿನಿಮಾಗಳನ್ನು ಮಾಡಿಬಿಟ್ಟರೆ ಡಾಲರ್ ಮೌಲ್ಯ ಕುಸಿದು ರೂಪಾಯಿ ಮೌಲ್ಯ ಹೆಚ್ಚಾಗುತ್ತದೆ” ಎಂದಿದ್ದಾರೆ. ಅದು ಹೇಗೆ ಸಾಧ್ಯ ಎಂಬುದನ್ನು ವಿವರಿಸಿದ್ದಾರೆ ಸಹ.
”ರಾಜಮೌಳಿ ಭಾರತದ ಸಿನಿಮಾವನ್ನು ವಿಶ್ವಮಟ್ಟದಲ್ಲಿ ಪ್ರದರ್ಶಿಸಿದ್ದಾರೆ ಆ ಮೂಲಕ ಭಾರತದ ಕಡೆಗೆ ಕೋಟ್ಯಂತರ ಜನರ ಆಸಕ್ತಿಯನ್ನು, ಗಮನವನ್ನು ಸೆಳೆದಿದ್ದಾರೆ. ಯಾವುದೇ ಒಂದು ದೇಶ, ನಗರದ ಬಗ್ಗೆ ಆಸಕ್ತಿ, ಕುತೂಹಲಗಳನ್ನು ಬೆಳೆಸುವುದರಲ್ಲಿ ಸಿನಿಮಾಗಳ ಪಾತ್ರ ಬಹಳ ಪ್ರಮುಖವಾದುದು. ಅಮೆರಿಕ ದೊಡ್ಡ ದೇಶ, ಮಹಾನ್ ಶಕ್ತಿಶಾಲಿ ದೇಶ ಎಂದು ನಾವು ನಂಬಿರುವುದು ಹಾಲಿವುಡ್ ಸಿನಿಮಾಗಳ ಕಾರಣವೇ ಹೊರತು ಇತಿಹಾಸದ ಮೂಲಕ ಅಲ್ಲ. ಹಾಗಾಗಿ ರಾಜಮೌಳಿ ಆರ್ಆರ್ಆರ್ ರೀತಿಯಲ್ಲಿಯೇ ಇನ್ನೊಂದೆರಡು ಅಥವಾ ಇನ್ನೂ ಹೆಚ್ಚು ಸಿನಿಮಾ ಮಾಡಿ ಭಾರತದ ಬಗ್ಗೆ ವಿಶ್ವದ ಗಮನ ಸೆಳೆದರೆ ವಿಶ್ವದ ಶಕ್ತಿಶಾಲಿ ರಾಷ್ಟ್ರಗಳ ಜನರು ಭಾರತದತ್ತ ನೋಡಲಾರಂಭಿಸುತ್ತಾರೆ, ಆಸಕ್ತರಾಗುತ್ತಾರೆ” ಎಂದಿದ್ದಾರೆ ತೇಜ.
”ಭಾರತದ ಬಗ್ಗೆ ಆಸಕ್ತಿವಹಿಸಿ ವಿಶ್ವದ ಇತರೆ ರಾಷ್ಟ್ರಗಳಿಂದ ಭಾರತಕ್ಕೆ ಪ್ರವಾಸ ಬರುತ್ತಾರೆ. ಇಲ್ಲಿ ತಮ್ಮ ಹಣವನ್ನು ಬಂಡವಾಳ ಹೂಡುತ್ತಾರೆ. ಡಾಲರ್ ಅಥವಾ ಬೇರೆ ದೇಶದ ಕರೆನ್ಸಿ ಮೂಲಕ ಭಾರತದ ರೂಪಾಯಿಯನ್ನು ಖರೀದಿಸುತ್ತಾರೆ. ಇದೆಲ್ಲ ಹೆಚ್ಚಾದಷ್ಟು ರೂಪಾಯಿ ಶಕ್ತಿಯುತವಾಗುತ್ತದೆ, ರೂಪಾಯಿ ಎದುರು ಡಾಲರ್ ಮೌಲ್ಯ ಕುಸಿಯುತ್ತದೆ. ಇದು ಖಂಡಿತ ಆಗುತ್ತದೆ ನೋಡುತ್ತಿರಿ” ಎಂದು ಸಂದರ್ಶನವೊಂದರಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ ನಿರ್ದೇಶಕ ತೇಜ.
ಇದನ್ನೂ ಓದಿ:SS Rajamouli: 10 ವರ್ಷ ಒಂದೇ ಪ್ರಾಜೆಕ್ಟ್ಮೇಲೆ ಕೆಲಸ ಮಾಡಲಿದ್ದಾರೆ ನಿರ್ದೇಶಕ ರಾಜಮೌಳಿ?
ರೂಪಾಯಿ ಬಲಗೊಳ್ಳಲು ಅದರ ವಿನಿಮಯ ಹೆಚ್ಚಾಗಬೇಕು ಹಾಗಾಗಿ ತೇಜ ಹೇಳಿವುದು ತಪ್ಪೆಂದೊ, ಸುಳ್ಳೆಂದೋ ಹೇಳಲಾಗದು. ಅಮೆರಿಕವನ್ನು ‘ಗ್ರೇಟ್’ ಮಾಡುವುದರಲ್ಲಿ ಹಾಲಿವುಡ್ ಸಿನಿಮಾಗಳ ಯೋಗದಾನ ಬಹಳ ದೊಡ್ಡದ್ದು. ಅಂತೆಯೇ ಭಾರತೀಯ ಸಿನಿಮಾಗಳು ಭಾರತವನ್ನು ವಿಶ್ವಕ್ಕೆ ತಲುಪಿಸುವ ಕೆಲಸವನ್ನು ಸತತವಾಗಿ ಮಾಡುತ್ತಾ ಸಾಗಿದರೆ ತೇಜ ಹೇಳಿದ ಮಾತು ನಿಜವಾಗುವ ಸಾಧ್ಯತೆ ಇದೆ.
ತೇಜ ಸಾಮಾನ್ಯ ನಿರ್ದೇಶಕರೇನಲ್ಲ, ತೆಲುಗು ಚಿತ್ರರಂಗದ ಐತಿಹಾಸಿಕ ಹಿಟ್ಗಳಲ್ಲಿ ಒಂದಾದ ಜಯಂ ಸಿನಿಮಾ ನಿರ್ದೇಶಿಸಿದ್ದು ಇವರೇ. ಜೊತೆಗೆ ಚಿತ್ರಂ, ಔನನ್ನಾ ಕಾದನ್ನ, ನುವ್ವು ನೇನು, ನಿಜಂ, ಧೈರ್ಯಂ, ನೇನೆ ರಾಜು ನೇನೆ ಮಂತ್ರಿ, ಲಕ್ಷ್ಮಿ ಕಲ್ಯಾಣಂ ಇನ್ನು ಹಲವು ನೆನಪುಳಿವ ಸಿನಿಮಾಗಳನ್ನು ತೇಜ ನೀಡಿದ್ದಾರೆ. ಈಗ ಅಹಿಂಸಾ ಹೆಸರಿನ ಸಿನಿಮಾ ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:56 pm, Thu, 25 May 23