ಮಗಳನ್ನು ಸೂರ್ಯ-ಜ್ಯೋತಿಕಾ ದಂಪತಿಯ ಕೈಗೆ ಒಪ್ಪಿಸಿದ ಸ್ಟಾರ್​ ನಿರ್ದೇಶಕ; ಏನಾಗಲಿದೆ ಅದಿತಿ ಶಂಕರ್​ ಭವಿಷ್ಯ?

1993ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ನಿರ್ದೇಶಕ ಶಂಕರ್​ ಅವರು ಇಂದಿಗೂ ಅದೇ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ. ಈಗ ಅವರ ಮಗಳು ಅದಿತಿ ಶಂಕರ್​ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ.

ಮಗಳನ್ನು ಸೂರ್ಯ-ಜ್ಯೋತಿಕಾ ದಂಪತಿಯ ಕೈಗೆ ಒಪ್ಪಿಸಿದ ಸ್ಟಾರ್​ ನಿರ್ದೇಶಕ; ಏನಾಗಲಿದೆ ಅದಿತಿ ಶಂಕರ್​ ಭವಿಷ್ಯ?
ಜ್ಯೋತಿಕಾ, ಸೂರ್ಯ, ಅದಿತಿ, ಶಂಕರ್​

ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಶೈಲಿಯ ಸಿನಿಮಾಗಳ ಮೂಲಕ ಗುರುತಿಸಿಕೊಂಡವರು ನಿರ್ದೇಶಕ ಶಂಕರ್​. ಕಮಲ್​ ಹಾಸನ್​, ರಜನಿಕಾಂತ್​ ಮುಂತಾದ ಸ್ಟಾರ್​ ಕಲಾವಿದರ ಜೊತೆ ಹಿಟ್​ ಸಿನಿಮಾಗಳನ್ನು ನೀಡಿದ್ದು ಶಂಕರ್​ ಹೆಗ್ಗಳಿಕೆ. ಇಂಡಿಯನ್​, ಅನ್ನಿಯನ್​, ಜಂಟಲ್​ಮ್ಯಾನ್​, ಕಾದಲನ್​ ಮುಂತಾದ ಸಿನಿಮಾಗಳ ಮೂಲಕ ಶಂಕರ್​ ಪ್ರೇಕ್ಷಕರ ಮನ ಗೆದ್ದರು. 1993ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಇಂದಿಗೂ ಅದೇ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ. ಈಗ ಅವರ ಮಗಳು ಅದಿತಿ ಶಂಕರ್​ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಅವರನ್ನು ಲಾಂಚ್​ ಮಾಡುವ ಹೊಣೆಯನ್ನು ಕಾಲಿವುಡ್​ ಸ್ಟಾರ್​ ದಂಪತಿಗಳಾದ ಸೂರ್ಯ ಮತ್ತು ಜ್ಯೋತಿಕಾ ಹೊತ್ತಿಕೊಂಡಿದ್ದಾರೆ.

ಸೂರ್ಯ ಮತ್ತು ಜ್ಯೋತಿಕಾ ಒಡೆತನದ 2ಡಿ ಎಂಟರ್​ಟೇನ್ಮೆಂಟ್​ ಬ್ಯಾನರ್​ನಲ್ಲಿ ‘ವಿರುಮಾನ್​’ ಸಿನಿಮಾ ಸೆಟ್ಟೇರಿದೆ. ಆ ಚಿತ್ರಕ್ಕೆ ಸೂರ್ಯ ಸಹೋದರ ಕಾರ್ತಿ ಹೀರೋ. ಅವರಿಗೆ ಜೋಡಿಯಾಗಿ ಶಂಕರ್​ ಪುತ್ರಿ ಅದಿತಿ ಜೋಡಿಯಾಗುತ್ತಿದ್ದಾರೆ. ಚೊಚ್ಚಲ ಸಿನಿಮಾದಲ್ಲಿಯೇ ಇಂಥ ದೊಡ್ಡ ಬ್ಯಾನರ್​ನ ಜೊತೆ ಕೆಲಸ ಮಾಡುವ ಅವಕಾಶ ಅದಿತಿಗೆ ಸಿಕ್ಕಂತಾಗಿದೆ. ಒಳ್ಳೆಯ ಟೀಮ್​ಗೆ ಮಗಳನ್ನು ಸೇರಿಸಿ, ನಿರ್ದೇಶಕ ಶಂಕರ್​ ಈಗ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

‘ನನ್ನ ಮಗಳನ್ನು ಲಾಂಚ್​ ಮಾಡುತ್ತಿರುವುದಕ್ಕೆ ಸೂರ್ಯ ಮತ್ತು ಜ್ಯೋತಿಕಾಗೆ ಧನ್ಯವಾದಗಳು. ನಿಮ್ಮ ಸಂಸ್ಥೆಯಿಂದ ಯಾವಾಗಲೂ ಗುಣಮಟ್ಟದ ಸಿನಿಮಾಗಳೇ ಮೂಡಿಬಂದಿವೆ. ಸಂಪೂರ್ಣ ತಯಾರಿ ಮಾಡಿಕೊಂಡು ಚಿತ್ರರಂಗಕ್ಕೆ ಕಾಲಿಡುತ್ತಿರುವ ನನ್ನ ಮಗಳಿಗೆ ಸಿನಿಪ್ರಿಯರು ಪ್ರೀತಿ ತೋರಿಸುತ್ತಾರೆ ಅಂತ ನಂಬಿದ್ದೇನೆ’ ಎಂದು ಶಂಕರ್​ ಟ್ವೀಟ್​ ಮಾಡಿ​ದ್ದಾರೆ.

ಹೊಸ ಸಿನಿಮಾ ಬಗ್ಗೆ ಟ್ವೀಟ್​ ಮಾಡಿರುವ ಸೂರ್ಯ ಅವರು ತಮ್ಮ ತಂಡಕ್ಕೆ ಅದಿತಿಯನ್ನು ಸ್ವಾಗತಿಸಿದ್ದಾರೆ. ‘ನಿಮಗೆ ಸುಸ್ವಾಗತ. ನೀವು ಎಲ್ಲರ ಹೃದಯ ಗೆಲ್ಲುತ್ತೀರಿ. ದೇವರು ಒಳ್ಳೆಯದು ಮಾಡಲಿ’ ಎಂದು ಸೂರ್ಯ ಹಾರೈಸಿದ್ದಾರೆ. ‘ಈ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು. ನಾನು ನಿಮಗೆ ಹೆಮ್ಮೆ ತರುವಂತಹ ಕೆಲಸ ಮಾಡುತ್ತೇನೆ. ಶೇ.100ರಷ್ಟು ಶ್ರಮಪಡುತ್ತೇನೆ’ ಎಂದು ನಟಿ ಅದಿತಿ ಶಂಕರ್​ ಭರವಸೆ ನೀಡಿದ್ದಾರೆ.

ಇದನ್ನೂ ಓದಿ:

‘ಜೈ ಭೀಮ್​’ ಎನ್ನುತ್ತ ಕರ್ನಾಟಕದಲ್ಲೂ ಸದ್ದು ಮಾಡಲು ಸಜ್ಜಾದ ತಮಿಳು ಸ್ಟಾರ್​ ನಟ ಸೂರ್ಯ

ಜೈ ಭೀಮ್; ಸೂರ್ಯ ನಟನೆಯ ಹೊಸ ಚಿತ್ರದ ಕಥೆ ಬಗ್ಗೆ ಸಿಕ್ತು ಮಹತ್ವದ ಸುಳಿವು; ಪಾತ್ರ ರಿವೀಲ್

Click on your DTH Provider to Add TV9 Kannada