ಕತ್ರಿಕಾ ಕೈಫ್​ ಜೊತೆ ಕೆಲಸ ಮಾಡುವುದು ಬಹಳ ಕಷ್ಟ, ಆದರೆ…: ಹಿರಿಯ ನಿರ್ದೇಶಕ

ನಟಿ ಕತ್ರಿನಾ ಕೈಫ್ ಬಾಲಿವುಡ್​ನ ಹೆಸರಾಂತ ನಟಿ, ಆದರೆ ಆರಂಭದಲ್ಲಿ ಅವರಿಗೆ ನಟನೆ ಬರದು ಎಂಬ ಟೀಕೆಗೆ ಗುರಿಯಾಗಿದ್ದರು. ಸಿನಿಮಾ ವಿಮರ್ಶಕರಂತೂ ಕತ್ರಿನಾರನ್ನು ಕಲ್ಲಿಗೆ ಹೋಲಿಸಿದ್ದರು. ಕತ್ರಿನಾರ ಎರಡನೇ ಸಿನಿಮಾ ನಿರ್ದೇಶನ ಮಾಡಿದ್ದ ಖ್ಯಾತ ನಿರ್ದೇಶಕ ವಿಜಯ್ ಭಾಸ್ಕರ್ ಕತ್ರಿನಾರ ನಟನೆ ಬಗ್ಗೆ ಮಾತನಾಡಿದ್ದಾರೆ.

ಕತ್ರಿಕಾ ಕೈಫ್​ ಜೊತೆ ಕೆಲಸ ಮಾಡುವುದು ಬಹಳ ಕಷ್ಟ, ಆದರೆ...: ಹಿರಿಯ ನಿರ್ದೇಶಕ
Follow us
ಮಂಜುನಾಥ ಸಿ.
|

Updated on: Sep 18, 2024 | 7:40 PM

ಕತ್ರಿನಾ ಕೈಫ್ ಬಾಲಿವುಡ್​ನ ಟಾಪ್ ನಟಿಯರಲ್ಲಿ ಒಬ್ಬರು. ಶ್ವೇತ ವರ್ಷ, ತೆಳ್ಳನೆ ಮೈಮಾಟ, ಒಳ್ಳೆಯ ನೃತ್ಯಗಾರ್ತಿ ಎಲ್ಲವೂ ಹೌದು ಆದರೆ ಆಕೆಗೆ ಅಭಿನಯ ಬರದು ಎಂಬುದು ಸಿನಿಮಾ ಮಂದಿಯ, ವಿಮರ್ಶಕರ ಮಾತು. ಎರಡು ದಶಕ ಚಿತ್ರರಂಗದಲ್ಲಿ ಕಳೆದ ಬಳಿಕ ಈಗ ನಟನೆಗೆ ಒಗ್ಗಿಕೊಂಡಿದ್ದಾರಾದರೂ ಸಿನಿಮಾ ರಂಗಕ್ಕೆ ಬಂದ ಆರಂಭದ ಕೆಲ ವರ್ಷವಂತೂ ಅಭಿನಯ ಬಾರದೆ ಹಲವು ಟೀಕೆಗಳನ್ನು ಕತ್ರಿನಾ ಎದುರಿಸಿದ್ದರು. ಕತ್ರಿನಾ ಕೈಫ್​ರ ಎರಡನೇ ಸಿನಿಮಾ ನಿರ್ದೇಶಿಸಿ ಅವರಿಗೆ ಮೊದಲ ಹಿಟ್ ಸಿಗುವಂತೆ ಮಾಡಿದ ಖ್ಯಾತ ನಿರ್ದೇಶಕ ಕೆ ವಿಜಯ್ ಭಾಸ್ಕರ್ ಕತ್ರಿನಾ ಕೈಫ್ ಜೊತೆ ಕೆಲಸ ಮಾಡುವುದು ಎಷ್ಟು ಕಷ್ಟಕರವಾಗಿತ್ತು ಎಂದು ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

2003 ರಲ್ಲಿ ಬಾಲಿವುಡ್​ನ ‘ಬೂಮ್’ ಹೆಸರಿನ ಸಿನಿಮಾದಲ್ಲಿ ಕತ್ರಿನಾ ಕೈಫ್ ನಟಿಸಿದ್ದರು. ಆ ಸಿನಿಮಾ ಬಿಡುಗಡೆಗೆ ಮುನ್ನವೇ ಕತ್ರಿನಾ ಕೈಫ್ ಅನ್ನು ‘ಮಲ್ಲೇಶ್ವರಿ’ ತೆಲುಗು ಸಿನಿಮಾಕ್ಕೆ ನಾಯಕಿಯಾಗಿ ವಿಜಯ್ ಭಾಸ್ಕರ್ ಆಯ್ಕೆ ಮಾಡಿದ್ದರು. ಸಿನಿಮಾದಲ್ಲಿ ರಾಣಿಯ ಪಾತ್ರ ಅವರದ್ದು. ರಾಣಿ ಆಗಿದ್ದರೂ ಶ್ರೀಮಂತಿಕೆಯನ್ನು ತೋರುಗೊಡದೆ, ಸರಳವಾಗಿ ಬದುಕುವುದನ್ನು ಇಷ್ಟಪಡುವ, ಸರಳವಾದ, ಮಾನವೀಯತೆಯುಳ್ಳ ನಾಯಕಿಯ ಪಾತ್ರ ಅವರದ್ದು. ಆದರೆ ಸಿನಿಮಾಕ್ಕೆ ಕತ್ರಿನಾರನ್ನು ತೆಗೆದುಕೊಂಡ ಬಳಿಕ ಅವರಿಂದ ನಟನೆ ತೆಗೆಯುವುದು ವಿಜಯ್ ಭಾಸ್ಕರ್​ಗೆ ಬಹಳ ಕಷ್ಟವಾಯ್ತಂತೆ.

‘ರಾಣಿ ಎಂದರೆ ನಮ್ಮ ಊಹೆಯಲ್ಲಿರುವವಳು, ಆಕೆಯನ್ನು ಯಾರೂ ನೋಡಿಲ್ಲ, ಹಾಗೆಯೇ ನನ್ನ ಸಿನಿಮಾದ ರಾಣಿಯನ್ನು ಯಾರೂ ನೋಡಿರಬಾದರು ಎಂಬ ಕಾರಣಕ್ಕೆ ಅದಾಗಲೇ ಸ್ಟಾರ್ ಆಗಿದ್ದ ನಟಿಯರನ್ನು ನಾನು ಆಯ್ಕೆ ಮಾಡಲಿಲ್ಲ. ಕತ್ರಿನಾರನ್ನು ಜಾಹೀರಾತೊಂದರಲ್ಲಿ ನೋಡಿ ಈಕೆಯೇ ಸೂಕ್ತ ಎಂದು ಆಯ್ಕೆ ಮಾಡಿಕೊಂಡೆ. ನಿರ್ಮಾಪಕರು ಬೇಡ ಎಂದರೆ ಹಲವು ಹೆಸರುವಾಸಿ ನಟಿಯರನ್ನು ಕರೆಸಿ ಆಡಿಷನ್ ಮಾಡಿಸಿದರೂ ಸಹ ನಾನು ಕತ್ರಿನಾರೆ ಇರಲೆಂದು ಹಠ ಹಿಡಿದು ಅವರನ್ನು ಹಾಕಿಕೊಂಡಿದ್ದೆ’ ಎಂದಿದ್ದಾರೆ ವಿಜಯ್ ಭಾಸ್ಕರ್.

ಇದನ್ನೂ ಓದಿ:ಈ ಗ್ರಾಮದಲ್ಲಿ ಕತ್ರಿನಾ ಕೈಫ್​ನ ಪೂಜಿಸಲಾಗುತ್ತದೆ; ದಂಪತಿಗಳಿಗೆ ನಟಿಯೇ ದೇವರು

‘ಆಕೆಗೆ ನಟನೆ ಬರುತ್ತಿರಲಿಲ್ಲ, ನನಗಂತೂ ಬಹಳ ಕಷ್ಟವಾಯ್ತು. ಪ್ರತಿಯೊಂದು ಸಣ್ಣ ಸಣ್ಣ ವಿಷಯವನ್ನೂ ಅವರಿಗೆ ಹೇಳಿ ಕೊಡಬೇಕಾಗಿತ್ತು. ಸೀರೆ ಹೇಗೆ ಧರಿಸಬೇಕು, ಸರಳವಾಗಿ ಹೇಗೆ ವರ್ತಿಸಬೇಕು ಎಲ್ಲವನ್ನೂ ಹೇಳಬೇಕಾಯ್ತು. ಆಕೆ ಬೆಳೆದಿದ್ದ ಪರಿಸರಕ್ಕೆ ತಕ್ಕಂತೆ ಆಕೆಯ ಹಾವ ಭಾವ ಇತ್ತು, ತೆಲುಗು ನೇಟಿವಿಟಿಗೆ ತಕ್ಕಂತೆ ಹಾವ-ಭಾವ ವರ್ತನೆಗಳನ್ನು ಬದಲಾಯಿಸುವುದು ಬಹಳ ಕಷ್ಟವಾಯ್ತು. ಆಕೆಗೆ ನಟನೆ ಬರುತ್ತಿರಲಿಲ್ಲವಾದರೂ ಆಕೆ ಶ್ರಮಜೀವಿ. ಪ್ರತಿಯೊಂದನ್ನು ಕೇಳಿ ತಿಳಿದುಕೊಂಡು ತಿದ್ದಿಕೊಂಡು ಮರಳಿ-ಮರಳಿ ಪ್ರಯತ್ನ ಮಾಡುತ್ತಿದ್ದರು’ ಎಂದಿದ್ದಾರೆ ವಿಜಯ್ ಭಾಸ್ಕರ್.

‘ನನಗೆ ನಟನೆ ಬರುತ್ತಿಲ್ಲ ಎಂಬುದು ಕತ್ರಿನಾಗೆ ಗೊತ್ತಿತ್ತು, ಹಾಗಾಗಿ ಆಕೆ ಪ್ರತಿಯೊಂದನ್ನು ಕೇಳಿ ಅಭ್ಯಾಸ ಮಾಡಿ ಕಲಿತುಕೊಳ್ಳುವ ಸತತ ಪ್ರಯತ್ನ ಮಾಡುತ್ತಿದ್ದರು. ಅದೇ ಕಾರಣದಿಂದಲೇ ಆಕೆ ನಟನೆ ಸರಿಯಾಗಿ ಬರದೇ ಸತತ ಪ್ರಯತ್ನದಿಂದ ಕಲಿತು ಇಷ್ಟು ವರ್ಷ ಚಿತ್ರರಂಗದಲ್ಲಿ ಉಳಿದುಕೊಳ್ಳುವಂತಾಯ್ತು’ ಎಂದು ಹೊಗಳಿದ್ದಾರೆ ವಿಜಯ್ ಭಾಸ್ಕರ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ