
ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ಅವರ ನಿಗೂಢ ಸಾವಿನ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದೆ. ತನಿಖೆಯಲ್ಲಿ ಗಂಭೀರ ಲೋಪಗಳಾಗಿವೆ ಎಂದು ಆರೋಪಿಸಿ ಹೊಸದಾಗಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಬೇಕೆಂದು ದಿಶಾ ಅವರ ತಂದೆ ಸತೀಶ್ ಸಾಲಿಯನ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿದ್ದ ನ್ಯಾಯಾಲಯ, ಇದೀಗ ಸಿಬಿಐಗೆ ವಹಿಸಿ ಆದೇಶಿಸಿದೆ. ಹೈಕೋರ್ಟ್ ನಿರ್ಧಾರವನ್ನು ದಿಶಾ ಅವರ ತಂದೆ ಸ್ವಾಗತಿಸಿದ್ದು, ಧನ್ಯವಾದ ಅರ್ಪಿಸಿದ್ದಾರೆ. ‘ಯಾರನ್ನೂ ತಕ್ಷಣವೇ ಆರೋಪಿ ಎಂದು ಪರಿಗಣಿಸದೆ, ಹೇಳಿಕೆಗಳನ್ನು ದಾಖಲಿಸಿಕೊಂಡು ಸರಿಯಾದ ತನಿಖೆಯ ನಂತರವಷ್ಟೇ ಚಾರ್ಜ್‌ಶೀಟ್ ಸಲ್ಲಿಸಿ’ ಎಂದು ಕೋರ್ಟ್ ಸೂಚನೆ ನೀಡಿದೆ.
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯನ್, ಜೂನ್ 8, 2020 ರಂದು ಮುಂಬೈನ ಮಲಾಡ್‌ನಲ್ಲಿರುವ ಕಟ್ಟಡವೊಂದರಿಂದ ಬಿದ್ದು ಮೃತಪಟ್ಟಿದ್ದರು. ಇದಾಗಿ ಕೆಲವೇ ದಿನಗಳಲ್ಲಿ, ಅಂದರೆ ಜೂನ್ 14, 2020 ರಂದು ಸುಶಾಂತ್ ಸಿಂಗ್ ರಜಪೂತ್ ಕೂಡ ನಿಧನರಾಗಿದ್ದು, ಈ ಎರಡೂ ಸಾವುಗಳು ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದವು. ಆರಂಭದಲ್ಲಿ ಮುಂಬೈ ಪೊಲೀಸರು ಇದನ್ನು ಆಕಸ್ಮಿಕ ಸಾವು ಎಂದು ದಾಖಲಿಸಿಕೊಂಡು, ನಂತರ ಇದು ಆತ್ಮಹತ್ಯೆ ಎಂದು ವರದಿ ನೀಡಿದ್ದರು. ಆದರೆ, ಇದನ್ನು ಒಪ್ಪದ ತಂದೆ ಸತೀಶ್ ಸಾಲಿಯನ್, ತಮ್ಮ ಮಗಳದ್ದು ಕೊಲೆ ಎಂದು ಆರೋಪಿಸಿ ಮರುತನಿಖೆಗೆ ಪಟ್ಟು ಹಿಡಿದಿದ್ದರು.
ವಿಚಾರಣೆ ವೇಳೆ ಮುಂಬೈ ಪೊಲೀಸರ ತನಿಖಾ ವೈಖರಿ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದರೂ ಎಫ್‌ಐಆರ್ ಏಕೆ ದಾಖಲಿಸಲಿಲ್ಲ? ಇಷ್ಟು ವರ್ಷಗಳಾದರೂ ಮರಣೋತ್ತರ ಪರೀಕ್ಷೆಯ ವರದಿಯನ್ನು ಕುಟುಂಬಕ್ಕೆ ಏಕೆ ನೀಡಿಲ್ಲ? ಹಾಗೂ 14ನೇ ಮಹಡಿಯಿಂದ ಬಿದ್ದಾಗ ಆದ ಗಾಯಗಳಿಗೂ, ಮರಣೋತ್ತರ ವರದಿಯಲ್ಲಿರುವ ಗಾಯಗಳಿಗೂ ಮೇಲ್ನೋಟಕ್ಕೆ ವ್ಯತ್ಯಾಸವಿರುವುದಕ್ಕೆ ಸ್ಪಷ್ಟನೆ ಏನು ಎಂದು ಕೋರ್ಟ್ ಪ್ರಶ್ನಿಸಿತ್ತು.
ಇದನ್ನೂ ಓದಿ: ಸುಶಾಂತ್ ಸಿಂಗ್ ರಜಪೂತ್ ಕೇಸ್ ಆಧಾರಿತ ‘ಸಾರಿ ಬಾಬು’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ
ಇದೇ ಪ್ರಕರಣದಲ್ಲಿ ತಮ್ಮ ವಿರುದ್ಧ ಯಾವುದೇ ದೂರು ಇಲ್ಲದಿದ್ದರೂ ಕೇವಲ ರಾಜಕೀಯ ದುರುದ್ದೇಶದಿಂದ ತಮ್ಮ ಹೆಸರನ್ನು ಎಳೆದುತರಲಾಗುತ್ತಿದೆ ಎಂದು ಶಿವಸೇನಾ (ಠಾಕ್ರೆ ಬಣ) ಶಾಸಕ ಆದಿತ್ಯ ಠಾಕ್ರೆ ಕೋರ್ಟ್‌ನಲ್ಲಿ ವಾದಿಸಿದ್ದರು. ಅಂತಿಮವಾಗಿ ಎಲ್ಲಾ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ಬಾಂಬೆ ಹೈಕೋರ್ಟ್, ಇದೀಗ ನಿಷ್ಪಕ್ಷಪಾತ ತನಿಖೆಗಾಗಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.