
‘ಡಾನ್ 3’ (Don 3) ಚಿತ್ರದ ವಿವಾದ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಸದ್ಯ ಬಿ-ಟೌನ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಶಾರುಖ್ ಖಾನ್ ಅವರು ‘ಡಾನ್’ ಹಾಗೂ ‘ಡಾನ್ 2’ ಸಿನಿಮಾಗಳಲ್ಲಿ ನಟಿಸಿ ಜಾಗತಿಕ ಮಟ್ಟದಲ್ಲಿ ದೊಡ್ಡ ಯಶಸ್ಸು ತಂದುಕೊಟ್ಟಿದ್ದರು. ಆ ಬಳಿಕ ನಿರ್ದೇಶಕ ಫರ್ಹಾನ್ ಅಖ್ತರ್ ಅವರು ‘ಡಾನ್ 3’ ಚಿತ್ರಕ್ಕೆ ರಣವೀರ್ ಸಿಂಗ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಆದರೆ, ರಣವೀರ್ ಸಿಂಗ್ ಸಿನಿಮಾದಿಂದ ದಿಢೀರ್ ಹೊರನಡೆದಿರುವುದರಿಂದ ಅವರು ಈ ಚಿತ್ರದಲ್ಲಿ ನಟಿಸುವುದು ಬಹುತೇಕ ಅನುಮಾನವಾಗಿದೆ. ಈ ಬೆಳವಣಿಗೆಯಿಂದಾಗಿ ಈಗ ‘ಡಾನ್ 3’ ಚಿತ್ರಕ್ಕೆ ಮುಂದಿನ ನಾಯಕ ಯಾರು? ಶಾರುಖ್ ಖಾನ್ ಮತ್ತೆ ಡಾನ್ ಆಗಿ ಮರಳುತ್ತಾರಾ? ಎಂಬ ಕುತೂಹಲ ಎಲ್ಲರಲ್ಲಿ ಮೂಡಿದೆ.
ರಣವೀರ್ ಸಿಂಗ್ ಚಿತ್ರದಿಂದ ಹೊರಬಿದ್ದ ತಕ್ಷಣವೇ, ಆ ಪಾತ್ರಕ್ಕೆ ಬಾಲಿವುಡ್ ಸೂಪರ್‌ಸ್ಟಾರ್ ಹೃತಿಕ್ ರೋಷನ್ ಅವರನ್ನು ಕರೆತರಲಾಗುತ್ತಿದೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ ಈ ಬಗ್ಗೆ ಸ್ವತಃ ಸ್ಪಷ್ಟನೆ ನೀಡಿದ್ದ ಹೃತಿಕ್, ‘ಕೇವಲ ವದಂತಿಯಾಗಿ ಆರಂಭವಾದ ಮಾತುಗಳು ಈಗ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿವೆ. ಆದರೆ ‘ಡಾನ್ 3’ ಚಿತ್ರಕ್ಕಾಗಿ ಚಿತ್ರತಂಡ ನನ್ನನ್ನು ಯಾವುದೇ ಹಂತದಲ್ಲೂ ಸಂಪರ್ಕಿಸಿಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ’ ಎಂದು ಸುಮ್ಮನೆ ಹರಡಿದ್ದ ಸುದ್ದಿಗೆ ಬ್ರೇಕ್ ಹಾಕಿದ್ದರು.
ಮತ್ತೊಂದೆಡೆ, ಶಾರುಖ್ ಖಾನ್ ಅವರೇ ಮತ್ತೆ ‘ಡಾನ್’ ಆಗಿ ಕಂಬ್ಯಾಕ್ ಮಾಡಲಿದ್ದಾರೆ ಎಂಬ ಬಲವಾದ ವರದಿಗಳು ಕೇಳಿಬರುತ್ತಿವೆ. ಆದರೆ, ಕಿಂಗ್ ಖಾನ್ ಮರಳಿ ಬರಲು ಒಂದು ಮುಖ್ಯ ಷರತ್ತು ವಿಧಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ‘ಜವಾನ್’ ಚಿತ್ರದ ನಿರ್ದೇಶಕ ಅಟ್ಲೀ ಅವರು ಈ ಚಿತ್ರವನ್ನು ನಿರ್ದೇಶಿಸುವುದಾದರೆ ಮಾತ್ರ ತಾವು ನಟಿಸಲು ಸಿದ್ಧ ಎಂದು ಶಾರುಖ್ ಹೇಳಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಶಾರುಖ್ ಖಾನ್ ಅವರಾಗಲಿ ಅಥವಾ ನಿರ್ಮಾಣ ಸಂಸ್ಥೆಯಾಗಲಿ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.
ಇಷ್ಟೆಲ್ಲಾ ಗೊಂದಲ ಹಾಗೂ ವಿವಾದಗಳು ಸೃಷ್ಟಿಯಾಗಿದ್ದರೂ, ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಫರ್ಹಾನ್ ಅಖ್ತರ್ ಮಾತ್ರ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಮೌನ ವಹಿಸಿದ್ದಾರೆ. ಅವರ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯೂ ಸಹ ಚಿತ್ರದ ಭವಿಷ್ಯದ ಬಗ್ಗೆ ಅಥವಾ ಮುಂದಿನ ನಾಯಕ ಯಾರು ಎಂಬುದರ ಕುರಿತು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಇದನ್ನೂ ಓದಿ: ‘ಡಾನ್ 3’ ವಿವಾದ: ಚಿತ್ರರಂಗದಿಂದ ಬ್ಯಾನ್ ಆದ ಬಳಿಕ ಮೌನ ಮುರಿದ ರಣವೀರ್ ಸಿಂಗ್
ಅಮಿತಾಭ್ ಬಚ್ಚನ್ ಮತ್ತು ಶಾರುಖ್ ಖಾನ್ ಅವರಂತಹ ದಿಗ್ಗಜರು ನಟಿಸಿ ಬೆಳೆಸಿದ ‘ಡಾನ್’ ಸರಣಿಯ ಮುಂದಿನ ನಾಯಕ ಯಾರಾಗಲಿದ್ದಾರೆ ಎಂಬುದು ಸದ್ಯಕ್ಕೆ ದೊಡ್ಡ ಸಸ್ಪೆನ್ಸ್ ಆಗಿ ಉಳಿದಿದೆ. ಈ ಚಿತ್ರವನ್ನು ಅರ್ಧಕ್ಕೆ ಕೈ ಬಿಡೋ ಬಗ್ಗೆಯೂ ನಿರ್ಮಾಪಕರು ಯೋಚಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.