ನಟಿಯ ‘ಕತ್ತಲ ವ್ಯವಹಾರ’, ನೈಟ್ ಪಾರ್ಟಿಗೆ 35 ಲಕ್ಷ, ಇಡಿ ಕೇಸು

Kayadu Lohar: ಸಿನಿಮಾ ನಟ, ನಟಿಯರು ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಕೆಲವು ಹೈ ಪ್ರೊಫೈಲ್ ಪಾರ್ಟಿಗಳಿಗೆ ಸಿನಿಮಾ ನಟಿಯರನ್ನು ದುಡ್ಡು ಕೊಟ್ಟು ಕರೆಸಲಾಗುತ್ತದೆ. ಹೊಸ ನಟಿಯೊಬ್ಬರು 35 ಲಕ್ಷ ಹಣ ಪಡೆದು ನೈಟ್ ಪಾರ್ಟಿಗೆ ಹಾಜರಾಗಿದ್ದು, ಇದೀಗ ಇಡಿ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ.

ನಟಿಯ ‘ಕತ್ತಲ ವ್ಯವಹಾರ’, ನೈಟ್ ಪಾರ್ಟಿಗೆ 35 ಲಕ್ಷ, ಇಡಿ ಕೇಸು
Kayadu Lohar

Updated on: May 23, 2025 | 1:15 PM

ಇತ್ತೀಚೆಗಷ್ಟೆ ತಮಿಳಿನ ‘ಡ್ರ್ಯಾಗನ್’ ಸಿನಿಮಾ (Cinema) ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿದೆ. ಸಿನಿಮಾನಲ್ಲಿ ನಾಯಕಿಯಾಗಿ ನಟಿಸಿದ್ದ ಅಸ್ಸಾಂ ಮೂಲದ ಕಯಾದು ಲೋಹರ್ ಅವರ ನಟನೆಗೆ ಪ್ರೇಕ್ಷಕ ಫಿದಾ ಆಗಿದ್ದಾನೆ. ‘ಡ್ರ್ಯಾಗನ್’ ಹಿಟ್ ಆದ ಬೆನ್ನಲ್ಲೆ ಅವರಿಗೆ ತಮಿಳು ಹಾಗೂ ತೆಲುಗು ಚಿತ್ರರಂಗದಿಂದ ಆಫರ್​ಗಳ ಮೇಲೆ ಆಫರ್​ಗಳು ಬರುತ್ತಿವೆ. ಆದರೆ ನಟಿ ಈಗ ಇಡಿ (ಜಾರಿ ನಿರ್ದೇಶನಾಲಯ)ದ ಕೇಸೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಅದೂ ಕೇವಲ ಒಂದು ರಾತ್ರಿ ಪಾರ್ಟಿಗೆ ಹಾಜರಾಗಲು 35 ಲಕ್ಷ ರೂಪಾಯಿ ಪಡೆದಿದ್ದು ಇದೀಗ ನಟಿಯ ಸಂಕಷ್ಟಕ್ಕೆ ಕಾರಣವಾಗಿದೆ.

ಹೈ ಪ್ರೊಫೈಲ್ ಪಾರ್ಟಿಗಳಿಗೆ ನಟಿಯರನ್ನು ಕರೆಸುವುದು ಗುಟ್ಟೇನೂ ಅಲ್ಲ. ಇದೀಗ ತಮಿಳುನಾಡಿನಲ್ಲಿ ಸಖತ್ ಸದ್ದು ಮಾಡುತ್ತಿರುವ ‘ಟಾಸ್ಮಾಕ್’ (TASMAC) ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬರಿಂದ ನಟಿ ಕಯಾದು ಲೋಹರ್ 35 ಲಕ್ಷ ರೂಪಾಯಿ ಹಣ ಪಡೆದಿರುವುದು ಇಡಿಯ ಗಮನಕ್ಕೆ ಬಂದಿದ್ದು, ನಟಿಯ ಹೆಸರು ಚಾರ್ಜ್​ಶೀಟ್​​ನಲ್ಲಿ ನಮೂದಾಗುವ ಸಾಧ್ಯತೆ ಇದೆ.

ತಮಿಳುನಾಡಿನಲ್ಲಿ ಮದ್ಯದ ವ್ಯವಹಾರ ನೋಡಿಕೊಳ್ಳುವ ಕಾರ್ಪೊರೇಷನ್ ಟಾಸ್ಮಾಕ್ ಆಗಿದ್ದು, ಏಪ್ರಿಲ್ ತಿಂಗಳಲ್ಲಿ ಟಾಸ್ಮಾಕ್​​ನ ಮುಖ್ಯ ಕಚೇರಿ ಸೇರಿದಂತೆ ಎಂಟು ವಿವಿಧ ಕಡೆಗಳಲ್ಲಿ ಇಡಿ ದಾಳಿ ಮಾಡಿತ್ತು. ಈ ವೇಳೆ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿತ್ತು. ಇಡಿ ನಡೆಸಿದ ತನಿಖೆಯಲ್ಲಿ ಹಗರಣದಲ್ಲಿ ಭಾಗಿ ಆಗಿದ್ದಾರೆ ಎನ್ನಲಾದ ವ್ಯಕ್ತಿಯೊಬ್ಬರು ಕೆಲ ರಾಜಕಾರಣಿಗಳು, ಉದ್ಯಮಿಗಳ ಹೈ ಪ್ರೊಫೈಲ್ ಪಾರ್ಟಿ ಆಯೋಜನೆ ಮಾಡಿದ್ದು, ಆ ಪಾರ್ಟಿಗೆ ಹಾಜರಾಗಲು ನಟಿ ಕಯಾದು ಲೋಹರ್ ಅವರು ಬರೋಬ್ಬರಿ 35 ಲಕ್ಷ ರೂಪಾಯಿ ಹಣ ಪಡೆದಿದ್ದರಂತೆ.

ಇದನ್ನೂ ಓದಿ:ಬಾಲಿವುಡ್ ನಟಿ ತಮನ್ನಾ ಕನ್ನಡದವ್ರು, ಪೂರ್ವಜರ ಮೂಲ ಕನ್ನಡದ ನೆಲ : ಇದು ನಿಜಾನಾ?

ಈ ವಿಷಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಕೆಲ ನಟಿಯರ ‘ಕತ್ತಲ ವ್ಯವಹಾರ’ದ ಬಗ್ಗೆ ಚರ್ಚೆ ನಡೆಯುತ್ತಿದೆ. 2021ರಲ್ಲಿ ಕನ್ನಡ ಸಿನಿಮಾ ‘ಮುಗಿಲ್ ಪೇಟೆ’ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕಯಾದು ಲೋಹರ್ ಅವರು ಈ ವರೆಗೆ ನಟಿಸಿರುವುದು ಆರು ಸಿನಿಮಾಗಳಲ್ಲಿ ಮಾತ್ರ. ‘ಡ್ರ್ಯಾಗನ್’ ಸಿನಿಮಾ ಹಿಟ್ ಆದ ಬೆನ್ನಲ್ಲೆ ಕಯಾದುಗೆ ಸಾಕಷ್ಟು ಆಫರ್​ಗಳು ಬಂದಿದ್ದು, ಪ್ರಸ್ತುತ ಮೂರು ತಮಿಳು ಸಿನಿಮಾಗಳಲ್ಲಿ ಕಯಾದು ನಟಿಸುತ್ತಿದ್ದಾರೆ. ಆದರೆ ಈಗ ಹಗರಣದಲ್ಲಿ ಕಯಾದು ಹೆಸರು ಕೇಳಿ ಬಂದಿದ್ದು, ಇದು ಅವರ ವೃತ್ತಿ ಜೀವನಕ್ಕೆ ಸಂಕಷ್ಟ ತರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಟಾಸ್ಮಾಕ್ ಹಗರಣ ತಮಿಳುನಾಡು ರಾಜಕೀಯದಲ್ಲಿ ಹಲ್​ಚಲ್ ಎಬ್ಬಿಸಿದೆ. ಪ್ರಕರಣ ಸುಪ್ರೀಂಕೋರ್ಟ್​ನಲ್ಲಿದ್ದು, ಸುಪ್ರೀಂ ಕೋರ್ಟ್​, ಇಡಿಗೆ ತಪರಾಕಿ ಹಾಗಿದೆ. ಕಾರ್ಪೊರೇಷನ್ ಒಂದರ ಮೇಲೆ ಕ್ರಿಮಿನಲ್ ಆರೋಪ ಹೇಗೆ ಮಾಡುತ್ತೀರಿ, ‘ಇಡಿ ಎಲ್ಲ ಗಡಿಗಳನ್ನು ಮೀರಿ ವರ್ತಿಸುತ್ತಿದೆ’ ಎಂದು ಸುಪ್ರೀಂ ನ್ಯಾಯಮೂರ್ತಿಗಳು ಹೇಳಿದ್ದಾರೆ. ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ