Singer Mangli: ಗಾಯಕಿ ಮಂಗ್ಲಿ ಬರ್ತ್ಡೇ ಪಾರ್ಟಿಯಲ್ಲಿ ಡ್ರಗ್ಸ್: ಪ್ರಕರಣ ದಾಖಲು
Singer Mangli Birthday: ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಲವು ಸೂಪರ್ ಹಿಟ್ ಹಾಡುಗಳನ್ನು ಹಾಡಿರುವ ಮಂಗ್ಲಿಗೆ ಸಂಕಷ್ಟ ಎದುರಾಗಿದೆ. ಮಂಗ್ಲಿಯ ಬರ್ತ್ಡೇ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಪಾರ್ಟಿಯಲ್ಲಿ ಮಾದಕ ವಸ್ತು ಸೇವಿಸಿರುವುದು ಖಾತ್ರಿಯಾಗಿದೆ. ಹೈದರಾಬಾದ್ ಪೊಲೀಸರು ಇದೀಗ ಮಂಗ್ಲಿ ಸೇರಿದಂತೆ ಇತರೆ ಕೆಲವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡು ಹಾಡಿರುವ ಖ್ಯಾತ ತೆಲುಗು ಗಾಯಕಿ ಮಂಗ್ಲಿಯ ಹುಟ್ಟುಹಬ್ಬ ಪಾರ್ಟಿಯ ಮೇಲೆ ಪೊಲೀಸರು ನಿನ್ನೆ ತಡರಾತ್ರಿ ದಾಳಿ ಮಾಡಿದ್ದು, ಪಾರ್ಟಿಯಲ್ಲಿ ಮಾದಕ ವಸ್ತುಗಳ ಸೇವನೆ ಪತ್ತೆಯಾಗಿದೆ. ಹೈದರಾಬಾದ್ನ ಚೆವೆಲ್ಲಾ ತ್ರಿಪುರಾ ರೆಸಾರ್ಟ್‌ನಲ್ಲಿ ಗಾಯಕಿ ಮಂಗ್ಲಿಯ ಬರ್ತ್ಡೇ ಪಾರ್ಟಿ ಬಲು ಜೋರಾಗಿ ನಡೆದಿತ್ತು. ಪಾರ್ಟಿಯ ಮೇಲೆ ದಾಳಿ ನಡೆಸಿದ ಪೊಲೀಸರು ಪಾರ್ಟಿಯಲ್ಲಿ ಭಾಗಿಯಾದವರ ರಕ್ತದ ಮಾದರಿಗಳನ್ನು ಪಡೆದು, ಪರೀಕ್ಷೆ ನಡೆಸಿದ್ದು, ಮಾದಕ ವಸ್ತು ಸೇವಿಸಿರುವುದು ಖಾತ್ರಿ ಆಗಿದೆ.
ಮಂಗ್ಲಿ ಹುಟ್ಟುಹಬ್ಬದ ಪಾರ್ಟಿಯ ಮೇಲೆ ಹೈದರಾಬಾದ್ ಪೊಲೀಸರ ಮಾದಕ ವಸ್ತು ನಿಗ್ರಹ ದಳದ ಸದಸ್ಯರು ದಾಳಿ ನಡೆಸಿದ್ದು, ಈ ವೇಳೆ ಪಾರ್ಟಿಯಲ್ಲಿ ಹಾಜರಿದ್ದವರ ರಕ್ತದ ಮಾದರಿಗಳನ್ನು ತೆಗೆದುಕೊಳ್ಳಲಾಗಿತ್ತು. ಆ ಪೈಕಿ ಒಂಬತ್ತು ಮಂದಿ ಮಾದಕ ವಸ್ತು ಸೇವಿಸಿರುವುದು ಖಾತ್ರಿ ಆಗಿದೆ. ಒಂಬತ್ತು ಮಂದಿ ಗಾಂಜಾ ಸೇವನೆ ಮಾಡಿದ್ದರು ಎನ್ನಲಾಗುತ್ತಿದೆ. ಪೊಲೀಸರಿಂದ ಅಧಿಕೃತ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ.
ಇದನ್ನೂ ಓದಿ:ರನ್ಯಾ ರಾವ್ ಗೋಲ್ಡ್ ಸ್ಮಂಗ್ಲಿಂಗ್ ಕೇಸ್: 2ನೇ ಆರೋಪಿ ತರುಣ್ಗೆ ಬಿಗ್ ಶಾಕ್! ಮಂಗ್ಲಿಯ ಹುಟ್ಟುಹಬ್ಬದಲ್ಲಿ ಹಲವಾರು ಮಂದಿ ಭಾಗಿಯಾಗಿದ್ದು, ಕೆಲ ವಿದೇಶಿ ಮದ್ಯಗಳು ಸಹ ಪಾರ್ಟಿ ಸ್ಥಳದಲ್ಲಿದ್ದು ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಬರ್ತ್ಡೇ ಪಾರ್ಟಿ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಗಾಯಕಿ ಮಂಗ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎನ್ನಲಾಗುತ್ತಿದೆ. ಘಟನಾ ಸ್ಥಳದ ವಿಡಿಯೋ ಮಾಡುತ್ತಿದ್ದ ಪೊಲೀಸರ ಮೇಲೆ ವಾಗ್ದಾಳಿ ನಡೆಸಿದ ಗಾಯಕಿ ಮಂಗ್ಲಿ, ವಿಡಿಯೋ ರೆಕಾರ್ಡಿಂಗ್ ನಿಲ್ಲಿಸುವಂತೆ ಧಮ್ಕಿ ಹಾಕಿದ್ದಾರೆ ಎನ್ನಲಾಗುತ್ತಿದೆ.
ಸಿಂಗರ್ ಮಂಗ್ಲಿ ವಿಡಿಯೋ ರೆಕಾರ್ಡಿಂಗ್ ನಿಲ್ಲಿಸುವಂತೆ ಧಮ್ಕಿ ಹಾಕಿದ್ದಾರೆ ಎನ್ನಲಾಗುತ್ತಿರುವ ವಿಡಿಯೋ ಇಲ್ಲಿದೆ
ಗಾಯಕಿ ಮಂಗ್ಲಿ, ಟಿವಿ ನಿರೂಪಕಿಯಾಗಿ, ಜನಪದ ಹಾಡುಗಳ ಗಾಯಕಿಯಾಗಿ, ಯೂಟ್ಯೂಬ್ ಗಾಯಕಿಯಾಗಿ, ರಿಯಾಲಿಟಿ ಶೋಗಳ ಸ್ಪರ್ಧಿಯಾಗಿ, ನಿರೂಪಕಿಯಾಗಿ ವೃತ್ತಿ ಆರಂಭಿಸಿ ಈಗ ದಕ್ಷಿಣ ಭಾರತದ ಬಲು ಜನಪ್ರಿಯ ಹಾಡುಗಾರ್ತಿಯರಲ್ಲಿ ಒಬ್ಬರಾಗಿದ್ದಾರೆ. ಬಲು ಬಡ ಕುಟುಂಬದಿಂದ ಬಂದ ಮಂಗ್ಲಿ, ಈಗ ಸೆಲೆಬ್ರಿಟಿ ಆಗಿದ್ದಾರೆ. ಮಂಗ್ಲಿಗೆ ತೆಲಂಗಾಣ, ಆಂಧ್ರ ಪ್ರದೇಶಗಳಲ್ಲಿ ದೊಡ್ಡ ಅಭಿಮಾನಿ ವರ್ಗವಿದೆ. ಕರ್ನಾಟಕದಲ್ಲಿಯೂ ಅವರು ಕೆಲವು ಲೈವ್ ಶೋ ಮಾಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಬಳ್ಳಾರಿ, ರಾಯಚೂರು ಭಾಗಗಳಲ್ಲಿ ಅವರನ್ನು ಚುನಾವಣೆ ಪ್ರಚಾರಕ್ಕೆ ಸಹ ಕರೆಸಲಾಗಿತ್ತು. ಈಗ ಮಂಗ್ಲಿ, ಮಾದಕ ವಸ್ತು ಪ್ರಕರಣದ ಆರೋಪಿಯಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:46 pm, Wed, 11 June 25