ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳುವಾಗಲೇ ನಾಲ್ಕು ಬಾರಿ ಹೃದಯಾಘಾತ; ಮಾಡೆಲ್ ಸಾವು

| Updated By: ರಾಜೇಶ್ ದುಗ್ಗುಮನೆ

Updated on: Nov 10, 2023 | 12:48 PM

ಈ ರೀತಿ ಕಾಸ್ಮೆಟಿಕ್ ಸರ್ಜರಿಗೆ ಒಳಗಾಗುವಾಗ ಸಾಕಷ್ಟು ಎಚ್ಚರಿಕೆ ಬೇಕು. ಈ ಮೊದಲು ಅನೇಕ ನಟಿಯರು ಈ ರೀತಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ಇನ್ನೂ ಕೆಲವರು ಅಂದವನ್ನೇ ಕಳೆದುಕೊಂಡಿದ್ದಾರೆ.

ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳುವಾಗಲೇ ನಾಲ್ಕು ಬಾರಿ ಹೃದಯಾಘಾತ; ಮಾಡೆಲ್ ಸಾವು
ಲುವಾನಾ
Follow us on

ಹೀರೋಯಿನ್​ಗಳು ಸೌಂದರ್ಯ ಕಾಪಾಡಿಕೊಳ್ಳಲು ಹೆಚ್ಚು ಒತ್ತು ನೀಡುತ್ತಾರೆ. ಹಲವು ರೀತಿಯ ಕಾಸ್ಮೆಟಿಕ್​ ಬಳಕೆ ಮಾಡುತ್ತಾರೆ. ಮೇಕಪ್ ಇಲ್ಲದೆ ಅವರು ಹೊರ ಜಗತ್ತಿಗೆ ಕಾಣಿಸಿಕೊಳ್ಳೋದು ತುಂಬಾನೇ ಅಪರೂಪ. ಇದರ ಜೊತೆಗೆ ಕೆಲವರು ಸೌಂದರ್ಯ ಹೆಚ್ಚಿಸಿಕೊಳ್ಳಲು ಸರ್ಜರಿ (Surgery) ಮಾಡಿಕೊಳ್ಳುತ್ತಾರೆ. ಮೂಗು, ಕೆನ್ನೆ, ತುಟಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಅಂದ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇದು ತುಂಬಾನೇ ಅಪಾಯಕಾರಿ. ಹಾಗಿದ್ದರೂ ಈ ಪ್ರಯತ್ನ ಮಾಡುವವರ ಸಂಖ್ಯೆ ಕಡಿಮೆ ಆಗಿಲ್ಲ. ಇದೇ ರೀತಿಯ ಪ್ರಯತ್ನದಲ್ಲಿದ್ದ ಪ್ರಸಿದ್ಧ ಸೆಲೆಬ್ರಿಟಿಯೊಬ್ಬರು ಸಣ್ಣ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಇದು ಅಭಿಮಾನಿಗಳು ಮತ್ತು ಕುಟುಂಬ ಸದಸ್ಯರಿಗೆ ಆಘಾತವನ್ನುಂಟು ಮಾಡಿದೆ.

ಮೃತಪಟ್ಟವರು ಬ್ರೆಜಿಲ್​​ನ ಮಾಡೆಲ್ ಮತ್ತು ಸೋಶಿಯಲ್ ಮೀಡಿಯಾ ಇನ್​ಫ್ಲ್ಯುಯೆನ್ಸರ್ ಲುವಾನಾ ಆಂಡ್ರೇಡ್. ಅವರಿಗೆ ಕೇವಲ 29 ವರ್ಷ ವಯಸ್ಸಾಗಿತ್ತು. ಲುವಾನಾ ಸಾವು ಎಲ್ಲೆಡೆ ಸಂಚಲನ ಮೂಡಿಸಿದೆ. ಕಾಸ್ಮೆಟಿಕ್ ಸರ್ಜರಿ ವೇಳೆ ಲುವಾನಾ ಹೃದಯಾಘಾತಕ್ಕೆ ಒಳಗಾದರು. ಬೆಚ್ಚಿ ಬೀಳಿಸುವ ವಿಚಾರ ಎಂದರೆ ಶಸ್ತ್ರಚಿಕಿತ್ಸೆ ವೇಳೆ ಲುವಾನಾಗೆ ನಾಲ್ಕು ಬಾರಿ ಹೃದಯಾಘಾತ ಆಗಿತ್ತು. ಅವರು ಬದುಕುಳಿಯಲೇ ಇಲ್ಲ.

ಬ್ರೆಜಿಲಿಯನ್ ಟಿವಿ ಶೋ ‘ಪವರ್ ಕಪಲ್ 6′ ನಿಂದ ಲುವಾನಾ ಜನಪ್ರಿಯತೆ ಪಡೆದಿದ್ದರು. ಅವರು ಆಸ್ಪತ್ರೆಯಲ್ಲಿ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾದರು. ಈ ವೇಳೆ ಲುವಾನಾಗೆ ಉಸಿರಾಟದ ತೊಂದರೆ ಆಗಿದೆ. ಆ ಬಳಿಕ ನಾಲ್ಕು ಬಾರಿ ಹೃದಯಾಘಾತ ಆಗಿದೆ. ಅವರನ್ನು ವೈದ್ಯರು ತಕ್ಷಣ ಐಸಿಯು ವಾರ್ಡ್​ಗೆ ಸ್ಥಳಾಂತರಿಸಿದ್ದಾರೆ. ಆದರೆ ವೈದ್ಯರು ಲುವಾನಾ ಅವರ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ. ನಟಿಯ ಸಾವು ಆಘಾತ ಮೂಡಿಸಿದೆ.

ಲುವಾನಾ ಸಾವಿಗೆ ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ಲುವಾನಾ ಆಂಡ್ರೇಡ್ ಸಾವು ಸದ್ಯ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ರೀತಿ ಶಸ್ತ್ರಚಿಕಿತ್ಸೆಗೆ ಒಳಗಾಗುವರಿಗೆ ಎಚ್ಚರಿಕೆಯ ಗಂಟೆ ಇದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಲುವಾನಾ ಸಾವಿನ ಬಳಿಕ ಅವರ ಬಾಯ್​ಫ್ರೆಂಡ್, ಕಿರುತೆರೆ ನಟ ಜೊವೊ ಹದಾದ್ ತೀವ್ರ ದುಃಖಕ್ಕೆ ಒಳಗಾಗಿದ್ದಾರೆ. ‘ನನಗೆ ತುಂಬಾ ದುಃಖವಾಗಿದೆ. ನನ್ನ ಕನಸು ನನಸಾಗದೆ ಉಳಿಯಿತು. ನನ್ನ ಜೀವನದ ಒಂದು ಭಾಗವನ್ನು ಕಳೆದುಕೊಂಡಿದ್ದೇನೆ. ನನ್ನ ಲುವಾನಾಗೆ ನಾನು ವಿದಾಯ ಹೇಳಲು ಬಹಳ ದುಃಖವಾಗಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಪ್ಲಾಸ್ಟಿಕ್ ಸರ್ಜರಿಯ ಸಂಭವನೀಯ ಅಪಾಯ ಮತ್ತು ತೊಡಕುಗಳು ಏನೆಂದು ತಿಳಿಯಿರಿ

ಈ ರೀತಿ ಕಾಸ್ಮೆಟಿಕ್ ಸರ್ಜರಿಗೆ ಒಳಗಾಗುವಾಗ ಸಾಕಷ್ಟು ಎಚ್ಚರಿಕೆ ಬೇಕು. ಈ ಮೊದಲು ಅನೇಕ ನಟಿಯರು ಈ ರೀತಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ಇನ್ನೂ ಕೆಲವರು ಅಂದವನ್ನೇ ಕಳೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ