ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಅಭಿಮಾನಿ ಬಳಗ ದಿನದಿಂದ ದಿನಕ್ಕೆ ಹಿರಿದಾಗುತ್ತಿದೆ. ಕರ್ನಾಟಕದಿಂದ ಶುರುವಾದ ಅವರ ಸಿನಿಮಾ ಪಯಣ ಈಗ ಬಹುಭಾಷೆಗೆ ವಿಸ್ತರಿಸಿದೆ. ವಿದೇಶದಲ್ಲೂ ಅವರಿಗೆ ಅಭಿಮಾನಿಗಳು ಇದ್ದಾರೆ. ಸ್ಟಾರ್ ನಟರ ಸಿನಿಮಾಗಳಿಗೆ ನಾಯಕಿ ಆಗುತ್ತ ಅವರು ಮುನ್ನುಗ್ಗುತ್ತಿದ್ದಾರೆ. ಈಗ ಅವರು ನಟಿಸಿರುವ ‘ಸೀತಾ ರಾಮಂ’ (Sita Ramam) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆದರೆ ಕೆಲವು ರಾಷ್ಟ್ರಗಳಲ್ಲಿ ಈ ಚಿತ್ರವನ್ನು ಬ್ಯಾನ್ ಮಾಡಲಾಗಿದೆ. ಇದರಿಂದ ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳಿಗೆ ಬೇಸರ ಆಗಿದೆ. ಆಗಸ್ಟ್ 5ರಂದು ‘ಸೀತಾ ರಾಮಂ’ ರಿಲೀಸ್ ಆಗುತ್ತಿದ್ದು, ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಜೊತೆ ದುಲ್ಕರ್ ಸಲ್ಮಾನ್ (Dulquer Salmaan), ಮೃಣಾಲ್ ಠಾಕೂಲ್ ಮುಖ್ಯ ಪಾತ್ರ ಮಾಡಿದ್ದಾರೆ. ಟ್ರೇಲರ್ ಮೂಲಕ ಗಮನ ಸೆಳೆದ ಈ ಚಿತ್ರಕ್ಕೆ ಈಗ ಬ್ಯಾನ್ ಬಿಸಿ ತಟ್ಟಿದೆ.
ಈ ಮೊದಲೇ ತಿಳಿದಿರುವಂತೆ ‘ಸೀತಾ ರಾಮಂ’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರು ಮುಸ್ಲಿಂ ಯುವತಿಯ ಪಾತ್ರವನ್ನು ನಿಭಾಯಿಸಿದ್ದಾರೆ. ಅವರ ಫಸ್ಟ್ ಲುಕ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದರು. ಆದರೆ ಅವರು ಬುರ್ಕಾ ಧರಿಸಿ ಕಾಣಿಸಿಕೊಂಡಿದ್ದು ಅನೇಕರಿಗೆ ಅಚ್ಚರಿ ಮೂಡಿಸಿತ್ತು. ಈ ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುವಂತಹ ಅಂಶಗಳಿವೆ ಎಂದು ಆರೋಪಿಸಿ ಅರಬ್ ರಾಷ್ಟ್ರಗಳಲ್ಲಿ ಈ ಚಿತ್ರದ ಬಿಡುಗಡೆಯನ್ನು ನಿಷೇಧಿಸಲಾಗಿದೆ ಎಂದು ವರದಿ ಆಗಿದೆ.
ಬಹ್ರೇನ್, ಓಮನ್, ಕುವೈತ್, ಖತಾರ್, ಸೌದಿ ಅರೇಬಿಯಾ ಮುಂತಾದ ರಾಷ್ಟ್ರಗಳಲ್ಲಿ ಸಿನಿಮಾವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಸದಸ್ಯರ ಅಭಿಪ್ರಾಯದ ಮೇರೆಗೆ ಈ ಚಿತ್ರವನ್ನು ಬ್ಯಾನ್ ಮಾಡಲಾಗಿದೆ. ಚಿತ್ರತಂಡದವರು ಮತ್ತೊಮ್ಮೆ ಸೆನ್ಸಾರ್ಗೆ ಮನವಿ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದಲ್ಲಿ ಎರಡು ಕಾಲಘಟ್ಟದ ಕಥೆ ಇದೆ ಎಂಬುದು ಟ್ರೇಲರ್ ಮೂಲಕ ಗೊತ್ತಾಗಿದೆ.
ಅರಬ್ ರಾಷ್ಟ್ರಗಳಲ್ಲಿ ದುಲ್ಕರ್ ಸಲ್ಮಾನ್ ಅವರ ಸಿನಿಮಾಗಳಿಗೆ ಒಳ್ಳೆಯ ಮಾರುಕಟ್ಟೆ ಇದೆ. ಒಂದು ವೇಳೆ ಬ್ಯಾನ್ ಖಚಿತವಾದರೆ ‘ಸೀತಾ ರಾಮಂ’ ಚಿತ್ರಕ್ಕೆ ಹೆಚ್ಚು ನಷ್ಟ ಆಗಲಿದೆ ಎಂಬ ಮಾತು ಕೇಳಿಬಂದಿದೆ. ಈ ಸಿನಿಮಾಗೆ ಹನು ರಾಘವಪುಡಿ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ದುಲ್ಕರ್ ಸಲ್ಮಾನ್ ಅವರು ಮಿಲಿಟರಿ ಅಧಿಕಾರಿಯ ಪಾತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಲವ್ ಸ್ಟೋರಿ ಹೈಲೈಟ್ ಆಗಲಿದೆ. ಇನ್ಮುಂದೆ ಅವರು ಇಂಥ ಸಿನಿಮಾ ಮಾಡುವುದಿಲ್ಲ ಇತ್ತೀಚೆಗೆ ಹೇಳಿಕೆ ನೀಡಿದ್ದರು.
Published On - 12:54 pm, Thu, 4 August 22