ಬೆಟ್ಟಿಂಗ್ಗೆ ಪ್ರಚಾರ, ತೆಲುಗು ಸ್ಟಾರ್ ನಟ, ನಟಿಯರ ವಿರುದ್ಧ ಪ್ರಕರಣ
Tollywood celebrities: ಹಲವಾರು ಮಂದಿ ತೆಲುಗು ಚಿತ್ರರಂಗದ ಸಿನಿಮಾ ಸೆಲೆಬ್ರಿಟಿಗಳ ವಿರುದ್ಧ ಕೇಂದ್ರ ತನಿಖಾ ಸಂಸ್ಥೆ ಇಡಿ (ಜಾರಿ ನಿರ್ದೇಶನಾಲಯ) ಕೇಸು ದಾಖಲಿಸಿದೆ. ಈ ಸಿನಿಮಾ ಸೆಲೆಬ್ರಿಟಿಗಳು ತಮ್ಮ ಜನಪ್ರಿಯತೆ ಬಳಸಿ ಬೆಟ್ಟಿಂಗ್ ಅಪ್ಲಿಕೇಶನ್ಗಳನ್ನು ಪ್ರಚಾರ ಮಾಡುತ್ತಿದ್ದ ಕಾರಣಕ್ಕೆ ಇಡಿ ಕೇಸು ದಾಖಲಿಸಿ, ನೊಟೀಸ್ ನೀಡಿದೆ. ಈ ಹಿಂದೆ ಸಹ ಇವರುಗಳ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದರು.

ತೆಲುಗು ಚಿತ್ರರಂಗದಲ್ಲಿ (Tollywood) ಮತ್ತೊಮ್ಮೆ ಬೆಟ್ಟಿಂಗ್ ಬಿರುಗಾಳಿ ಬೀಸಿದೆ. ಕೆಲ ವರ್ಷಗಳ ಹಿಂದೆ ಸಹ ಬೆಟ್ಟಿಂಗ್ ವಿಷಯವಾಗಿ ಸರ್ಕಾರವು ಹಲವಾರು ಸಿನಿಮಾ ನಟ, ನಟಿಯರು, ಯೂಟ್ಯೂಬ್ ಇನ್ಫ್ಲುಯೆನ್ಸರ್ಗಳಿಗೆ ನೊಟೀಸ್ ನೀಡಿತ್ತು. ಕೆಲವರ ಬಂಧನವೂ ಆಗಿತ್ತು. ಇದೀಗ ಕೇಂದ್ರದ ತನಿಖಾ ಸಂಸ್ಥೆ ಇಡಿ (ಜಾರಿ ನಿರ್ದೇಶನಾಲಯ) ತೆಲುಗು ಚಿತ್ರರಂಗದ ಹಲವಾರು ಸಿನಿಮಾ ಸೆಲೆಬ್ರಿಟಿಗಳ ವಿರುದ್ಧ ಪ್ರಕರಣ ದಾಖಲಿಸಿದೆ. ಕೆಲ ಯೂಟ್ಯೂಬರ್ಗಳ ವಿರುದ್ಧವೂ ಪ್ರಕರಣಗಳು ದಾಖಲಾಗಿವೆ.
ಕೆಲ ತಿಂಗಳ ಹಿಂದೆ ಹೈದರಾಬಾದ್ ಪೊಲೀಸರು ಬೆಟ್ಟಿಂಗ್ ಪ್ರಕರಣದಲ್ಲಿ ಕೆಲ ಸಿನಿಮಾ ಸೆಲೆಬ್ರಿಟಿಗಳ ವಿರುದ್ಧ ಕೇಸು ದಾಖಲಿಸಿದ್ದರು. ಈಗ ಇಡಿ ಸಹ ಅದೇ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸು ದಾಖಲಿಸಿದೆ. ವಿಜಯ್ ದೇವರಕೊಂಡ, ರಾಣಾ ದಗ್ಗುಬಾಡಿ, ಮಂಚು ಲಕ್ಷ್ಮಿ, ಪ್ರಕಾಶ್ ರೈ, ನಿಧಿ ಅಗರ್ವಾಲ್, ಅನನ್ಯ ನಾಗಲ್ಲ, ಶೋಭಾ ಶೆಟ್ಟಿ, ಟೇಸ್ಟಿ ತೇಜ, ಶೋಭಾ ಶೆಟ್ಟಿ, ಅಮೃತಾ ಚೌಧರಿ, ನಯನಿ ಪಾವನಿ, ಪಂಡು, ಪದ್ಮಾವತಿ, ಇಮ್ರಾನ್ ಖಾನ್, ವಿಷ್ಣುಪ್ರಿಯ, ಬಂದರು ಸುಪ್ರಿತಾ ಇನ್ನೂ ಹಲವಾರು ನಟ-ನಟಿಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಯೂಟ್ಯೂಬರ್ಗಳು, ಸಿನಿಮಾ ಸೆಲೆಬ್ರಿಟಿಗಳು ಸೇರಿ ಬರೋಬ್ಬರಿ 29 ಮಂದಿಯ ವಿರುದ್ಧ ಇಡಿ ಪ್ರಕರಣ ದಾಖಲಿಸಿಕೊಂಡಿದೆ. ಈ ಸಿನಿಮಾ ಸೆಲೆಬ್ರಿಟಿಗಳು ಬೆಟ್ಟಿಂಗ್ ಅಪ್ಲಿಕೇಶನ್ಗಳ ರಾಯಭಾರಿಗಳಾಗಿದ್ದರು. ಬೆಟ್ಟಿಂಗ್ ಆಡಿರೆಂದು ಜನರನ್ನು ಪ್ರೇರೇಪಣೆ ಮಾಡುತ್ತಿದ್ದರು ಎಂದು ಆರೋಪಿಸಿ ಇಡಿ ಪ್ರಕರಣ ದಾಖಲಿಸಿಕೊಂಡಿದ್ದು, ಎಲ್ಲ ಆರೋಪಿಗಳಿಗೆ ನೊಟೀಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಕೋರಿದೆ.
ಇದನ್ನೂ ಓದಿ:ಬೆಟ್ಟಿಂಗ್ ಚಟಕ್ಕೆ ಬಿದ್ದು ತಂದೆ ಆಸ್ತಿ ಮಾರಿಸಿದ ಮಗ: ಆದರೂ ಬುದ್ಧಿ ಕಲಿಯದ ಇಂಜಿನಿಯರ್ ಕಳ್ಳನಾದ!
ಸಿನಿಮಾ ಸೆಲೆಬ್ರಿಟಿಗಳು ಈ ಬೆಟ್ಟಿಂಗ್ ಅಪ್ಲಿಕೇಶನ್ಗಳನ್ನು ಪ್ರಚಾರ ಮಾಡುವುದರಿಂದ ಜನರಿಗೆ ಬೆಟ್ಟಿಂಗ್ ಅಭ್ಯಾಸ ಹೆಚ್ಚಾಗಿ ಸಾಕಷ್ಟು ಮಂದಿ ಹಣ ಕಳೆದುಕೊಂಡಿದ್ದಾರೆ. ಕೆಲವರು ಸಾಲ ಹೆಚ್ಚು ಮಾಡಿಕೊಂಡು ಜೀವ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಕರ್ನಾಟಕದಲ್ಲಿಯೂ ಸಹ ಈ ಮುಂಚೆ ಕೆಲವು ನಟರು ಬೆಟ್ಟಿಂಗ್ ಅಪ್ಲಿಕೇಶನ್ಗಳನ್ನು ಪ್ರಚಾರ ಮಾಡಿದ್ದರು. ಆದರೆ ಅದರ ವಿರುದ್ಧ ಕೆಲವಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿದ ಬಳಿಕ ಜಾಹೀರಾತಿನಲ್ಲಿ ನಟಿಸುವುದನ್ನು ಕೈಬಿಟ್ಟರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




