ಖ್ಯಾತ ನಟಿ, ಮಾಜಿ ಸಂಸದೆ ಜಯಪ್ರದಾ (Jayaprada) ಅವರಿಗೆ ಚೆನ್ನೈನ ನ್ಯಾಯಾಲವು 6 ತಿಂಗಳು ಜೈಲು ಶಿಕ್ಷೆ (Imprisonment) ವಿಧಿಸಿದೆ. ಅಲ್ಲದೇ, 5 ಸಾವಿರ ರೂಪಾಯಿ ದಂಡವನ್ನು ಹಾಕಲಾಗಿದೆ. ಜಯಪ್ರದಾ ಅವರು ನಡೆಸುತ್ತಿದ್ದ ಚಿತ್ರಮಂದಿರದ ಕೆಲಸಗಾರರಿಗೆ ಸೂಕ್ತ ಇಎಸ್ಐ (ESI) ಹಣ ನೀಡಿಲ್ಲ ಎಂದು ಕೇಸ್ ದಾಖಲಾಗಿತ್ತು. ಅದರ ವಿಚಾರಣೆ ನಡೆಸಿರುವ ನ್ಯಾಯಾಲಯವು ಈ ತೀರ್ಪು ನೀಡಿದೆ. ಇಎಸ್ಐ ಹಣ ಪಾವತಿಸದ ಕಾರಣ ಜಯಪ್ರದಾ ವಿರುದ್ಧ ಕಾರ್ಮಿಕರು ಅಸಮಾಧಾನಗೊಂಡಿದ್ದರು. ಈ ಹಿಂದೆ ಕೂಡ ಜಯಪ್ರದಾ ಥಿಯೇಟರ್ ಕಾಂಪ್ಲೆಕ್ಸ್ಗೆ ಸಂಬಂಧಿಸಿದಂತೆ ಸುಮಾರು 20 ಲಕ್ಷ ರೂಪಾಯಿ ತೆರಿಗೆ ಪಾವತಿಸಿರಲಿಲ್ಲ. ಆಗ ಸಿಟಿ ಸಿವಿಲ್ ನ್ಯಾಯಾಲಯದ ಆದೇಶದಂತೆ ಪಾಲಿಕೆ ಅಧಿಕಾರಿಗಳು ಥಿಯೇಟರ್ನ ಕುರ್ಚಿ, ಪ್ರೊಜೆಕ್ಟರ್ಗಳನ್ನು ಜಪ್ತಿ ಮಾಡಿದ್ದರು. ಈಗ ಮತ್ತೊಮ್ಮೆ ಜಯಪ್ರದಾ ಅವರಿಗೆ ಹಿನ್ನಡೆ ಆಗಿದೆ.
ಚೆನ್ನೈನಲ್ಲಿ ಜಯಪ್ರದಾ ಅವರು ರಾಮ್ ಕುಮಾರ್ ಮತ್ತು ರಾಜ ಬಾಬು ಜೊತೆ ಸೇರಿ ಎರಡು ಚಿತ್ರಮಂದಿರಗಳನ್ನು ನಡೆಸುತ್ತಿದ್ದರು. ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಸಂಬಳದಲ್ಲಿ ಚಿತ್ರಮಂದಿರದ ಆಡಳಿತ ಮಂಡಳಿಯವರು ಇಎಸ್ಐ ಹಣ ಕಡಿತ ಮಾಡಿಕೊಳ್ಳುತ್ತಿದ್ದರು. ಆದರೆ ಅದನ್ನು ಸರ್ಕಾರಿ ಕಾರ್ಮಿಕರ ವಿಮಾ ನಿಗಮಕ್ಕೆ ಜಯಪ್ರದಾ ಪಾವತಿಸುತ್ತಿರಲಿಲ್ಲ. ತಮಗೆ ತಮ್ಮ ಪಾಲಿನ ಇಎಸ್ಐ ಸಿಗುತ್ತಿಲ್ಲ ಎಂದು ಕಾರ್ಮಿಕರೊಬ್ಬರು ತಕರಾರು ತೆಗೆದಿದ್ದರು. ಆಗ ಸರ್ಕಾರಿ ಕಾರ್ಮಿಕರ ವಿಮಾ ನಿಗಮವು ಜಯಪ್ರದಾ ವಿರುದ್ಧ ದೂರು ದಾಖಲಿಸಿತ್ತು.
ಇದನ್ನೂ ಓದಿ: ಜಯಪ್ರದಾ ಕುಟುಂಬದಿಂದ ಅನ್ಯಾಯವಾಗಿದೆ, ದಯವಿಟ್ಟು ನ್ಯಾಯ ಕೊಡಿಸಿ: ಸಂಸದೆ ಸುಮಲತಾ ಬಳಿ ವಿಜಯಲಕ್ಷ್ಮಿ ಮನವಿ
ಬಹುಭಾಷೆಯ ಸಿನಿಮಾಗಳಲ್ಲಿ ನಟಿಸುವ ಮೂಲಕ ಜಯಪ್ರದಾ ಅವರು ಮನೆ ಮಾತಾಗಿದ್ದಾರೆ. ಕನ್ನಡ, ತೆಲುಗು, ತಮಿಳು ಮಲಯಾಳಂ ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿ ಅವರು ಸೈ ಎನಿಸಿಕೊಂಡಿದ್ದಾರೆ. ‘ಸನಾದಿ ಅಪ್ಪಣ್ಣ’, ‘ಹುಲಿಯ ಹಾಲಿನ ಮೇವು’, ‘ಕವಿರತ್ನ ಕಾಳಿದಾಸ’, ‘ಶಬ್ದವೇದಿ’ ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಕಿರುತೆರೆಯ ಕಾರ್ಯಕ್ರಮಗಳಲ್ಲಿ ಜಡ್ಜ್ ಆಗಿಯೂ ಅವರು ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಪುನೀತ್ ನಿವಾಸಕ್ಕೆ ಬಂದು ಸಾಂತ್ವನ ಹೇಳಿದ ಜಯಪ್ರದಾ; ಅಪ್ಪು ನೆನೆದು ಕಣ್ಣೀರಿಟ್ಟ ಹಿರಿಯ ನಟಿ
ನಟನೆಯ ಜೊತೆಗೆ ರಾಜಕೀಯದಲ್ಲೂ ಜಯಪ್ರದಾ ಆಸಕ್ತಿ ಬೆಳೆಸಿಕೊಂಡರು. 1994ರಲ್ಲಿ ಅವರು ‘ತೆಲುಗು ದೇಶಂ ಪಕ್ಷ’ ಸೇರಿಕೊಂಡರು. ನಂತರ ಅವರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿ ಸಂಸದೆಯಾದರು. 2019ರಲ್ಲಿ ಅವರು ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡರು.
ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ. ಅಪ್ಡೇಟ್ ತಿಳಿಯಲು ಪುಟ ರೀಫ್ರೆಶ್ ಮಾಡಿ…
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:31 pm, Fri, 11 August 23