
ಬಹುಭಾಷೆಯಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದ ಖ್ಯಾತ ನಟ ಪ್ರತಾಪ್ ಪೋಥೆನ್ (Prathap Pothen) ಅವರು ನಿಧನರಾಗಿದ್ದಾರೆ. ಚೆನ್ನೈನ (Chennai) ಅಪಾರ್ಟ್ಮೆಂಟ್ನಲ್ಲಿ ಅವರ ಶವ ಪತ್ತೆ ಆಗಿದೆ. ಅವರ ನಿಧನಕ್ಕೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಕಂಬನಿ ಮಿಡಿಯುತ್ತಿದ್ದಾರೆ. ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲಿ ಪ್ರತಾಪ್ ಪೋಥೆನ್ ನಟಿಸಿದ್ದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ಹಿರಿಯ ನಟನ ನಿಧನಕ್ಕೆ (Prathap Pothen Death) ಕಾರಣ ಏನು ಎಂಬುದು ಇನ್ನೂ ಪತ್ತೆ ಆಗಿಲ್ಲ. ಅನಾರೋಗ್ಯದಿಂದ ಅವರು ಕೊನೆಯುಸಿರು ಎಳೆದಿರಬಹುದು ಎಂದು ಊಹಿಸಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರತಾಪ್ ಪೋಥೆನ್ ಮೂಲತಃ ಕೇರಳದವರು. ನಟನಾಗಿ, ನಿರ್ದೇಶಕನಾಗಿ ಅವರು ಗುರುತಿಸಿಕೊಂಡಿದ್ದರು. ಮಲಯಾಳಂ ಚಿತ್ರರಂಗದಿಂದ ವೃತ್ತಿಜೀವನ ಆರಂಭಿಸಿದ ಅವರು ನಂತರ ತೆಲುಗು, ತಮಿಳು ಮತ್ತು ಹಿಂದಿಯಲ್ಲೂ ಬ್ಯುಸಿ ಆದರು. 12 ಸಿನಿಮಾಗಳಿಗೆ ಅವರು ನಿರ್ದೇಶನ ಮಾಡಿದ್ದರು.
ಪ್ರತಾಪ್ ಪೋಥೆನ್ ವೈವಾಹಿಕ ಜೀವನ:
ಬಣ್ಣದ ಲೋಕದಲ್ಲಿ ಜನಪ್ರಿಯತೆ ಪಡೆದಿದ್ದ ಪ್ರತಾಪ್ ಪೋಥೆನ್ ಅವರ ಖಾಸಗಿ ಬದುಕಿನಲ್ಲಿ ಅನೇಕ ಏಳು-ಬೀಳುಗಳು ಇದ್ದವು. ನಟಿ ರಾಧಿಕಾ (ರಾಧಿಕಾ ಶರತ್ಕುಮಾರ್) ಜೊತೆ ಅವರು 1985ರಲ್ಲಿ ಮದುವೆ ಆದರು. ಒಂದೇ ವರ್ಷದಲ್ಲಿ ಆ ವಿವಾಹ ಮುರಿದುಬಿತ್ತು. 1990ರಲ್ಲಿ ಕಾರ್ಪೊರೇಟ್ ಕ್ಷೇತ್ರದ ಅಮಲಾ ಸತ್ಯನಾಥ್ ಅವರೊಂದಿಗೆ ಎರಡನೇ ಮದುವೆ ಆದರು. ಈ ಜೋಡಿಗೆ 1991ರಲ್ಲಿ ಹೆಣ್ಣು ಮಗು ಜನಿಸಿತು. 22 ವರ್ಷಗಳ ಬಳಿಕ ಅಮಲಾ ಮತ್ತು ಪ್ರತಾಪ್ ಪೋಥೆನ್ ವಿಚ್ಛೇದನ ಪಡೆದರು.
ನಟನೆ ಮತ್ತು ನಿರ್ದೇಶನಕ್ಕೆ ಸೇರಿ ಒಟ್ಟು ಮೂರು ಬಾರಿ ಪ್ರತಾಪ್ ಪೋಥೆನ್ ಅವರು ಫಿಲ್ಮ್ಫೇರ್ ಪ್ರಶಸ್ತಿ ಪಡೆದುಕೊಂಡಿದ್ದರು. ಅವರು ನಿರ್ದೇಶಿಸಿದ ‘ಮೀಂದು ಒರು ಕಾದಲ್ ಕಥೈ’ ಸಿನಿಮಾ ಗಮನ ಸೆಳೆದಿತ್ತು. 1985ರಲ್ಲಿ ಬಿಡುಗಡೆಯಾದ ಆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಪ್ರತಾಪ್ ಕೊನೆಯದಾಗಿ ಕಾಣಿಸಿಕೊಂಡಿದ್ದು ಮಲಯಾಳಂನ ‘ಸಿಬಿಐ5 ದಿ ಬ್ರೇನ್’ ಸಿನಿಮಾದಲ್ಲಿ. ಇನ್ನೂ ಹಲವು ಚಿತ್ರಗಳ ಕೆಲಸದಲ್ಲಿ ಅವರು ತೊಡಗಿಕೊಂಡಿದ್ದರು. ಅಷ್ಟರಲ್ಲಾಗಲೇ ವಿಧಿವಶರಾಗಿರುವುದು ನೋವಿನ ಸಂಗತಿ.
Rest in peace uncle! I will miss you. ?#PrathapPothen pic.twitter.com/bJcKNWpWgP
— Prithviraj Sukumaran (@PrithviOfficial) July 15, 2022
Rest in peace sir.#rippratappothen pic.twitter.com/eEj0WFeoFz
— VijaySethupathi (@VijaySethuOffl) July 15, 2022
ಅನೇಕ ಸೆಲೆಬ್ರಿಟಿಗಳು ಪ್ರತಾಪ್ ಪೋಥೆನ್ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ. ಪೃಥ್ವಿರಾಜ್ ಸುಕುಮಾರನ್, ಪಾರ್ವತಿ ನಾಯರ್, ವಿಜಯ್ ಸೇತುಪತಿ ಸೇರಿದಂತೆ ಅನೇಕರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
Published On - 11:42 am, Fri, 15 July 22