‘ಗಜಿನಿ 2’ಗೆ ನಿರ್ಮಾಪಕರ ಸಖತ್ ಐಡಿಯಾ, ಸೂರ್ಯ-ಆಮಿರ್ ಖಾನ್ ಒಟ್ಟಿಗೆ ಚಿತ್ರೀಕರಣ
2005 ರಲ್ಲಿ ಬಿಡುಗಡೆ ಆಗಿದ್ದ ಸೂರ್ಯ ನಟನೆಯ ‘ಗಜಿನಿ’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಆ ಸಿನಿಮಾವನ್ನು ಆಮಿರ್ ಖಾನ್ ಹಿಂದಿಯಲ್ಲಿ ರೀಮೇಕ್ ಮಾಡಿದರು ಅಲ್ಲಿಯೂ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಈಗ ‘ಗಜಿನಿ 2’ ಸಿನಿಮಾ ಬರಲಿದ್ದು, ಸೂರ್ಯ ಹಾಗೂ ಆಮಿರ್ ಒಟ್ಟಿಗೆ ನಟಿಸಲಿದ್ದಾರೆ.
‘ಗಜಿನಿ’ ಸಿನಿಮಾ ದಕ್ಷಿಣ ಭಾರತದ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಒಂದು. ಕ್ರಿಸ್ಟೊಫರ್ ನೋಲನ್ ನಿರ್ದೇಶನದ ‘ಮುಮೆಂಟೊ’ ಸಿನಿಮಾದ ಕತೆ ಎತ್ತಿ, ಅದಕ್ಕೆ ಒಂದೊಳ್ಳೆ ಲವ್ ಸ್ಟೋರಿ ಸೇರಿಸಿ ಮುರುಗದಾಸ್ ಕಟ್ಟಿಕೊಟ್ಟಿದ್ದ ‘ಗಜಿನಿ’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಮೂಲ ಸಿನಿಮಾದಲ್ಲಿ ಸೂರ್ಯ, ಆಸಿನ್ ಹಾಗೂ ನಯನತಾರಾ ನಟಿಸಿದ್ದರು. ಸಿನಿಮಾ ಸೂಪರ್ ಹಿಟ್ ಆದ ಬಳಿಕ ಅದೇ ಕತೆಯನ್ನು ಹಿಂದಿಯಲ್ಲಿ ಆಮಿರ್ ಖಾನ್ಗಾಗಿ ನಿರ್ದೇಶನ ಮಾಡಿದ್ದರು ನಿರ್ದೇಶಕ ಮುರುಗದಾಸ್ ಅಲ್ಲಿಯೂ ಸಹ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಇದೀಗ ‘ಗಜಿನಿ 2’ ಸಿನಿಮಾ ನಿರ್ಮಾಣವಾಗುವುದು ಖಾತ್ರಿಯಾಗಿದ್ದು, ಈ ಬಾರಿ ಎರಡು ಭಾಷೆಗಳಲ್ಲಿ ಒಟ್ಟಿಗೆ ಚಿತ್ರೀಕರಣ ನಡೆಯಲಿದೆ.
‘ಗಜಿನಿ 2’ ಸಿನಿಮಾ ಬಗ್ಗೆ ಸ್ವತಃ ನಟ ಸೂರ್ಯ ಖಾತ್ರಿಪಡಿಸಿದ್ದು, ಪಿಂಕ್ವಿಲ್ಲಾ ಜೊತೆ ಈ ವಿಷಯ ಹಂಚಿಕೊಂಡಿದ್ದಾರೆ. ನಿರ್ಮಾಪಕ ಅಲ್ಲು ಅರವಿಂದ್, ‘ಗಜಿನಿ 2’ ಸಿನಿಮಾದಲ್ಲಿ ನಟಿಸಲು ಸಾಧ್ಯವೇ ಎಂದು ಕೇಳಿದರು. ನಾನು ಖಂಡಿತ ನಟಿಸುತ್ತೇನೆ ಎಂದು ಹೇಳಿದ್ದೇನೆ. ಮಾತುಕತೆ ಶುರುವಾಗಿದೆ, ‘ಗಜಿನಿ 2’ ಸಿನಿಮಾ ಖಂಡಿತ ಸಾಧ್ಯವಾಗಲಿದೆ’ ಎಂದಿದ್ದಾರೆ.
‘ಗಜಿನಿ’ ತಮಿಳು ಸಿನಿಮಾವನ್ನು ಸಲೀಂ ಚಂದ್ರಶೇಖರ್ ನಿರ್ಮಾಣ ಮಾಡಿದ್ದರು. ಅದೇ ಸಿನಿಮಾದ ಹಿಂದಿ ರೀಮೇಕ್ ಅನ್ನು ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ತಮ್ಮ ಗೀತಾ ಆರ್ಟ್ಸ್ ನಿರ್ಮಾಣ ಸಂಸ್ಥೆ ಮೂಲಕ ನಿರ್ಮಿಸಿದ್ದರು. ಈಗ ಮತ್ತೆ ಅಲ್ಲು ಅರವಿಂದ್ ಅವರೇ ‘ಗಜಿನಿ 2’ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಎರಡೂ ಭಾಷೆಗಳಲ್ಲಿ ಅವರೇ ನಿರ್ಮಾಣ ಮಾಡಲಿದ್ದು, ಅವರಿಗೆ ಮಧು ಮಂಟೇನಾ ಸಾಥ್ ನೀಡಲಿದ್ದಾರೆ. ಸಿನಿಮಾ ಕುರಿತು ಆಮಿರ್ ಖಾನ್ ಜೊತೆಗೂ ಸಹ ಚರ್ಚೆ ನಡೆದಿದ್ದು, ಆಮಿರ್ ಖಾನ್ ಸಹ ಓಕೆ ಹೇಳಿದ್ದಾರೆ.
ಇದನ್ನೂ ಓದಿ:‘ರೋಲೆಕ್ಸ್’ ಪಾತ್ರದ ಭವಿಷ್ಯ ಏನು? ಸೂರ್ಯ ಕೊಟ್ಟರು ಉತ್ತರ
ಈ ಬಾರಿ ತಮಿಳು ಹಾಗೂ ಹಿಂದಿ ಎರಡೂ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣ ನಡೆಸುವ ಯೋಜನೆಯನ್ನು ಅಲ್ಲು ಅರವಿಂದ್ ಹಾಕಿಕೊಂಡಿದ್ದಾರೆ. ‘ಗಜಿನಿ’ ಸಿನಿಮಾ ನಿರ್ದೇಶನ ಮಾಡಿದ್ದ ಮುರುಗದಾಸ್ ಅವರೇ ‘ಗಜಿನಿ 2’ ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆಮಿರ್ ಖಾನ್ಗೆ ಈಗಾಗಲೇ ಕತೆಯ ಎಳೆಯನ್ನು ಹೇಳಿದ್ದು, ಸ್ಟೋರಿ ಬೋರ್ಡ್ ರೆಡಿ ಮಾಡಿಕೊಂಡು ಬನ್ನಿ ಚರ್ಚಿಸೋಣ ಎಂದಿದ್ದಾರಂತೆ. ಸೂರ್ಯ ಸಹ ಈಗಾಗಲೇ ಸಿನಿಮಾಕ್ಕೆ ಎಸ್ ಹೇಳಿದ್ದು ಮುಂದಿನ ವರ್ಷದ ಅಂತ್ಯದ ವೇಳೆಗೆ ಸಿನಿಮಾ ಪ್ರಾರಂಭ ಆಗುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ